ಪುತ್ತೂರು: ಪಹಣಿಯಲ್ಲಿ ವಾರಸುದಾರರ ಹೆಸರನ್ನು ಸೇರ್ಪಡೆಗೊಳಿಸಲು 4ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಮುಲ್ಕಿ ಕಂದಾಯ ನಿರೀಕ್ಷಕ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ವ್ಯಕ್ತಿಯೊಬ್ಬರು ತನ್ನ ಅಜ್ಜಿಯ ಮರಣಾನಂತರ ಆಕೆಯ ಹೆಸರಿನಲ್ಲಿದ್ದ ಆಸ್ತಿಯ ಪಹಣಿಯಲ್ಲಿ ವಾರೀಸುದಾರರ ಹೆಸರನ್ನು ಸೇರ್ಪಡೆ ಮಾಡುವಂತೆ ಮೂಲ್ಕಿ ತಹಶೀಲ್ದಾರ್ ಕಛೇರಿಗೆ ಅರ್ಜಿ ಸಲ್ಲಿಸಿದ್ದರು. ಸದರಿ ಅರ್ಜಿಯನ್ನು ಮೂಲ್ಕಿ ಕಂದಾಯ ನಿರೀಕ್ಷಕರ ಕಛೇರಿಗೆ ವಿಚಾರಣೆಗಾಗಿ ಕಳುಹಿಸಲಾಗಿತ್ತು. ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯ ಯಾವುದೇ ಕ್ರಮ ಕೈಗೊಳ್ಳದೆ ಕಂದಾಯ ನಿರೀಕ್ಷಕ ಜಿ ಎಸ್ ದಿನೇಶ್ ಅರ್ಜಿಯನ್ನು ತಮ್ಮಲ್ಲಿ ಉಳಿಸಿಕೊಂಡಿದ್ದರು. ವರ್ಷದ ಬಳಿಕ ಅರ್ಜಿದಾರರು ಈ ಬಗ್ಗೆ ವಿಚಾರಿಸಿದಾಗ ಪಹಣಿಯಲ್ಲಿ ಹೆಸರು ಸೇರ್ಪಡೆಗೊಳಿಸಲು 4 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ನೀಡಿ ಕೆಲಸ ಮಾಡಿಸಿಕೊಳ್ಳಲು ಇಚ್ಚೆ ಇಲ್ಲದ ಅರ್ಜಿದಾರ ಈ ಕುರಿತು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇಂದು ಬೆಳಿಗ್ಗೆ ಕಂದಾಯ ನಿರೀಕ್ಷಕ ಜಿ ಎಸ್ ದಿನೇಶ್ ಸುರತ್ಕಲ್ ಜಂಕ್ಷನ್ ಬಳಿ ಅರ್ಜಿದಾರರಿಂದ 4 ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹಣ ಮತ್ತು ಕಂದಾಯ ನಿರೀಕ್ಷಕರನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ ಎ ನಟರಾಜ್ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕಿ ಡಾ.ಗಾನ ಪಿ ಕುಮಾರ್, ಪೊಲೀಸ್ ನಿರೀಕ್ಷಕರಾದ ಅಮಾನುಲ್ಲಾ ಎ , ಸುರೇಶ್ ಕುಮಾರ್ ಪಿ, ಚಂದ್ರಶೇಖರ್ ಕೆ ಎನ್ ಮತ್ತು ಸಿಬ್ಬಂದಿಗಳು ಟ್ರಾಪ್ ಕಾರ್ಯಾಚರಣೆ ಕೈಗೊಂಡಿದ್ದರು.