ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಪ್ರಕರಣ: ಆರೋಪಿಗಳ ಖುಲಾಸೆ

0

ಉಪ್ಪಿನಂಗಡಿ: ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪವನ್ನೆದುರಿಸುತ್ತಿದ್ದ ಮೇದರಬೆಟ್ಟು ಅಬೂಬಕ್ಕರ್ ಸಿದ್ದೀಕ್ ಹಾಗೂ ಶುಕ್ರು ಎಂಬವರನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಪುತ್ತೂರು ಇದರ ನ್ಯಾಯಾಧೀಶರಾದ ಶಿವಣ್ಣ ಎಚ್.ಆರ್. ಅವರು ಆದೇಶ ನೀಡಿದ್ದಾರೆ.


2018ರ ಮೇ 27ರಂದು ಉಪ್ಪಿನಂಗಡಿಯ ಸುದರ್ಶನ ಅವರ ಮನೆಯ ಎದುರು ಉಪ್ಪಿನಂಗಡಿ- ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಮೇದರಬೆಟ್ಟು ಸಿದ್ದೀಕ್ ಅವರನ್ನು ಪೊಲೀಸರು ನಿಲ್ಲಲು ಸೂಚಿಸಿದ್ದು, ಆದರೆ ಇದನ್ನು ಉಲ್ಲಂಘಿಸಿ ಅವರು ದ್ವಿಚಕ್ರ ವಾಹನವನ್ನು ಮುಂದಕ್ಕೆ ಚಲಾಯಿಸಿದ್ದು, ಈ ಸಂದರ್ಭ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರ ಜೊತೆಯಿದ್ದ ಹೋಂ ಗಾರ್ಡ್ ಸಿಬ್ಬಂದಿ ಸೈಯದ್ ಇಬ್ರಾಹೀಂ ಅವರು ದ್ವಿಚಕ್ರ ವಾಹನವನ್ನು ತಡೆದು ನಿಲ್ಲಿಸಿ, ದ್ವಿಚಕ್ರ ಸವಾರನಿಗೆ ದಾಖಲಾತಿ ತೋರಿಸಲು ತಿಳಿಸಿದಾಗ, ಸಿದ್ದೀಕ್ ಅವರು ಅವ್ಯಾಚ್ಯ ಶಬ್ದದಲ್ಲಿ ಅವರಿಗೆ ನಿಂದಿಸಿದ್ದಲ್ಲದೆ, ಬಳಿಕ ಅಲ್ಲಿಗೆ ಬಂದ ಸಂಚಾರಿ ಠಾಣೆಯ ಎ.ಎಸ್.ಐ. ರುಕ್ಮಯ ಗೌಡರಿಗೂ ಸಿದ್ದೀಕ್ ಅವರೊಂದಿಗೆ ಇನ್ನು ಮೂವರು ವ್ಯಕ್ತಿಗಳು ಸೇರಿಕೊಂಡು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಸಿದ್ದೀಕ್ ಮೇದರಬೆಟ್ಟು ಅವರ ಮೇಲೆ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ವಾದ- ವಿವಾದಗಳನ್ನು ಆಲಿಸಿದ ನ್ಯಾಯಾಲಯ ಈ ಪ್ರಕರಣದ ಆರೋಪಿಗಳಾಗಿದ್ದ ಅಬೂಬಕ್ಕರ್ ಸಿದ್ದೀಕ್ ಮತ್ತು ಶುಕ್ರು ಅವರನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಿ ಆದೇಶ ನೀಡಿದೆ.ಆರೋಪಿಗಳ ಪರ ಕಜೆ ಲಾ ಚೇಂಬರ್ಸ್‌ನ ಮಹೇಶ್ ಕಜೆ ವಾದಿಸಿದರು.

LEAVE A REPLY

Please enter your comment!
Please enter your name here