ವಿದ್ಯಾರ್ಥಿಗಳಿಗೆ ಅದ್ಭುತವಾದ ಅವಕಾಶ- ಸೋಮಶೇಖರ್ ನಾಯಕ್
ಕ್ರೀಡೆಗೆ ಬೇಕಿರುವ ಸಕಲ ವ್ಯವಸ್ಥೆ- ಸವಣೂರು ಸೀತಾರಾಮ ರೈ
ಪುತ್ತೂರು: ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಬಹುಮಾನ ವಿತರಣಾ ಸಮಾರಂಭ ‘ಸಮ್ಮಾನ ರಶ್ಮಿ’ ಡಿ.19 ರಂದು ನಡೆಯಿತು.
ಸುಬ್ರಹ್ಮಣ್ಯದ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸೋಮಶೇಖರ ನಾಯಕ್ ಅವರು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ಸಮಯವನ್ನು ಗೌರವಿಸುವವರನ್ನು ಮತ್ತು ಅಧ್ಯಯನ ಮಾಡುವವರನ್ನು ಲೋಕವೇ ಗೌರವಿಸುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಅದ್ಭುತವಾದ ಅವಕಾಶಗಳು ಇದ್ದು, ಅದನ್ನು ಸದುಪಯೋಗಪಡಿಸಿಕೊಂಡು, ಒಳ್ಳೆಯ ಪ್ರಜೆಯಾಗಿ ಬಾಳಬೇಕು ಎಂದರು. ನನ್ನ ಮಾರ್ಗದರ್ಶಕರಾದ ಸವಣೂರು ಸೀತಾರಾಮ ರೈ ಆದರ್ಶಯುತವಾದ ಉದ್ದೇಶಗಳನ್ನು ಇಟ್ಟುಕೊಂಡು ಸಮಾಜದಲ್ಲಿ ತಮ್ಮ ಸೇವೆಯನ್ನು ಮಾಡುತ್ತಿದ್ದಾರೆ. ಪುಸ್ತಕವನ್ನು ಓದುವ ಹವ್ಯಾಸ ಅತ್ಯಂತ ಶ್ರೇಷ್ಠವಾಗಿದ್ದು, ಕಲಿಕೆಯ ಸಮಯದಲ್ಲಿ ನಾವು ಏಕ ಉದ್ದೇಶದಿಂದ ಮನಸನ್ನು ಕೇಂದ್ರಿಕೃತಗೊಳಿಸಬೇಕು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕ್ರೀಡೆಗೆ ಬೇಕಿರುವ ಸಕಲ ವ್ಯವಸ್ಥೆ- ಸವಣೂರು ಸೀತಾರಾಮ ರೈ
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸಹಕಾರ ರತ್ನ ಸವಣೂರು ಸೀತಾರಾಮ ರೈಯವರು ಮಾತನಾಡಿ ಇಂದು ಮಕ್ಕಳು ಸ್ಪರ್ಧೆಗಳಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿರುವುದು ತೀರಾ ಸಾಮಾನ್ಯವಾಗಿದೆ. ಇದಕ್ಕೆ ಶಿಕ್ಷಕರ ಜೊತೆ ಹೆತ್ತವರೂ ಸಹ ಕೈ ಜೋಡಿಸಿ ಅವರನ್ನು ಹುರಿದುಂಬಿಸಬೇಕಾಗಿದೆ. ನಮ್ಮಲ್ಲಿ ಕ್ರೀಡೆಗೆ ಬೇಕಿರುವ ಸಕಲ ವ್ಯವಸ್ಥೆಗಳನ್ನು ಶಿಸ್ತುಬದ್ಧವಾಗಿ ಮಾಡಿದ್ದು ಮಕ್ಕಳು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿಯವರು ಸಭಾಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ಟಿಗಳಾದ ಸವಣೂರು ಸುಂದರ ರೈ, ರಶ್ಮಿ ಅಶ್ವಿನ್ ಶೆಟ್ಟಿ, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮ್ ಪ್ರಸಾದ್ ರೈ ಕಲಾಯಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ ಮತ್ತು ವಿದ್ಯಾರಶ್ಮಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ ಸ್ವಾಗತಿಸಿದರು. ಬೋಧಕ ವರ್ಗದ ಆಶಾಲತಾ, ಸುನೀತಾ, ಅನಿತಾ, ಶೀಲಾವತಿ, ಸೌಮ್ಯಾ, ಮತ್ತು ವೇದಾವತಿ ಬಹುಮಾನ ವಿತರಣೆ ಕಾರ್ಯಗಳಲ್ಲಿ ಸಹಕರಿಸಿದರು. 10ನೆ ತರಗತಿಯ ರಶ್ಮಿತಾ ನಿರೂಪಿಸಿದರು. 10ನೆ ತರಗತಿಯ ಶ್ರುತ ಜೈನ್ ಮತ್ತು ಬಳಗರವರು ಪ್ರಾರ್ಥನೆಗೈದರು. 9ನೆ ತರಗತಿಯ ಫಾತಿಮಾತ್ ಹನ್ನಾ ಸಂವಿಧಾನದ ಪೀಠಿಕೆ ವಾಚನ, ದ್ವಿತೀಯ ವಿಜ್ಞಾನ ವಿಭಾಗದ ಸುನೀಕ್ಷಾ ಅತಿಥಿಗಳ ಪರಿಚಯ ಮತ್ತು 10ನೆ ತರಗತಿಯ ಎಂ. ವೈಷ್ಣವಿ ವಂದನಾರ್ಪಣೆಗಳಲ್ಲಿ ಸಹಕರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಂಗೀತ ಗುರು ಪಾರ್ವತಿ ಪದ್ಯಾಣ ಅವರ ಶಿಷ್ಯ ವರ್ಗದಿಂದ ಸುಗಮ ಸಂಗೀತ ಮತ್ತು ಉಪನ್ಯಾಸಕಿ ರಂಜಿತಾ ಅವರ ಮಾರ್ಗದರ್ಶನದಲ್ಲಿ ಭಜನಾ ಕಾರ್ಯಕ್ರಮಗಳು ನಡೆಯಿತು. ಬಳಿಕ 10ನೆ ತರಗತಿಯ ಪ್ರಾಪ್ತಿ ಪಿ. ವಂದಿಸಿದರು.
ಡಿ.20 : ವಿದ್ಯಾರಶ್ಮಿಯಲ್ಲಿ “ಸಂಭ್ರಮ ರಶ್ಮಿ”
ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಾರ್ಷಿಕೋತ್ಸವ “ಸಂಭ್ರಮ ರಶ್ಮಿ” ಸಮಾರಂಭವು ಡಿ.20ರಂದು ಸಂಜೆ 5.30ರಿಂದ ನಡೆಯಲಿದ್ದು, ಪುತ್ತೂರು ಉಪವಿಭಾಗದ ಆಧೀಕ್ಷಕ ಜುಬೀನ್ ಮಹಾಪಾತ್ರರವರು ಸಂಭ್ರಮ ರಶ್ಮಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರು ಎಸಿಪಿ ನಜ್ಮಫಾರೂಕೀ, ನಿವೃತ್ತ ಪ್ರಾಂಶುಪಾಲ ಮಾಧವ ಭಟ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ವಿದ್ಯಾರಶ್ಮಿ ಸಂಸ್ಥೆಯ ಆಡಳಿತಾಧಿಕರಿ ಅಶ್ವಿನ್ ಎಲ್ ಶೆಟ್ಟಿ ವಹಿಸಲಿದ್ದಾರೆ. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಕೆ.ಸೀತಾರಾಮ ರೈ ಸವಣೂರು, ಸಂಚಾಲಕರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು ಸವಣೂರು