ಎಪಿಎಂಸಿ ವಸತಿಗೃಹದಲ್ಲಿ ಹೊರಗುತ್ತಿಗೆ ಸಿಬ್ಬಂದಿ ಅನಧಿಕೃತ ವಾಸವಿದ್ದ ಮನೆಗೆ ಬೀಗ ಹಾಕಿದ ಪ್ರಕರಣ-ಸಂತ್ರಸ್ಥ ಮಹಿಳೆ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲು

0

ಪುತ್ತೂರು: ಎಪಿಎಂಸಿ ಪ್ರಾಂಗಣದಲ್ಲಿರುವ ಸರಕಾರಿ ವಸತಿಗೃಹದಲ್ಲಿ ಹೊರಗುತ್ತಿಗೆ ಸಿಬ್ಬಂದಿ ಅನಧಿಕೃತವಾಗಿ ವಾಸವಾಗಿದ್ಧಾರೆ ಎಂಬ ಆರೋಪದಲ್ಲಿ ಮನೆಗೆ ಬೀಗ ಜಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥೆ ವಿಕಲಚೇತನ ಮಹಿಳೆ ಮಧ್ಯರಾತ್ರಿ ತನಕ ಒಂಟಿಯಾಗಿ ಮನೆ ಹೊರಗಡೆ ಕುಳಿತಿದ್ದು, ಬಳಿಕ ಸಂತ್ರಸ್ಥ ಮಹಿಳೆ ಅಸ್ವಸ್ಥ್ಥಗೊಂಡು ರಾತ್ರಿ ಖಾಸಗಿ ಆಸ್ಪತ್ರೆಗೆ ದಾಖಲುಗೊಂಡಿರುವ ಘಟನೆ ನಡೆದಿದೆ.


ಎಪಿಎಂಸಿಯ ಹೊರಗುತ್ತಿಗೆ ಸಿಬ್ಬಂದಿ ಜಾನಕಿ ಆಸ್ಪತ್ರೆಗೆ ದಾಖಲಾದವರು. ಎಪಿಎಂಸಿ ಪ್ರಾಂಗಣದಲ್ಲಿರುವ ವಸತಿ ಗೃಹದಲ್ಲಿ ಎಪಿಎಂಸಿ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಚೇರಿ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಕಳೆದ ಒಂದೂವರೆ ವರ್ಷಗಳಿಂದ ವಸತಿ ಗೃಹದಲ್ಲಿ ವಾಸ್ತವ್ಯವಿದ್ದರು. ಸರಕಾರಿ ಅಧಿಕಾರಿ, ಸಿಬ್ಬಂದಿಗಳಿಗೆ ಸೀಮಿತವಾದ ವಸತಿ ಗೃಹದಲ್ಲಿ ಇಲಾಖೆಯ ನಿಯಮಾನುಸಾರ ಇತರರಿಗೆ ಅವಕಾಶ ಇಲ್ಲದ ಕಾರಣ ಮನೆ ತೆರವುಗೊಳಿಸುವಂತೆ ನೊಟೀಸ್ ನೀಡಿದ್ದರು. ಅಲ್ಲದೆ ಮೂರು ದಿನಗಳ ಹಿಂದೆ ಮನೆಗೆ ನೊಟೀಸ್ ಅಂಟಿಸಿದ್ದರು. ಆಡಳಿತಾಧಿಕಾರಿಯಾಗಿರುವ ತಹಶಿಲ್ದಾರ್ ನಿರ್ದೇಶನದಂತೆ ಅ.16ರಂದು ಕಾರ್ಯದರ್ಶಿ ಎಂ.ಸಿ ಪಡಗನೂರ ನೇತೃತ್ವದಲ್ಲಿ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಮನೆ ಹಾಗೂ ಅದರ ಗೇಟ್‌ಗೆ ಬೀಗ ಜಡಿದು ಸೀಲ್ ಹಾಕಿದ್ದರು.


ಅಸ್ವಸ್ಥಗೊಂಡು ಸಂತ್ರಸ್ಥ ಮಹಿಳೆ-ಆಸ್ಪತ್ರೆಗೆ ದಾಖಲು:
ವಸತಿಗೃಹಕ್ಕೆ ಅಧಿಕಾರಿಗಳು ಬೀಗ ಜಡಿದಿರುವುದರಿಂದ ತೊಂದರೆಗೆ ಒಳಗಾಗದ ವಿಕಲಚೇತನ ಒಂಟಿ ಮಹಿಳೆ ಜಾನಕಿಯವರು ಬೀಗ ಹಾಕಿದ ಮನೆಯ ಹೊರಗಡೆ ಸುರಿಯುತ್ತಿರುವ ಮಳೆಗೆ ರಾತ್ರಿ 12 ಗಂಟೆಯ ತನಕವೂ ಕುಳಿತಿದ್ದರು. ಮಧ್ಯರಾತ್ರಿ ತನಕ ನೀರು, ಅನ್ನ, ಆಹಾರವಿಲ್ಲದೆ ಅಸ್ವಸ್ಥಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.


ಸಂಜೆ ತನಕ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿ ಮನೆಗೆ ಹೋದಾಗ ಬೀಗ ಹಾಕಿರುವುದರಿಂದ ಬೇರೆ ದಾರಿಯಿಲ್ಲದೆ ಒಂಟಿಯಾಗಿ ನಾನು ಮನೆಯ ಹೊರಗಡೆ ಸುರಿಯುವ ಮಳೆಗೆ ನೆನೆಯುತ್ತಾ ರಾತ್ರಿ ಸುಮಾರು 12 ಗಂಟೆಯ ತನಕ ಅಲ್ಲಿಯೇ ಕುಳಿತ್ತಿದ್ದೆ. ನನಗಾಗಿ ಮಾಡಿದ್ದ ಅನ್ನ, ಪದಾರ್ಥಗಳು ಮನೆಯ ಒಳಗಡೆಯೇ ಇದೆ. ಅಲ್ಲದೆ ನನಗೆ ಸಂಬಂಧಿಸಿ ಎಲ್ಲಾ ದಾಖಲೆಗಳು ಮನೆಯ ಒಳಗಡೆಯಿದೆ. ಮಧ್ಯರಾತ್ರಿ ತನಕ ಅನ್ನ, ನೀರು ಇಲ್ಲದೇ ಅಸಹಾಯಕಲಾಗಿದ್ದು ಕೊನೆಗೆ ಅಂಬ್ಯುಲೆನ್ಸ್‌ನವರಿಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಾಗಿರುತ್ತೇನೆ. ನಾನು ವಿಕಲಚೇತನಲಾಗಿದ್ದೇನೆ. ನನಗೆ ಮಕ್ಕಳೂ ಇಲ್ಲ. ಪತಿಯೂ ಮೃತಪಟ್ಟಿದ್ದು ನಾನು ಒಂಟಿಯಾಗಿದ್ದೇನೆ. ಪತಿಯಿರುತ್ತಿದ್ದರೆ ನನಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ನಾನು ವಸತಿಗೃಹದಲ್ಲಿ ನಿಲ್ಲುತ್ತಿರಲಿಲ್ಲ ಎಂದು ಆಸ್ಪತ್ರೆಗೆ ದಾಖಲಾದ ಸಂತ್ರಸ್ಥ ಮಹಿಳೆ ಜಾನಕಿಯವರು ಕಣ್ಣೀರು ಹಾಕುತ್ತಾ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here