ನೆಲ್ಯಾಡಿ: ನ.13ರಂದು ಕಡಬ ತಹಶೀಲ್ದಾರ್ ನೇತೃತ್ವದಲ್ಲಿ ಅಕ್ರಮ ಮನೆ ತೆರವುಗೊಳಿಸಲಾಗಿದ್ದ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿನ ಸರಕಾರಿ ಜಾಗದಲ್ಲೇ ರಾಧಮ್ಮ ಹಾಗೂ ಮುತ್ತುಸ್ವಾಮಿ ದಂಪತಿಗೆ ಮತ್ತೆ ಮನೆ ನಿರ್ಮಾಣಕ್ಕೆ ದಲಿತ ಸಂಘಟನೆಗಳ ನೇತೃತ್ವದಲ್ಲಿ ಡಿ.6ರಂದು ನಡೆದ ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ಮಾಣ ದಿನಾಚರಣೆಯ ಸಂದರ್ಭದಲ್ಲಿ ಅಡಿಪಾಯ ಹಾಕಲಾಗಿದೆ.
ಕೌಕ್ರಾಡಿ ಗ್ರಾಮದ ಸರ್ವೆ ನಂ.123/1ರ ಸರಕಾರಿ ಜಾಗದಲ್ಲಿದ್ದ ಮನೆಯನ್ನು ಕಡಬ ತಹಶೀಲ್ದಾರ್ ನೇತೃತ್ವದ ತಂಡ ನ.13ರಂದು ಬೆಳ್ಳಂಬೆಳಿಗ್ಗೆ ನೆಲಸಮಗೊಳಿಸಿತ್ತು. ಇದರಿಂದಾಗಿ ರಾಧಮ್ಮ ಹಾಗೂ ಮುತ್ತುಸ್ವಾಮಿ ದಂಪತಿ ಬೀದಿಯಲ್ಲೇ ಕಾಲ ಕಳೆಯುವಂತಾಗಿದೆ. ತಹಶೀಲ್ದಾರ್ ಕ್ರಮ ವಿರೋಧಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಕಡಬ ತಹಶೀಲ್ದಾರ್ ಕಚೇರಿಯ ಮುಂಭಾಗ ಪ್ರತಿಭಟನೆಯೂ ನಡೆದಿತ್ತು. ಈ ವೇಳೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಪುತ್ತೂರು ಸಹಾಯಕ ಆಯುಕ್ತರು ಹೋರಾಟಗಾರರಿಗೆ ನೀಡಿದ್ದರು. ಇದೀಗ ಡಿ.6ರಂದು ದಲಿತ ಹಕ್ಕು ಸಮಿತಿ ನೇತೃತ್ವದಲ್ಲಿ ಸಮಾನ ಮನಸ್ಕ ಸಂಘಟನೆಗಳಿಂದ ಅಂಬೇಡ್ಕರ್ ಪರಿನಿರ್ವಾಣ ದಿನವಾದ ಡಿ.6ರಂದು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರಮದಾನದ ಮೂಲಕ ವೃದ್ಧ ದಂಪತಿಗಳಿಗೆ ನೂತನ ಮನೆ ನಿರ್ಮಾಣ ಕೆಲಸಕ್ಕೆ ಚಾಲನೆ ನೀಡಿದರು.
ದಲಿತ ಸಮಿತಿಯ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಈಶ್ವರಿ ಅವರು ಅಂಬೇಡ್ಕರ್ ಗೀತೆಯನ್ನು ಹಾಡಿ ಮಾತನಾಡಿ, ಅಂಬೇಡ್ಕರ್ ಕೇವಲ ದಲಿತರಿಗೆ ಮಾತ್ರ ಎಂಬ ಭಾವನೆ ಇದೆ. ಆದರೆ ಅವರು ಮಾಡಿದ ಸಂವಿಧಾನವನ್ನು ಪ್ರತಿಯೊಬ್ಬರೂ ಉಪಯೋಗಿಸಿಕೊಳ್ಳುತ್ತಿದ್ದಾರೆ. ಜನಗಳಿಗೆ ತೊಂದರೆ ಆದಾಗ ಮಾತ್ರ ಅವರು ಬರೆದ ಸಂವಿಧಾನದ ನೆನಪಾಗುವುದು. ದೇಶದ ಅನ್ಯಾಯ, ದಬ್ಬಾಳಿಕೆ, ಅಸಮಾನತೆಯ ವಿರುದ್ಧ ಪ್ರತಿಭಟನೆ ಮಾಡಿದ ಮೇರು ವ್ಯಕ್ತಿತ್ವ ಅವರದ್ದು. ಅಂಬೇಡ್ಕರ್ ಅವರು ನಿಧನರಾದ ಸಂದರ್ಭ ಇಡೀ ಜಗತ್ತಿನ 193 ದೇಶಗಳು ಅವರ ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಗೌರವ ಸಲ್ಲಿಸಿದ್ದರು. ಸಮಾಜದಲ್ಲಿ ಶಾಶ್ವತವಾಗಿ ಇರಬೇಕಾದರೆ ಈ ದೇಶದಲ್ಲಿ ದುಡಿಯುವ, ಶೋಷಣೆಗೆ ಒಳಗಾದವರ ಬದುಕಿನಲ್ಲಿ ನಾವು ಸ್ಪೂರ್ತಿಯಾಗಿ ಅವರ ಜೊತೆ ಕೆಲಸ ಮಾಡಿ ಸಹಾಯ ಮಾಡಬೇಕು ಎಂದರು.
ನ್ಯಾಯವಾದಿ ಬಿ.ಎಂ.ಭಟ್ ಮಾತನಾಡಿ ಅಂಬೇಡ್ಕರ್ ಅವರ ಪರಿ ನಿರ್ವಾಣ ದಿನದಂದೇ ಮನೆ ಕಳೆದುಕೊಂಡಿರುವ ರಾಧಮ್ಮ-ಮುತ್ತುಸ್ವಾಮಿ ವೃದ್ಧ ದಂಪತಿಗೆ ಮತ್ತೆ ಮನೆ ನಿರ್ಮಾಣಕ್ಕೆ ಹೊರಟಿದ್ದೇವೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳನ್ನು ಹೆಜ್ಜೆ ಹೆಜ್ಜೆಗೂ ಪಾಲಿಸುತ್ತಿದ್ದೇವೆ. ಈಗ ವೃದ್ಧ ದಂಪತಿಗಳಿಗೆ ಮನೆ ನಿರ್ಮಾಣ ಮಾಡುವುದರೊಂದಿಗೆ ಅಂಬೇಡ್ಕರ್ ಅವರ ಆದರ್ಶ, ತತ್ವಗಳನ್ನು ಪಾಲಿಸುತ್ತೇವೆ ಎಂದು ಪ್ರತಿಜ್ಞೆ ಮಾಡಬೇಕು ಎಂದರು. ಬೆಳ್ತಂಗಡಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಎಸ್.ಕೆ. ಹಕೀಂ ಹಾಗೂ ಹಲವು ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು. ಸಾಮಾಜಿಕ ಹೋರಾಟಗಾರ ಶಾಮ್‌ರಾಜ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಳಿಕ ಎಲ್ಲರೂ ಒಟ್ಟಾಗಿ ವೃದ್ಧ ದಂಪತಿಗೆ ಶ್ರಮದಾನದ ಮೂಲಕ ಮನೆ ನಿರ್ಮಿಸಿ ಕೊಡುವ ಕೆಲಸ ಆರಂಭಿಸಿದರು.
ಗ್ರಾಮ ಆಡಳಿತಾಧಿಕಾರಿಗೆ ಹಲ್ಲೆ:
ಮನೆ ನೆಲಸಮಗೊಳಿಸಿದ ಸರಕಾರಿ ಜಾಗದಲ್ಲೇ ಮತ್ತೆ ಮನೆ ನಿರ್ಮಾಣ ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಕೌಕ್ರಾಡಿ ಗ್ರಾಮ ಆಡಳಿತಾಧಿಕಾರಿ ಸಿದ್ದಲಿಂಗ ಜಂಗಮ ಶೆಟ್ಟಿ ಹಾಗೂ ಗ್ರಾಮ ಸಹಾಯಕ ಕಿರಣ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. ಗ್ರಾಮ ಸಹಾಯಕ ಕಾಮಗಾರಿ ನಡೆಸುತ್ತಿರುವ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಸಂದರ್ಭದಲ್ಲಿ ಮನೆ ಕಳೆದುಕೊಂಡಿದ್ದ ಮುತ್ತುಸ್ವಾಮಿ ಅವರು ಗ್ರಾಮ ಆಡಳಿತಾಧಿಕಾರಿ ಸಿದ್ದಲಿಂಗ ಜಂಗಮ ಶೆಟ್ಟಿ ಅವರಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡಿರುವ ಸಿದ್ದಲಿಂಗ ಜಂಗಮ ಶೆಟ್ಟಿ ಅವರು ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಮಧ್ಯೆ ಮುತ್ತುಸ್ವಾಮಿ ಅವರು ಸಹ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಮನೆ ನಿರ್ಮಾಣಕ್ಕೆ ಅಡಿಪಾಯದ ಹಂತದ ತನಕ ಕಾಮಗಾರಿ ನಡೆಸಲಾಗಿದೆ ಎಂದು ವರದಿಯಾಗಿದೆ.
ಜಿಲ್ಲಾಧಿಕಾರಿಗೆ ತಹಶೀಲ್ದಾರ್ ಪತ್ರ:
ಕರ್ತವ್ಯ ನಿರತ ಗ್ರಾಮ ಆಡಳಿತಾಧಿಕಾರಿ ಮೇಲೆ ಹಲ್ಲೆ ಮಾಡಿರುವ ಆರೋಪಿತರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಪೊಲೀಸ್ ಉಪನಿರೀಕ್ಷಕರಿಗೆ ಸೂಕ್ತ ನಿರ್ದೇಶನ ನೀಡುವಂತೆ ಕಡಬ ತಹಶೀಲ್ದಾರ್ ಅವರು ದ.ಕ.ಜಿಲ್ಲಾಧಿಕಾರಿ, ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಿಗೆ ಹಾಗೂ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಪತ್ರ ಬರೆದಿದ್ದಾರೆ.
ಕೌಕ್ರಾಡಿ ಗ್ರಾಮದ ಸರ್ವೆ ನಂ.123/1ರ ಸರಕಾರಿ ಜಾಗದಲ್ಲಿ ರೇಣುಕಾ ಕೋಂ ವಿಶ್ವನಾಥ ಎಂಬವರು ಅನಧಿಕೃತವಾಗಿ ನಿರ್ಮಿಸಿದ್ದ ಕಟ್ಟಡವನ್ನು ನ.13ರಂದು ತೆರವು ಮಾಡಲಾಗಿದೆ. ಸದ್ರಿ ಸ್ಥಳದಲ್ಲಿ ಪುನ: ಕಟ್ಟಡವನ್ನು ನಿರ್ಮಿಸುತ್ತಿರುವುದಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ಡಿ.6ರಂದು ಗ್ರಾಮ ಆಡಳಿತಾಧಿಕಾರಿ ಸಿದ್ದಲಿಂಗ ಜಂಗಮ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಮೇಲೆ ರೇಣುಕಾರವರ ತಂದೆ ಮುತ್ತುಸ್ವಾಮಿ ಮತ್ತು ಇತರರು ಹಲ್ಲೆ ಮಾಡಿದ್ದು ಮನೆ ನಿರ್ಮಾಣವನ್ನು ಮುಂದುವರೆಸಿರುತ್ತಾರೆ. ಗಾಯಗೊಂಡ ಗ್ರಾಮ ಆಡಳಿತಾಧಿಕಾರಿಯವರನ್ನು ಚಿಕಿತ್ಸೆಗಾಗಿ ಉಪ್ಪಿನಂಗಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸರಕಾರಿ ಕರ್ತವ್ಯದಲ್ಲಿದ್ದ ನೌಕರನ ಮೇಲೆ ಹಲ್ಲೆ ಮಾಡಿರುವ ಆರೋಪಿತರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಪೊಲೀಸ್ ಉಪನಿರೀಕ್ಷಕರಿಗೆ ಸೂಕ್ತ ನಿರ್ದೇಶನ ನೀಡುವಂತೆ ಕಡಬ ತಹಶೀಲ್ದಾರ್ ಅವರು ಪತ್ರ ಬರೆದಿದ್ದಾರೆ.