ಗ್ರಾಮ ಆಡಳಿತಾಧಿಕಾರಿಗಳ ಮುಂದುವರಿದ ಮುಷ್ಕರ-ಕಂದಾಯ ಸೇವೆಯಲ್ಲಿ ವ್ಯತ್ಯಯ

0

ಪುತ್ತೂರು:ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ ಮುಂದುವರೆದಿರುವುದರಿಂದ ಕಂದಾಯ ಸೇವೆಯಲ್ಲಿ ವ್ಯತ್ಯಯವಾಗಿ ನಾಗರಿಕರು ಸಮಸ್ಯೆ ಎದುರಿಸುವಂತಾಗಿದೆ.

ಗ್ರಾಮ ಆಡಳಿತಾಧಿಕಾರಿಗಳ ಸಂಘದ ಪದಾಧಿಕಾರಿಗಳೊಂದಿಗೆ ರಾಜ್ಯ ಕಂದಾಯ ಸಚಿವ ಕೃಷ್ಣಬೈರೇ ಗೌಡರು ನಡೆಸಿರುವ ಮಾತುಕತೆ ಫಲಪ್ರದವಾಗದ ಹಿನ್ನೆಲೆಯಲ್ಲಿ ಪರಿವರ್ತಿತ ರಜೆಯಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ ಮುಂದುವರಿದು ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಿದೆ.


ರಾಜ್ಯಾದ್ಯಂತ ಗ್ರಾಮ ಆಡಳಿತಾಧಿಕಾರಿಗಳ ಪರಿವರ್ತಿತ ರಜೆಯ ಮುಷ್ಕರ ನಡೆಯುತ್ತಿರುವುದರಿಂದ ಸಾರ್ವಜನಿಕರು ಬಹಳಷ್ಟು ಸಮಸ್ಯೆ ಎದುರಿಸುವಂತಾಗಿದೆ.ರಾಜ್ಯ ಸಂಘದ ಕರೆಯಂತೆ ಸೆ.26ಕ್ಕೆ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿಯೂ ಗ್ರಾಮ ಆಡಳಿತಾಧಿಕಾರಿಗಳು ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.ಎರಡನೇ ದಿನ ಜಿಲ್ಲಾಧಿಕಾರಿ ಕಚೇರಿ ಬಳಿ ಜಿಲ್ಲಾ ಮಟ್ಟದಲ್ಲಿ ಮುಷ್ಕರ ನಡೆದಿತ್ತು.ಸೆ.30ಕ್ಕೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಗ್ರಾಮ ಆಡಳಿತಾಧಿಕಾರಿಗಳ ರಾಜ್ಯ ಸಂಘದ ಅಧ್ಯಕ್ಷ ಯೋಗೀಶ್ ನಾಯ್ಕ್ ಮತ್ತು ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಗ್ರಾಮ ಆಡಳಿತಾಧಿಕಾರಿಗಳ ಸಮಸ್ಯೆ,ಬೇಡಿಕೆ ಆಲಿಸಿದ್ದರು.ಆದರೆ, ಮಾತುಕತೆ ಫಲಪ್ರದವಾಗದೇ ಇರುವುದರಿಂದ ಅ.1ರಂದೂ ಮುಷ್ಕರ ಮುಂದುವರಿದಿದೆ.ತಮ್ಮ ಪ್ರಮುಖ ಬೇಡಿಕೆಯೇ ಈಡೇರಿಲ್ಲ ಎಂದು ಮುಷ್ಕರ ಮುಂದುವರಿಸಿರುವ ಗ್ರಾಮ ಆಡಳಿತಾಧಿಕಾರಿಗಳು ಬೇಡಿಕೆ ಈಡೇರಿಕೆ ಆಗುವ ತನಕ ಮುಷ್ಕರ ಮುಂದುವರಿಸಲು ತೀರ್ಮಾನಿಸಿರುವಂತೆ ಪರಿವರ್ತಿತ ರಜೆಯಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here