ಉಪ್ಪಿನಂಗಡಿ: ಖಾಸಗಿ ವ್ಯಕ್ತಿಯೋರ್ವರ ಮನೆಯಿಂದ ತ್ಯಾಜ್ಯ ನೀರು ಹರಿದು ಹೋಗಲು ಸಂಪರ್ಕ ಕಲ್ಪಿಸಿದ್ದ ಪೈಪ್ ಒಡೆದು ಹೋಗಿರುವುದರಿಂದ ಇಲ್ಲಿನ ಪೆರಿಯಡ್ಕದ ರಿಕ್ಷಾ ನಿಲ್ದಾಣ ಪರಿಸರಕ್ಕೆ ತ್ಯಾಜ್ಯ ನೀರು ಹರಿದು ಬರುತ್ತಿದ್ದು, ಪರಿಸರವಿಡೀ ಗಬ್ಬೆದ್ದು ನಾರುವಂತಾಗಿದೆ.
ಇದೇ ಪರಿಸರದ ನಿವಾಸಿಯೋರ್ವರು ತನ್ನ ಮನೆಯಿಂದ ಮಲೀನ ನೀರನ್ನು ಪೈಪ್ ಮೂಲಕ ಚರಂಡಿಗೆ ಹರಿಯಬಿಟ್ಟಿದ್ದರು. ಆದರೆ ಆ ಪೈಪ್ ರಿಕ್ಷಾ ನಿಲ್ದಾಣದ ಬಳಿ ಒಡೆದು ಹೋಗಿದ್ದು, ಇದರಿಂದ ರಿಕ್ಷಾ ನಿಲ್ದಾಣದ ಬಳಿ ಮಲೀನ ನೀರು ಆವರಿಸುವಂತಾಗಿದ್ದು, ಪರಿಸರವಿಡೀ ದುರ್ವಾಸನೆಗೆ ಕಾರಣವಾಗಿದೆ. ಇದರಿಂದ ರಿಕ್ಷಾ ಚಾಲಕರು, ಪ್ರಯಾಣಿಕರು ಸಂಕಷ್ಟವನ್ನೆದುರಿಸುವ ಪರಿಸ್ಥಿತಿ ಬಂದಿದೆ.
ಪೈಪ್ ಅಳವಡಿಸಿದ ವ್ಯಕ್ತಿಯಲ್ಲಿ ಈ ಬಗ್ಗೆ ತಿಳಿಸಿದ್ದರೂ, ಅವರು ಅದರ ದುರಸ್ತಿಗೆ ಮುಂದಾಗದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿರುವ ರಿಕ್ಷಾ ಚಾಲಕರು, ಗ್ರಾ.ಪಂ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.