ಸಖತ್ ಸದ್ದು ಮಾಡುತ್ತಿದೆ ಬೆಳ್ಳಿಪ್ಪಾಡಿಯ ರಕ್ಷಿತ್ ಕುಮಾರ್ ನಿರ್ದೇಶನದ ಜಂಗಲ್ ಮಂಗಲ್ ಸಿನಿಮಾ

0

ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಕೈಪ ನಿವಾಸಿ ರಕ್ಷಿತ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರಲಿರುವ ಜಂಗಲ್ ಮಂಗಲ್ ಎಂಬ ವಿಶಿಷ್ಟ ಶೀರ್ಷಿಕೆಯ ಚಿತ್ರ ಸಖತ್ ಸದ್ದು ಮಾಡುತ್ತಿದೆ. ಚಿತ್ರದ ಮೊದಲ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದ್ದು ಚಿತ್ರ ಬಹಳಷ್ಟು ಕುತೂಹಲ ಮೂಡಿಸಿದೆ.


ಸಲಗ, ಕೆ.ಜಿ.ಫ್ ಮುಂತಾದ ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಖಡಕ್ ವಿಲನ್ ಆಗಿ ಹೆಸರುವಾಸಿಯಾಗಿರುವ ಹಾಗೂ ಇತ್ತೀಚೆಗೆ ಬಿಡುಗಡೆಯಾದ ಸರ್ಕಸ್ ಎಂಬ ತುಳು ಚಿತ್ರದಲ್ಲಿಯೂ ಖಳನಾಯಕನಾಗಿ ನಟಿಸಿ ಜನಮನ ಗೆದ್ದಿರುವ ಯಶ್ ಶೆಟ್ಟಿ ಅವರು ಜಂಗಲ್ ಮಂಗಲ್ ಸಿನಿಮಾದಲ್ಲಿ ನಾಯಕ ನಟನಾಗಿದ್ದು ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ಕೈಪ ನಿವಾಸಿ ರಕ್ಷಿತ್ ಕುಮಾರ್ ನಿರ್ದೇಶಕರಾಗಿದ್ದಾರೆ. ಚಿತ್ರದ ಛಾಯಾಗ್ರಾಹಕ ವಿಷ್ಣು ಪ್ರಸಾದ್ ಹಾಗೂ ಸಂಗೀತ ನಿರ್ದೇಶಕ ಪ್ರಸಾದ್ ಕೆ ಶೆಟ್ಟಿರವರೂ ಪುತ್ತೂರಿನವರೇ ಎಂಬುದು ಚಿತ್ರದ ವಿಶೇಷವಾಗಿದೆ. ಕಾಂತಾರ ಖ್ಯಾತಿಯ ದೀಪಕ್ ರೈ ಪಾಣಾಜೆ, ಬಿಗ್‌ಬಾಸ್ ಖ್ಯಾತಿಯ ಉಗ್ರಂ ಮಂಜು ಮುಂತಾದ ಅನೇಕ ಅನುಭವಿ ತಾರಾಗಣ ಹೊಂದಿರುವ ಈ ಚಿತ್ರವನ್ನು ಕನ್ನಡದ ಹೆಸರಾಂತ ನಿರ್ದೇಶಕ ಸಿಂಪಲ್ ಸುನಿ ಅವರು ಅರ್ಪಿಸುತ್ತಿದ್ದಾರೆ.


ಕಾಡಿನಿಂದ ಸುತ್ತುವರಿದಿರುವ ಸಣ್ಣ ಊರೊಂದರಲ್ಲಿ ನಡೆಯುವ ಮಜವಾದ ಘಟನೆಯನ್ನು ಒಳಗೊಂಡಿರುವ ಚಿತ್ರ ಇದಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಸುತ್ತಮುತ್ತ ಸಂಪೂರ್ಣವಾಗಿ ಚಿತ್ರೀಕರಣ ನಡೆದು ಬಿಡುಗಡೆಗೆ ತಯಾರಿಯಲ್ಲಿದೆ.

ಚಿತ್ರದ ನಿರ್ದೇಶಕ ರಕ್ಷಿತ್ ಕುಮಾರ್ ಅವರು ಬೆಳ್ಳಿಪ್ಪಾಡಿ ಗ್ರಾಮದ ಕೈಪ ನಿವಾಸಿಗಳಾದ ರಾಘವೇಂದ್ರ ರೈ ಮತ್ತು ಲಕ್ಷ್ಮಿ ರೈಯವರ ಪುತ್ರರಾಗಿದ್ದು ಪುತ್ತೂರಿನ ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದು ಬಳಿಕ ಬಿಬಿಎಂವರೆಗೆ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಪಡೆದಿದ್ದಾರೆ. ನಂತರ ವಿವಿಧ ಕನ್ನಡ ಹಾಗೂ ತುಳು ಚಿತ್ರಗಳಲ್ಲಿ ಬರಹಗಾರರಾಗಿ, ಸಹನಿರ್ದೇಶಕರಾಗಿ, ತಂತ್ರಜ್ಞರಾಗಿ ಕಾರ್ಯ ನಿರ್ವಹಿಸಿದ್ದು ಇದೀಗ ಜಂಗಲ್ ಮಂಗಲ್ ಸಿನಿಮಾದ ನಿರ್ದೇಶಕರಾಗಿದ್ದಾರೆ.

LEAVE A REPLY

Please enter your comment!
Please enter your name here