ಪುತ್ತೂರು: ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಸವಣೂರು ಸ.ಪ.ಪೂ.ಕಾಲೇಜ್ ಮತ್ತು ಪ್ರೌಢ ಶಾಲಾ ವಿಭಾಗದ ಒಟ್ಟು 12 ವಿದ್ಯಾರ್ಥಿಗಳಿಗೆ ಸವಣೂರು ಪ.ಪೂ.ಕಾಲೇಜಿನ ಕಟ್ಟಡ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪಿ.ಡಿ.ಕೃಷ್ಣ ಕುಮಾರ್ ರೈ ದೇವಸ್ಯ ಅವರ ಪ್ರಾಯೋಜಕತ್ವದಲ್ಲಿ ಪುತ್ತೂರು ರೋಟರಿ ಕ್ಲಬ್ ವತಿಯಿಂದ ಪ್ರತಿಭಾ ಪುರಸ್ಕಾರ ಸಮಾರಂಭ ಸೆ.26 ರಂದು ಸವಣೂರು ಪ.ಪೂ.ಕಾಲೇಜ್‌ನ ಸಭಾಭವನದಲ್ಲಿ ಜರಗಿತು. ವಿದ್ಯಾರ್ಥಿಗಳು ನಗದು ಹಣವನ್ನು ಪ್ರತಿಭಾ ಪುರಸ್ಕಾರದಲ್ಲಿ ಪಡೆದುಕೊಂಡರು.
ಸಮಾಜ ಸೇವೆ ನಿರಂತರ- ಡಾ.ಶ್ರೀಪತಿ ರಾವ್
ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಡಾ.ಶ್ರೀಪತಿ ರಾವ್‌ರವರು ಮಾತನಾಡಿ ರೋಟರಿ ಕ್ಲಬ್ ಮೂಲಕ ಸಮಾಜ ಸೇವಾ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಕೃಷ್ಣಕುಮಾರ್ ರೈಯವರು ರೋಟರಿ ಕ್ಲಬ್ ಮುಖಾಂತರ ಸವಣೂರಿನ ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹವನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.
ವಾಟ್ಸಪ್ ಚಟದಿಂದ ದೂರ ಇರಿ- ಕೃಷ್ಣಕುಮಾರ್ ರೈ
ಸವಣೂರು ಸ.ಪ.ಪೂ.ಕಾಲೇಜಿನ ಕಟ್ಟಡ ಸಮಿತಿಯ ಅಧ್ಯಕ್ಷ ಸಮಿತಿಯ ಅಧ್ಯಕ್ಷ ಪಿ.ಡಿ.ಕೃಷ್ಣಕುಮಾರ್ ರೈ ದೇವಸ್ಯ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಅವಶ್ಯಕತೆ ಇದ್ದಲ್ಲಿ ಮಾತ್ರ ಮೊಬೈಲ್ ಬಳಕೆಯನ್ನು ಮಾಡಿ, ವಾಟ್ಸಪ್ಪಿನ ಚಟದಿಂದ ದೂರ ಇರುವಂತೆ ಸಲಹೆ ನೀಡಿದರು.
ರೋಟರಿ ಕ್ಲಬ್‌ನ ಪೂರ್ವ ಆಸ್ಟಿಸೆಂಟ್ ಗವರ್ನರ್ ಜಗಜೀವನ್‌ದಾಸ್ ರೈ ಚಿಲ್ಲೆತ್ತಾರು, ಸವಣೂರು ಪ.ಪೂ.ಕಾಲೇಜಿನ ಕಾರ್‍ಯಧ್ಯಕ್ಷ ಗಿರಿಶಂಕರ್ ಸುಲಾಯ ದೇವಸ್ಯ, ರೋಟರಿ ಕ್ಲಬ್ ಕಾರ್‍ಯದರ್ಶಿ ದಾಮೋದರ್ ಮಾತನಾಡಿದರು. ವೇದಿಕೆಯಲ್ಲಿ ರೋಟರಿ ಕ್ಲಬ್‌ನ ಶ್ರೀಧರ್ ಕಣಜಾಲು, ಸವಣೂರು ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ರಘು ಬಿ.ಆರ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಶರಣ್ಯ ಮತ್ತು ಬಳಗ ಪ್ರಾರ್ಥನೆಗೈದರು. ಸವಣೂರು ಸ.ಪ.ಪೂ.ಕಾಲೇಜಿನ ಪ್ರಾಂಶುಪಾಲೆ ಪದ್ಮಾವತಿ ಎನ್.ಪಿ, ಸ್ವಾಗತಿಸಿ, ಪ್ರೌಢಶಾಲಾ ವಿಭಾಗದ ಶಿಕ್ಷಕ ಕಿಶನ್ ಬಿ.ವಿ ವಂದಿಸಿದರು. ಉಪನ್ಯಾಸಕ ರಾಜೀವ ಶೆಟ್ಟಿ ಕಾರ್‍ಯಕ್ರಮ ನಿರೂಪಿಸಿದರು.