ಆಧಾರ್ ಬಗ್ಗೆ ಜನರು ಜಾಗರೂಕರಾಗಬೇಕು: ರಾಜೇಶ್ ಕುಮಾರ್
ವಿಟ್ಲ: ಆಧಾರ್ ಕಾರ್ಡ್ ಮುಂದಿನ ದಿನಗಳಲ್ಲಿ ಜನರ ಜೀವನಕ್ಕೇ ಆಧಾರ. ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಚಟುವಟಿಕೆಗಳು ನಡೆಯಲು ಸಾಧ್ಯವಿಲ್ಲ. ಜನರು ಈ ಬಗ್ಗೆ ಜಾಗರೂಕರಾಗಬೇಕು ಎಂದು ಅಂಚೆ ಇಲಾಖೆಯ ಅಧಿಕಾರಿ ರಾಜೇಶ್ ಕುಮಾರ್ ಹೇಳಿದರು.
ಅವರು ಮಾಣಿ ಗ್ರಾಮ ಪಂಚಾಯತ್ ಮತ್ತು ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಜಂಟಿ ಆಶ್ರಯದಲ್ಲಿ ನಡೆದ ಆಧಾರ್ ಶಿಬಿರದ ಉದ್ಘಾಟಿಸಿ ಮಾತನಾಡಿದರು.
ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿರವರು ಮಾತನಾಡಿ ಹಿಂದೆ ಮಾಣಿ ಅಂಚೆ ಕಛೇರಿಯಲ್ಲಿ ಆಧಾರ್ ಕಾರ್ಡಿನ ನೋಂದಣಿ ಕಾರ್ಯ ನಿರಂತರವಾಗಿ ನಡೆಯುತ್ತಿತ್ತು. ಕೆಲವು ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿರುತ್ತದೆ. ಅದನ್ನು ಪುನರಾರಂಭಿಸಲು ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ವಿನಂತಿಸಲಾಗುವುದು. ಆಧಾರ್ ಕಾರ್ಡಿನ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಗ್ರಾಮ ಪಂಚಾಯತ್ ಸದಸ್ಯರಾದ ಇಬ್ರಾಹಿಂ.ಕೆ.ಮಾಣಿ, ಮೆಲ್ವಿನ್ ಕಿಶೋರ್ ಮಾರ್ಟಿಸ್, ನಾರಾಯಣ ಶೆಟ್ಟಿ ತೋಟ, ಪ್ರೀತಿ ಡಿನ್ನಾ ಪಿರೇರಾ, ರಮಣಿ.ಡಿ.ಪೂಜಾರಿ ಮತ್ತು ಅಂಚೆ ಇಲಾಖೆಯಿಂದ ಸುಶ್ಮಿತಾ ರೈ ಹಾಗೂ ನೂತನ್ ಬಂಗೇರ ಉಪಸ್ಥಿತರಿದ್ದರು.
ಮಾಣಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆಯವರು ಕಾರ್ಯಕ್ರಮ ನಿರೂಪಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.