ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್ಯ ಮೂರುಗೋಳಿ ಎಂಬಲ್ಲಿ ಕಾರ್ಯಾಚರಿಸುವ ವಕ್ರಾಂಗೀ ಸಂಸ್ಥೆಯ ಏಟಿಎಂ ಕೇಂದ್ರಕ್ಕೆ ಸೋಮವಾರ ತಡರಾತ್ರಿ ಕಳ್ಳರು ನುಗ್ಗಿ ಕಳವಿಗೆ ಯತ್ನಿಸಿದ ಘಟನೆ ನಡೆದಿದೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಮ್ಮದ್ ಹರ್ಷದ್ ಎಂಬವರು ನಿರ್ವಹಿಸುತ್ತಿರುವ ಈ ಎಟಿಎಂ ಕೇಂದ್ರಕ್ಕೆ ಸೋಮವಾರ ತಡ ರಾತ್ರಿ 1.30 ರ ಸುಮಾರಿಗೆ ಒಳ ನುಗ್ಗಿದ ಕಳ್ಳರು ಮುಖಗವಸು ಧರಿಸಿ , ಕೈಗೆ ಗ್ಲೌಸ್ ಹಾಕಿ ಎಟಿಎಂ ಮಿಶಿನ್ ನ ಒಂದು ಬಾಗಿಲನ್ನು ಮುರಿದು ಎರಡನೇ ಬಾಗಿಲನ್ನು ಮುರಿಯಲು ಪ್ರಯತ್ನಿಸಿದ್ದಾರೆ. ಎರಡನೇ ಬಾಗಿಲು ಪಾಸ್ವರ್ಡ್ ಆಧಾರಿತ ಚಾಲನೆಗೊಳ್ಳುವ ವ್ಯವಸ್ಥೆಯನ್ನು ಹೊಂದಿರುವುದರಿಂದ ಪಾಸ್ವರ್ಡ್ ಲಭಿಸದೆ ನಗದು ಇರುವ ಕೋಶದ ಬಾಗಿಲು ತೆರೆಯಲು ವಿಫಲವಾದಂತೆ ಸಿಸಿ ಕ್ಯಾಮಾರದಲ್ಲಿನ ದೃಶ್ಯಾವಳಿಯಲ್ಲಿ ಕಂಡು ಬಂದಿದೆ.
ಈ ಕಾರಣದಿಂದ ಎಟಿಎಂ ಕೇಂದ್ರದಲ್ಲಿ ಇದೆ ಎನ್ನಲಾದ 3.20 ಲಕ್ಷಕ್ಕೂ ಮಿಗಿಲಾದ ಮೊತ್ತ ಕಳ್ಳರ ಪಾಲಾಗಿದೆಯೋ ಅಥವ ಸುರಕ್ಷಿತವಾಗಿದೆಯೋ ಎನ್ನುವುದು ಎಟಿಎಂ ಮೆಷಿನ್ ತೆರೆಯಲು ತಂತ್ರಜ್ಞರ ಆಗಮನದ ಬಳಿಕವೇ ತಿಳಿಯಬೇಕಾಗಿದೆ. ಉಪ್ಪಿನಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ನೇತೃತ್ವದಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.