ಈಶ್ವರಮಂಗಲ:ಹನುಮಗಿರಿ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೆ.6ರಂದು ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟ ನಡೆಯಿತು.
ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಅತಿಥಿ ನೆಟ್ಟಣಿಗೆ ಮೂಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಫೌಝಿಯಾ ಇಬ್ರಾಹಿಂ ಕಬಡ್ಡಿ ಗ್ರಾಮೀಣ ಕ್ರೀಡೆ,ಎಲ್ಲಾ ಕ್ರೀಡಾಳುಗಳು ಆತ್ಮವಿಶ್ವಾಸದಿಂದ ಆಡಿದಾಗ ಅವರ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಶುಭ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಸಂಚಾಲಕ ಶಿವರಾಂ ಪಿ ಮಾತನಾಡಿ ಮಕ್ಕಳು ತಮ್ಮ ಗುರಿ ತಲುಪುವಲ್ಲಿ ಶಿಕ್ಷಣ ಮತ್ತು ಕ್ರೀಡೆ ಎರಡರಲ್ಲೂ ಶಿಕ್ಷಕರು ಹಾಗೂ ಪೋಷಕರು ಸಹ ಪ್ರೋತ್ಸಾಹಿಸಬೇಕು ಎನ್ನುತ್ತಾ ವಿಜೇತರಾದವರನ್ನು ಅಭಿನಂದಿಸಿದರು.ವಿಜೇತರಾದ ಕ್ರೀಡಾಪಟುಗಳಿಗೆ ಫೌಝಿಯಾ ಇಬ್ರಾಹಿಂ ಬಹುಮಾನ ವಿತರಿಸಿದರು.
ಶ್ರೀ ಗಜಾನನ ಆಂಗ್ಲಮಾಧ್ಯಮ ಶಾಲೆಯ ಬಾಲಕ ಹಾಗೂ ಬಾಲಕಿಯರು ಎರಡೂ ವಿಭಾಗಗಳಲ್ಲೂ ಪ್ರಥಮ ಬಹುಮಾನಗಳನ್ನು ತಮ್ಮದಾಗಿಸಿಕೊಂಡರು.
ಬಾಲಕರ ವಿಭಾಗದಲ್ಲಿ ಹಾರ್ದಿಕ್ ಬಿ ಎಲ್ ಉತ್ತಮ ದಾಳಿಗಾರ ಹಾಗೂ ಮೃದುಲ್ ಬಿ ಉತ್ತಮ ಹಿಡಿತಗಾರ ಆಗಿ ಹೊರಹೊಮ್ಮಿದರೆ, ಬಾಲಕಿಯರ ವಿಭಾಗದಲ್ಲಿ ಅನಘ ಪಿ ಉತ್ತಮ ದಾಳಿಗಾರ್ತಿ ಹಾಗೂ ಸೃಷ್ಟಿ ಎಸ್ ರೈ ಉತ್ತಮ ಹಿಡಿತಗಾರ್ತಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.
ವೇದಿಕೆಯಲ್ಲಿ ಷಣ್ಮುಖ ದೇವ ಪ್ರೌಢಶಾಲೆಯ ಸಂಚಾಲಕ ಶಿವರಾಮ್ ಭಟ್ ಬಿರ್ನಕಜೆ , ಗ್ರೇಡ್ – 1 ದೈಹಿಕ ಶಿಕ್ಷಣ ಶಿಕ್ಷಕರ ಅಧ್ಯಕ್ಷ ಕರುಣಾಕರ ಮಣಿಯಾಣಿ ,ಗ್ರೇಡ್-2 ದೈಹಿಕ ಶಿಕ್ಷಣ ಶಿಕ್ಷಕರ ಅಧ್ಯಕ್ಷ ಸುಧಾಕರ್ ರೈ , ಪ್ರೌಢಶಾಲಾ ವಿಭಾಗದ ನೋಡಲ್ ಅಧಿಕಾರಿ ಸುಧೀರ್, ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲಾಡಳಿತ ಮಂಡಳಿಯ ಸದಸ್ಯ ಜಯರಾಜ್ ರೈ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ, ಗಜಾನನ ಆಂಗ್ಲ ಮಾಧ್ಯಮ ಶಾಲೆ ಈಶ್ವರಮಂಗಲದ ಪ್ರಾಂಶುಪಾಲ ಕೆ ಶಾಮಣ್ಣ ಉಪಸ್ಥಿತರಿದ್ದರು.
ಪ್ರಭಾರ ಮುಖ್ಯ ಶಿಕ್ಷಕಿ ಲತಾ ಡಿ ಕೆ ಸ್ವಾಗತಿಸಿ, ದೈಹಿಕ ಶಿಕ್ಷಕ ಪ್ರಶಾಂತ್ ಕುಮಾರ್ ವಂದಿಸಿ ,ಶಿಕ್ಷಕಿಯರಾದ ಧನಲಕ್ಷ್ಮಿ ಟಿ ರೈ ಮತ್ತು ಶ್ವೇತ ಕಾರ್ಯಕ್ರಮ ನಿರೂಪಿಸಿದರು.