ಹಬ್ಬಗಳ ಆಚರಣೆಯ ಮೂಲ ಸ್ವರೂಪವನ್ನು ಬದಲಾಯಿಸದೆ ಆಚರಿಸುವಂತೆ ಆಗಬೇಕು : ಚಂದ್ರಶೇಖರ ಶೇಟ್

0

ನೆಲ್ಯಾಡಿ : ಹಬ್ಬಗಳ ಆಚರಣೆ ಎನ್ನುವುದು ಹಿಂದೂ ಧರ್ಮದ ಒಂದು ಮಹತ್ವದ ಲಕ್ಷಣ. ಹಿಂದೆ ಕಷ್ಟದ ಹಾಗೂ ಬಡತನದ ದಿನಗಳಲ್ಲಿ ಹಬ್ಬಗಳ ಆಚರಣೆಗಳನ್ನು ಪದ್ದತಿಯಂತೆ ಮನೆಗಳಲ್ಲಿ ಆಚರಿಸುತ್ತಿದ್ದರು. ಹಬ್ಬ ಇದೆ ಎಂಬುದು ತಿಳಿದಾಗ ಮಕ್ಕಳು ಆ ದಿನ ಒಳ್ಳೆಯ ಊಟ ಸಿಗುತ್ತದೆ ಎನ್ನುವುದು ಮಹತ್ವದ ವಿಷಯವಾಗಿತ್ತು. ಇವತ್ತು ಅಂತಹ ಆಸೆಗಳಿಲ್ಲ ಹಬ್ಬದ ದಿನ ಊಟ ಮಾಡಬೇಕಲ್ಲ ಅಂತ ಹೇಳಿ ಮಾಡಿದ ಭಕ್ಷಗಳನ್ನು ತಿನ್ನುತ್ತೇವೆ.. ಆದರೆ ಈಗ ಆರ್ಥಿಕ ಶಕ್ತಿ ಹೆಚ್ಚಿದೆ ಬೇಕಾದ ವ್ಯವಸ್ಥೆಗಳು ಕೈಗೆಟಕುವಂತಿದೆ.

ಅದೇ ರೀತಿ ಮಾನಸಿಕವಾಗಿಯೂ ನಮ್ಮಲ್ಲಿ ಹಬ್ಬಗಳ ಆಚರಣೆಯ ವಿಷಯದಲ್ಲಿ ಬದಲಾವಣೆಗಳಾಗಿದೆ ಇವತ್ತು ಪ್ರತಿದಿನವೂ ಹಬ್ಬವೇ ಆಗಿದೆ ಎಂದು ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯ ಚಂದ್ರಶೇಖರ ಶೇಟ್ ನುಡಿದರು. ಅವರು ಶ್ರೀ ವಿನಾಯಕ ಭಜನಾ ಮಂಡಳಿ (ರಿ.) ರಾಮನಗರ ಬಲ್ಯ, ನೆಲ್ಯಾಡಿ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ, ರಾಮನಗರ ಇದರ ಅಂಟಿ ಆಶ್ರಯದಲ್ಲಿ ನಡೆದ 19 ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಸನಾತನ ಹಿಂದೂ ಧರ್ಮ ಅನಾದಿಕಾಲದಿಂದಲೂ ಇಲ್ಲಿಯವರೆಗೂ ಸಾಗುತ್ತಾ ಬಂದಿದೆ ಎಂದರೆ ನಮ್ಮ ಆಚಾರ ಪದ್ಧತಿಗಳು ಪರಂಪರೆಯು ಪೀಳಿಗೆಯಿಂದ ಪೀಳಿಗೆಗೆ ರವಾನೆ ಆಗುತ್ತಿರುವುದರಿಂದ.
ಹಬ್ಬಗಳ ಆಚರಣೆ ಮನೆಗಳಲ್ಲಿ ಆಗುತ್ತಿತ್ತು ಆನಂತರ ಸಾರ್ವಜನಿಕವಾಗಿ ಅದನ್ನು ಮಾಡುವ ಪದ್ಧತಿ ಬಂತು, ಸಾರ್ವಜನಿಕವಾಗಿ ಮಾಡುವಲ್ಲಿ ಆಕರ್ಷಣೀಯತೆಯನ್ನು ತರಲು ಕ್ರೀಡೆ ಸ್ಪರ್ಧೆ ಇಂಥವುಗಳನ್ನು ಜೋಡಿಸುವುದು ಆ ಮೂಲಕ ಜನರನ್ನು ಸಂಘಟಿಸುವುದು ಇವೆಲ್ಲವೂ ಆಗುತ್ತಿದೆ ಆದರೆ ಹಬ್ಬಗಳ ಆಚರಣೆಯ ಮೂಲ ಸ್ವರೂಪವನ್ನು ಬದಲಾಯಿಸದೆ ಆಚರಿಸುವುದು ಆಗಬೇಕು ಮುಂದಿನ ಪೀಳಿಗೆ ಕೇವಲ ಆಕರ್ಷಣೀಯ ಅಂಶಗಳಿಗೆ ಮಾರುಹೋಗಿ ಮೂಲ ಆಚರಣೆಯನ್ನು ಮರೆತರೆ ಇದು ಹಿಂದೂ ಸಮಾಜಕ್ಕೆ ಒಳ್ಳೆಯದಲ್ಲ.

ಹಿಂದೂ ಸಮಾಜ ಅನಾದಿಕಾಲದಿಂದಲೂ ಬದಲಾದ ಸಾಮಾಜಿಕ ಮನಸ್ಥಿತಿ ಹಾಗೂ ಆಯಾ ಕಾಲಘಟ್ಟದ ಅವಶ್ಯಕತೆಗಳನ್ನು ಗಮನಿಸಿ ಆಗಬೇಕಾದ ಧನಾತ್ಮಕ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ ಬಂದಿರುವುದರಿಂದ ಇವತ್ತು ಹಿಂದೂ ಸಮಾಜ ಪ್ರಸ್ತುತ ಸಾಮಾಜಿಕ ಸವಾಲುಗಳನ್ನು ಸಶಕ್ತವಾಗಿ ಎದುರಿಸುತ್ತಿದೆ.. ಇಂದಿನ ಈ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಆಚರಣೆ ಈ ಕ್ರೀಡಾ ಚಟುವಟಿಕೆಗಳು ಇವೆಲ್ಲವೂ ಈಗಿನ ಕಾಲಘಟ್ಟದ ಅವಶ್ಯಕತೆ ಇದನ್ನು ನಮ್ಮ ಹಿಂದೂ ಸಮಾಜ ಸ್ವೀಕರಿಸುತ್ತದೆ.

ಹಿಂದೂ ಸಮಾಜವು ಮದುವೆ, ಪೂಜಾ ಕಾರ್ಯಗಳಲ್ಲಿ ಧಾರ್ಮಿಕ ಆಚರಣೆಗಳಲ್ಲಿ ಕೆಲವು ವಿಕೃತವಾದ ಆಚರಣೆಗಳನ್ನು ಅಳವಡಿಸಿಕೊಂಡು ಮೂಲ ಧಾರ್ಮಿಕ ಚಿಂತನೆಯನ್ನೇ ಬದಿಗಿರಿಸುತ್ತಿದೆ.. ಇದು ಒಳ್ಳೆಯ ಲಕ್ಷಣವಲ್ಲ.. ಇತ್ತೀಚಿನ ದಿನಗಳಲ್ಲಿ ಕೆಲವು ಮನೆಗಳಲ್ಲಿ ಮಕ್ಕಳ ಹುಟ್ಟು ಹಬ್ಬವನ್ನು ದೀಪ ಉರಿಸುವ ಮೂಲಕ ಆಚರಿಸುವುದು ದೇವಸ್ಥಾನಗಳಿಗೆ ಹೋಗುವುದು ಇವೆಲ್ಲವೂ ಕಂಡು ಬರುತ್ತಿರುವುದು ಸ್ವಾಗತಾರ್ಹ ಅಂಶ..

ಭಜನೆ ಎನ್ನುವುದು ನಮ್ಮಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಜಾಗೃತಗೊಲಿಸಲು ಒಂದು ಉತ್ತಮ ಮಾರ್ಗ.. ಪ್ರತಿ ಮನೆಯಲ್ಲಿಯೂ ಸಂಜೆ ಹೊತ್ತಲ್ಲಿ ದೇವರಿಗೆ ದೀಪವಿಟ್ಟು ಮನೆಯವರೆಲ್ಲ ಸೇರಿ ಅವರಿಗೆ ಬರುವ ಭಜನೆಗಳನ್ನು ಭಕ್ತಿ ಪೂರ್ವಕವಾಗಿ ಹಾಡುವ ಮೂಲಕ ಮನೆಯಲ್ಲಿ ಒಂದು ಸಕಾರಾತ್ಮಕ ವಾತಾವರಣವನ್ನು ನಿರ್ಮಿಸಲು ಸಾಧ್ಯ..
ಮನೆಗಳನ್ನು ಹಿಂದೂ ಮನೆಗಳನ್ನಾಗಿಸಲು ಹಿಂದೂ ಧಾರ್ಮಿಕ ಚಟುವಟಿಕೆಗಳನ್ನು ಮನೆಗಳಲ್ಲಿ ಜೀವಂತವಾಗಿ ಇಡುವ ಮೂಲಕ ಸದೃಢ ಹಿಂದೂ ಸಮಾಜ ನಿರ್ಮಾಣ ಸಾಧ್ಯ ಎಂದರು.

ವೇದಿಕೆಯಲ್ಲಿ ಶ್ರೀ ರಾಮ ಗೆಳೆಯರ ಬಳಗ ರಾಮನಗರ ಇದರ ಅಧ್ಯಕ್ಷ ರಿಷಬ್ ಶೆಟ್ಟಿ ರಾಮನಗರ, ಶ್ರೀ ವಿನಾಯಕ ಭಜನಾ ಮಂಡಳಿ ರಾಮನಗರ ಬಲ್ಯ ಇದರ ಅಧ್ಯಕ್ಷ
ಚಂದ್ರಶೇಖರ ರೈ ರಾಮನಗರ, ನೆಲ್ಯಾಡಿ ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಪೂಜಾರಿ ಉಪಸ್ಥಿತರಿದ್ದರು. ಅಶೋಕ್ ಆಚಾರ್ಯ ಜಾಲ್ಮನೆ ಪ್ರಾರ್ಥಿಸಿದರು. ಕಿರಣ್ ಪುತ್ತಿಲ ಸ್ವಾಗತಿಸಿ, ಶೀನಪ್ಪ ಗೌಡ ಬರೆಮೇಲು ವಂದಿಸಿದರು. ಅಮ್ಮಿ ಗೌಡ ನಾಲ್ಗುತ್ತು ನಿರೂಪಿಸಿದರು

LEAVE A REPLY

Please enter your comment!
Please enter your name here