ಮುಂದಿನ ವರ್ಷದೊಳಗೆ ಎಲ್ಲ ಗ್ರಾಮ ಆಡಳಿತಾಧಿಕಾರಿಗಳಿಗೂ ಟ್ಯಾಬ್
ಗ್ರಾಮ ಆಡಳಿತಾಧಿಕಾರಿಗಳಿಗೆ ಸರಕಾರಿ ಕಚೇರಿ-ಸೂಕ್ತ ಕ್ರಮ
ಅಂತರ್ಜಿಲ್ಲೆ ವರ್ಗಾವಣೆ ವಾರದೊಳಗೆ ಕ್ರಮಕ್ಕೆ ಸೂಚನೆ
ಬೆಂಗಳೂರು:ಗ್ರಾಮ ಆಡಳಿತ ಅಧಿಕಾರಿಗಳ ಕೆಲಸದ ಒತ್ತಡಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದರು.
ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆ ಕುರಿತಂತೆ ವಿಕಾಸಸೌಧದಲ್ಲಿ ರಾಜ್ಯ ಗ್ರಾಮ ಆಡಳಿತ ಅಽಕಾರಿಗಳ ಸಂಘದ ಅಧ್ಯಕ್ಷರು, ಕಾರ್ಯಾಧ್ಯಕ್ಷರು, ಪದಾಧಿಕಾರಿಗಳ ಜೊತೆ ಚರ್ಚೆ ನಡೆಸಿದ ಬಳಿಕ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಗ್ರಾಮ ಆಡಳಿತ ಅಧಿಕಾರಿಗಳಿಗೆ ಕೆಲಸದ ಹೊರೆ ಅಧಿಕವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.ಅವರ ಶ್ರಮವಿಲ್ಲದೆ ಬರ ಸಂದರ್ಭದಲ್ಲಿ ‘ಫ್ರೂಟ್ಸ್’ ಮೂಲಕ ನೈಜ ದತ್ತಾಂಶಗಳನ್ನು ಪಡೆದು ರೈತರ ಖಾತೆಗೆ ನೇರವಾಗಿ ಬರ ಪರಿಹಾರ ತಲುಪಿಸುವುದು ಸಾಧ್ಯವಾಗುತ್ತಿರಲಿಲ್ಲ.ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾದ ಬೀಟ್ ಆಪ್ ಹಾಗೂ ಆಧಾರ್ ಸೀಡಿಂಗ್ ಹಾಗೂ ಫೌತಿ ಖಾತೆ ಅಭಿಯಾನದಲ್ಲೂ ಗ್ರಾಮ ಆಡಳಿತ ಅಧಿಕಾರಿಗಳ ಪಾತ್ರ ಮಹತ್ವವಾದದ್ದು.ಹೀಗಾಗಿ ಮುಂದಿನ ದಿನಗಳಲ್ಲಿ ಏಕ ಕಾಲದಲ್ಲಿ ಎಲ್ಲ ಅಭಿಯಾನಗಳಿಗೂ ಒಟ್ಟಿಗೆ ಚಾಲನೆ ನೀಡದೆ, ಅವರ ಕೆಲಸದ ಒತ್ತಡಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ಇಂದಿನ ಸಭೆಯಲ್ಲಿ ಭರವಸೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಮುಂದಿನ ವರ್ಷದೊಳಗೆ ಟ್ಯಾಬ್ ನೀಡಲು ಇಲಾಖೆ ಬದ್ಧ:
ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೊಬೈಲ್ ಅಥವಾ ಲ್ಯಾಪ್ಟಾಪ್ ನೀಡಬೇಕು ಎಂಬ ಬೇಡಿಕೆ ಇದೆ.ಸರಕಾರವೂ ಈಗಾಗಲೇ ಈ ಬಗ್ಗೆ ಚಿಂತನೆ ನಡೆಸಿದೆ.ಫೀಲ್ಡ್‌ನಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಲ್ಯಾಪ್ ಟಾಪ್-ಮೊಬೈಲ್ ಎರಡೂ ರೀತಿ ಕೆಲಸ ಮಾಡಬಲ್ಲ ಟ್ಯಾಬ್ ನೀಡುವ ಬಗ್ಗೆ ಚಿಂತಿಸಲಾಗಿದೆ.ಈಗಾಗಲೇ ಸಣ್ಣ ಪ್ರಮಾಣದಲ್ಲಿ ಅಧಿಕಾರಿಗಳಿಗೆ ಟ್ಯಾಬ್ ವಿತರಿಸಲಾಗಿದ್ದು, ಮುಂದಿನ ವರ್ಷದೊಳಗೆ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳಿಗೂ ಟ್ಯಾಬ್ ನೀಡಲು ಸರಕಾರ ಹಾಗೂ ಇಲಾಖೆ ಬದ್ಧವಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಗ್ರಾಮ ಆಡಳಿತಾಧಿಕಾರಿಗಳಿಗೆ ಕಚೇರಿ-ಸೂಕ್ತ ಕ್ರಮ:
ಗ್ರಾಮ ಆಡಳಿತ ಅಧಿಕಾರಿಗಳಿಗೂ ಸರಕಾರಿ ಕಚೇರಿ ನಿರ್ಮಿಸಬೇಕು, ಮೂಲಭೂತ ಸೌಲಭ್ಯ ಒದಗಿಸಬೇಕು ಎಂಬ ಪ್ರಮುಖ ಬೇಡಿಕೆ ಇದೆ. ಸರಕಾರಿ ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಕೆಲಸ ಮಾಡಬೇಕು ಎಂಬ ವಿಚಾರದಲ್ಲಿ ನನ್ನ ಅಭಿಪ್ರಾಯವೂ ಅದೇ ಆಗಿದೆ.ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವ ಬಗ್ಗೆ ಭರವಸೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಅಂತರ್ಜಿಲ್ಲೆ ವರ್ಗಾವಣೆ ವಾರದೊಳಗೆ ಕ್ರಮಕ್ಕೆ ಸೂಚನೆ:
ಪತಿ-ಪತ್ನಿ ಪ್ರಕರಣದಲ್ಲಿ ಅಂತರ್ ಜಿಲ್ಲೆ ವರ್ಗಾವಣೆ ನೀಡುವ ಸಂಬಂಧ ‘ಕೆಸಿಎಸ್‌ಆರ್ 16ಎ’ ನಿಯಮದ ಅನ್ವಯ ನಿಯಮಬದ್ಧವಾಗಿ ಬಂದಿರುವ ಪ್ರಸ್ತಾವನೆಗಳ ಕುರಿತು ಮುಂದಿನ ವಾರದೊಳಗೆ ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಗ್ರಾಮ ಆಡಳಿತ ಅಧಿಕಾರಿಗಳನ್ನು ಅನಗತ್ಯವಾಗಿ ಎಸಿ, ಡಿಸಿ ಕಚೇರಿಗಳಿಗೆ ಮಾಡಲಾಗಿರುವ ಡೆಪ್ಯುಟೇಷನ್ (ನಿಯೋಜನೆ) ರದ್ದುಗೊಳಿಸುವ ಸಂಬಂಧ ಈಗಾಗಲೇ ಸಂಬಂಧಿತ ಅಽಕಾರಿಗಳಿಗೆ ಸೂಚನೆ ನೀಡಲಾಗಿದೆ.ಉಳಿದಂತೆ ಗ್ರಾಮ ಆಡಳಿತ ಅಧಿಕಾರಿಗಳ ಎಲ್ಲ ಬೇಡಿಕೆಗಳಿಗೂ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸರಕಾರದಿಂದ ಸಾಧ್ಯವಾಗುವ ಎಲ್ಲ ಬೇಡಿಕೆಗಳ ಬಗ್ಗೆಯೂ ಚಿಂತಿಸಿ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಲಾಗಿದೆ ಎಂದೂ ಸಚಿವರು ಹೇಳಿದರು.ಸಭೆಯಲ್ಲಿ ಕಂದಾಯ ಇಲಾಖೆ ಆಯುಕ್ತ ಸುನೀಲ್ ಕುಮಾರ್ ಸೇರಿದಂತೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳೂ ಭಾಗಿಯಾಗಿದ್ದರು.
ಆಮ್ಲನ್ ಆದಿತ್ಯ ಬಿಸ್ವಾಸ್‌ಗೆ ಜವಾಬ್ದಾರಿ
ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಗಳನ್ನು ಪರಿಶೀಲಿಸುವ ಸಂಬಂಧ ಹಿರಿಯ ಐಎಎಸ್ ಅಧಿಕಾರಿ ಬೆಂಗಳೂರು ವಲಯದ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.ಹೀಗಾಗಿ ಅವರು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಪದಾಧಿಕಾರಿಗಳ ಜೊತೆ ಚರ್ಚಿಸಲಿದ್ದಾರೆ.ಆಮ್ಲನ್ ಆದಿತ್ಯ ಬಿಸ್ವಾಸ್ ಅವರ ಮಾರ್ಗದರ್ಶನದಂತೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.