ಹಿಂದಿ ಶಿಕ್ಷಕರ ಸಂಘದಿಂದ ಹಿಂದಿ ದಿನಾಚರಣೆ, ವಿಶೇಷ ಕಾರ್ಯಾಗಾರ

0

ಪುತ್ತೂರು:ಶಾಲೆಗಳಲ್ಲಿ ಹಿಂದಿ ಭಾಷಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಕೇವಲ ಓದಲು, ಬರೆಯಲು ಮಾತ್ರವೇ ಕಲಿಸುವುದಲ್ಲ. ಅವರಿಗೆ ಹಿಂದಿ ಭಾಷೆ ಮಾತನಾಡುವ ಕಲೆಯನ್ನು ಕಲಿಸುಬೇಕು. ಇದಕ್ಕಾಗಿ ಎಲ್ಲಾ ಶಿಕ್ಷಕರು ವೈಯಕ್ತಿಕ ಪ್ರಯತ್ನ ಮಾಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ವೆಂಕಟೇಶ್ ಸುಬ್ರಾಯ ಪಟಗಾರ ಹೇಳಿದರು.


ದಕ್ಷಿಣ ಕನ್ನಡ ಜಿಲ್ಲಾ ಹಿಂದಿ ಶಿಕ್ಷಕರ ಸಂಘ, ತಾಲೂಕು ಹಿಂದಿ ಶಿಕ್ಷಕರ ಸಂಘದ ಆಶ್ರಯದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ಸೆ.20ರಂದು ಮಾಯಿದೇ ದೇವುಸ್ ಚರ್ಚ್ ಹಾಲ್‌ನಲ್ಲಿ ನಡೆದ ಹಿಂದಿ ದಿನಾಚರಣೆ ಹಾಗೂ ವಿಷಯ ಸಂಬಂಧಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗಣಿತ, ವಿಜ್ಞಾನದಷ್ಟೇ ಹಿಂದಿಗೂ ಆದ್ಯತೆ ನೀಡಬೇಕು. ಹಿಂದಿಯಲ್ಲಿ ಶೇ.100 ಅಂಕದ ಜೊತೆಗೆ ವಿದ್ಯಾರ್ಥಿಗಳಲ್ಲಿ ಹಿಂದಿ ಮಾತನಾಡವುದನ್ನು ಕಲಿಸಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಸಮಗ್ರವಾದ ಶಿಕ್ಷಣ ನೀಡಿ ಸಮಾಜಕ್ಕೆ ಅರ್ಪಿಸುವ ಸಂಕಲ್ಪ ಮಾಡಬೇಕು. ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು. ಯಾವ ವಿದ್ಯಾರ್ಥಿಯನ್ನು ಕಡೆಗಣಿಸಬಾರದು. ಕಟ್ಟ ಕಡೆಯ ವಿದ್ಯಾರ್ಥಿಗಳನ್ನೂ ಮುಖ್ಯ ವಾಹಿಣಿಗೆ ತರುವ ಕೆಲಸವಾಗಬೇಕು. ಶಿಕ್ಷಕರು ಸವಾಲಾಗಿ ಕೆಲಸ ಮಾಡಬೇಕು. ಹೊಸತನಗಳೊಂದಿಗೆ ಪರಿಣಾಮಕಾರಿಯಾಗಿ ಕಲಿಸಬೇಕು. ಕನಿಷ್ಠ ಒಂದು ಮಗುವಿಗೆ ಕಲಿಸುವ ಪ್ರಯತ್ನ ಮಾಡುವ ಮೂಲಕ ತಮ್ಮ ವೃತ್ತಿಯಲ್ಲಿ ತೃಪ್ತಿ ಕಾಣಬೇಕು ಎಂದರು.


ಮಾಯಿದೇ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ಲಾರೆನ್ಸ್ ಮಸ್ಕರೇನಸ್ ಮಾತನಾಡಿ, ಹಿಂದಿ ಭಾಷಾ ಶಿಕ್ಷಕರು ರಾಷ್ಟ್ರೀಯ ಭಾಷೆ ಬೋದಿಸುವ ಶಿಕ್ಷಕರು. ರಾಷ್ಟ್ರೀಯ ಭಾಷೆಯ ಜ್ಞಾನ ಮೂಡಿಸಿ ಮಕ್ಕಳಲ್ಲಿ ರಾಷ್ಟ್ರ ಪ್ರೇಮ, ರಾಷ್ಟ್ರ ಭಾಷೆಯ ಮಹತ್ವವನ್ನು ತಿಳಿಸಿ ರಾಷ್ಟ್ರದ ಸಂಪತ್ತು ಅಗಿ ಬೆಳೆಸಿ, ಮಕ್ಕಳ ಭವಿಷ್ಯ ರೂಪಿಸುವ ಹಿಂದಿ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು. ಎಲ್ಲಾ ಭಾಷೆಗಳಿಗೂ ಅದರದ್ದೇ ಆದ ಮಹತ್ವವಿದೆ. ಭಾಷೆಯಲ್ಲಿ ಮೇಲು, ಕೀಳು ಎಂಬುದಿಲ್ಲ. ಮಾತನಾಡುವ ಶೈಲಿಯಲ್ಲಿ ವ್ಯತ್ಯಾಸ ಮಾತ್ರವಿದೆ ಎಂದರು.


ವಿವೇಕಾನಂದ ಮಹಾವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥೆ ದುರ್ಗಾರತ್ನ ವಿಶೇಷ ಉಪನ್ಯಾಸ ನೀಡಿದರು. ಹಿಂದಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷೆ ಗೀತಾ ಕುಮಾರಿ ಎನ್.ಬಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಡಯೆಟ್‌ನ ಹಿರಿಯ ಉಪನ್ಯಾಸಕ ಶಶಿಧರ್ ಜಿ.ಎಸ್., ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಸಂತ ವಿಕ್ಟರ್ ಬಾಲಿಕ ಪ್ರೌಢಶಾಲಾ ಮುಖ್ಯಗುರು ರೋಸಲಿನ್ ಲೋಬೋ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ, ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಮೊದಮ್ಮದ್ ಸಾಹೇಬ್, ಶಿಕ್ಷಣ ಸಂಯೋಜಕ ಹರಿಪ್ರಸಾದ್, ಜಿಲ್ಲಾ ಕೋಶಾಧಿಕಾರಿ ರಮಾನಂದ, ಮಂಗಳೂರು ಉತ್ತರದ ಅಧ್ಯಕ್ಷ ಮಹೇಶ್, ಸುಳ್ಯ ತಾಲೂಕು ಅಧ್ಯಕ್ಷ ಗದಾಧರ್, ಬಂಟ್ವಾಳ ತಾಲೂಕು ಅಧ್ಯಕ್ಷ ಶಂಕರ್, ಬೆಳ್ತಂಗಡಿ ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸನ್ಮಾನ:
ನಿವೃತ್ತ ಹಿಂದಿ ಶಿಕ್ಷಕರಾದ ಪ್ರವೀಣ ಕುಮಾರಿ, ರಾಯಿ ರಾಜ್ ಕುಮಾರ್, ಫ್ರಾನ್ಸಿಸ್ ಹಾಗೂ ಭಾಸ್ಕರ್ ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಿದರು.
ಹಿಂದಿ ಶಿಕ್ಷಕರಾದ ಸುಪ್ರಭಾ, ಅಮೃತವಾಣಿ, ಸರಸ್ವತಿ, ಮೋಹಿನಿ ಪ್ರಾರ್ಥಿಸಿದರು. ಜಿಲ್ಲಾ ಅಧ್ಯಕ್ಷೆ ಗೀತಾ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಅಧ್ಯಕ್ಷ ವೆಂಕಟೇಶ್ ವರದಿ ವಾಚಿಸಿದರು. ಮಂಗಳೂರು ಬಲ್ಮಠ ಪದವಿ ಪೂರ್ವ ಕಾಲೇಜಿನ ಹಿಂದಿ ಉಪನ್ಯಾಸಕಿ ಕವಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಪುತ್ತೂರು ಸಂಘದ ಅಧ್ಯಕ್ಷ ರೊನಾಲ್ಡ್ ವಂದಿಸಿದರು.

LEAVE A REPLY

Please enter your comment!
Please enter your name here