ಉಪ್ಪಿನಂಗಡಿ: ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಆಚರಿಸಲ್ಪಡುವ 48ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಶನಿವಾರದಿಂದ ಸೋಮವಾರದ ವರೆಗೆ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಕೆ. ಸುಧಾಕರ ಶೆಟ್ಟಿ ತಿಳಿಸಿದ್ದಾರೆ.
ಸೆ. 7ರಂದು ಬೆಳಗ್ಗೆ ಶ್ರೀ ಗಣಪತಿ ದೇವರ ವಿಗ್ರಹ ಪ್ರತಿಷ್ಠೆ, ಗಣಹೋಮ ನಡೆದು ಆಟೋಟ ಸ್ಪರ್ಧೆ, ಭಜನಾ ಸೇವೆ, ಭಕ್ತಿಗೀತಾ ಸ್ಪರ್ಧೆ ನಡೆದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ.ಎಸ್ ಪಿ ಗುರುದಾಸ್ ಮಂಗಳೂರು ಇವರಿಂದ ‘ಗಿರಿಜಾ ಕಲ್ಯಾಣ – ಶ್ರೀ ಗಣೇಶ ಮಹಿಮೆ’ ಎಂಬ ಕಥಾ ಕೀರ್ತನೆ ಜರಗಲಿದೆ. ಬಳಿಕ ಮಹಾಪೂಜೆ ನಡೆಯಲಿದೆ.
ಸೆ. 8ರಂದು ಗಣಹೋಮ ಭಜನಾ ಸೇವೆಗಳು ನಡೆದು ಅಪರಾಹ್ನ ‘ವಿಶ್ವರಥ ವಿಶ್ವಾಮಿತ್ರ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸಮಿತಿಯ ಅಧ್ಯಕ್ಷ ಕೆ. ಸುಧಾಕರ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಚಿಂತಕ , ಖ್ಯಾತ ನ್ಯಾಯವಾದಿ ಮಹೇಶ್ ಕಜೆ ಧಾರ್ಮಿಕ ಉಪನ್ಯಾಸವನ್ನು ನೀಡಲಿದ್ದು, ಮುಖ್ಯ ಅತಿಥಿಯಾಗಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾಕ್, ಭಾರತೀಯ ಭೂ ಸೇನೆಯ ಸುಧೀರ್ ಶೆಟ್ಟಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿಯ ಪೌರ ಕಾರ್ಮಿಕರಿಗೆ ಗೌರವ ಸಮರ್ಪಣೆಯು ನಡೆಯಲಿದೆ. ಬಳಿಕ ಶ್ರೀ ದೇವರಿಗೆ ಮಹಾ ರಂಗಪೂಜೆ , ಅನ್ನ ಸಂತರ್ಪಣೆ ಜರಗಲಿದೆ.
ಗಣೇಶ ವಿಗ್ರಹ ವಿಸರ್ಜನೆಯ ಶೋಭಾಯಾತ್ರೆ: ಸೆ.9ರಂದು ಗಣಹೋಮ ಭಜನಾ ಸೇವೆಗಳು ನಡೆದು, ಡಿ.ಪಿ. ಮ್ಯೂಸಿಕಲ್ ರಾಮನಗರ – ಉಪ್ಪಿನಂಗಡಿ ಇವರಿಂದ ರಸಮಂಜರಿ ಕಾರ್ಯಕ್ರಮ ಜರಗಲಿದೆ. ಮಧ್ಯಾಹ ಮಹಾಪೂಜೆಯ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆಯು ನಡೆಯಲಿದೆ. ಸಾಯಂಕಾಲ ಮಹಾಪೂಜೆ ನೆರವೇರಿ ಬಳಿಕ ಶ್ರೀ ದೇವರ ಶೋಭಾಯಾತ್ರೆ ಜರಗಿ ವಿಗ್ರಹದ ವಿಸರ್ಜನೆಯು ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.