ಮಾದಕತೆ ಮಾರಣಾಂತಿಕ ಪುಸ್ತಕ ಬಿಡುಗಡೆ, ರಾಜ್ಯಮಟ್ಟದ ಕವಿಗೋಷ್ಠಿ
ಪುತ್ತೂರು: ನೂರೇ ಅಜ್ಮೀರ್ 4ನೇ ವಾರ್ಷಿಕ ಸಂಗಮ ‘ಆಧ್ಯಾತ್ಮಿಕ ಮಜ್ಲಿಸ್’, ಕವಿಗೋಷ್ಠಿ ಹಾಗೂ ’ಮಾದಕತೆ ಮಾರಣಾಂತಿಕ’ ಅಧ್ಯಯನಾತ್ಮಕ ಪುಸ್ತಕ ಬಿಡುಗಡೆ ಹಾಗು ಮಾದಕ ಮುಕ್ತ ಸಮಾಜಕ್ಕಾಗಿ ದೊಡ್ಡ ಆಂದೋಲನ ಕಾರ್ಯಕ್ರಮ ಡಿ.26ರಂದು ಪುತ್ತೂರು ಸುದಾನ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಪುಸ್ತಕದ ಕೃತಿಕಾರಾಗಿರುವ ಕಾರ್ಯಕ್ರಮದ ಸಂಯೋಜಕ ಇಕ್ಬಾಲ್ ಬಾಳಿಲ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಈಗಾಗಲೇ ಯು ಟ್ಯೂಬ್‌ಗಳಲ್ಲಿ ಬೆಳಗ್ಗಿನ ಜಾವ ಲೈವ್ ಆಗಿ ಆಧ್ಯಾತ್ಮಿಕ ನೂರೇ ಅಜ್ಮೀರ್ ಅನ್ನು ಸುಮಾರು 1ಲಕ್ಷ ಜನರು ವೀಕ್ಷಣೆ ಮಾಡುತ್ತಾರೆ. ಇದರ ವಾರ್ಷಿಕ ಕಾರ್ಯಕ್ರಮ ಮಂಗಳೂರು, ಅಡ್ಯಾರ್, ಉಳ್ಳಾಲದಲ್ಲಿ ಆಗಿದೆ. 4ನೇ ವಾರ್ಷಿಕವನ್ನು ಪುತ್ತೂರಿನಲ್ಲಿ ನಡೆಸುತ್ತಿದ್ದೇವೆ. ಸುಮಾರು 25 ಸಾವಿರ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಸಂಜೆ ಗಂಟೆ 4.30ಕ್ಕೆ ಪುಸ್ತಕ ಬಿಡುಗಡೆ ಪ್ರಯುಕ್ತ ರಾಜ್ಯಮಟ್ಟದ ಬಹು ಬಾಷಾ ಕವಿಗೋಷ್ಠಿ ನಡೆಯಲಿದೆ. ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್.ಐ ಆಂಜನೇಯ ರೆಡ್ಡಿಯವರು ಮುಖ್ಯ ಭಾಷಣ ಮಾಡಲಿದ್ದಾರೆ. ಸಂಜೆ ಗಂಟೆ 5ಕ್ಕೆ ಮಜಿ ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಸ್ಥಳೀಯ ಎಲ್ಲಾ ನಾಯಕರು ಜಾತಿ ಧರ್ಮ ಬೇಧವಿಲ್ಲದೆ ಭಾಗವಹಿಸಲಿದ್ದಾರೆ. ಬೆಂಗಳೂರಿನ ಉದ್ಯಮಿ ವೆಂಕಟೇಶ್, ಹಿಂದುಸ್ಥಾನ್ ಗೋಲ್ಡ್ ಕಂಪನಿ ಸ್ಥಾಪಕ ಸಿ.ಕೆ.ಮೌಲಾ ಶರೀಫ್ ಸಹಿತ ಹಲವಾರು ಮಂದಿ ಗಣ್ಯರು ಭಾಗವಹಿಸಲಿದ್ದಾರೆ.
ರಾತ್ರಿ ನಡೆಯುವ ನೂರೇ ಅಜ್ಮೀರ್ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಅಶ್ರಫ್ ಷಾ ಮಾಂತುರು ಅಧ್ಯಕ್ಷತೆ ವಹಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಪುತ್ತೂರು ತಂಙಳ್ ದುಆ ನೇತೃತ್ವ ವಹಿಸಲಿದ್ದು, ಝೈನುಲ್ ಅಭಿದೀನ್ ತಂಙಳ್, ಸಮಸ್ತ ಮುಕಶಾವರ ಸದಸ್ಯ ಬಂಬ್ರಾಣ ಉಸ್ತಾದ್, ಉಸ್ಮಾನುಲ್ ಫೈಝಿ ತೋಡಾರ್ ಸೇರಿದಂತೆ ಹಲವಾರು ಮಂದಿ ಉಲಾಮಗಳು ಭಾಗವಹಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ, ಸ್ಪೀಕರ್ ಯು. ಟಿ. ಖಾದರ್ ಭಾಗವಹಿಸಲಿದ್ದಾರೆ ಎಂದವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ನೂರೇ ಅಜ್ಮೀರ್ ಕಾರ್ಯಕ್ರಮದ ಸಂಚಾಲಕ ಎಲ್.ಟಿ.ರಝಾಕ್, ನಿರ್ದೇಶಕ ಇರ್ಷಾದ್ ಫೈಝಿ, ಮೋನು ಬಪ್ಪಳಿಗೆ, ಬಶೀರ್ ಪುತ್ತೂರು ಉಪಸ್ಥಿತರಿದ್ದರು.
ದ.ಕ.ಜಿಲ್ಲೆ ಪಂಜಾಬ್ ಆಗದಿರಲಿ:
ಮಾದಕತೆ ಮಾರಣಾಂತಿಕ ಎಂಬ ಪುಸ್ತಕ ಬರೆಯುವಲ್ಲಿ ನಾನು ದೇಶದ ವಿವಿಧ ಕಡೆ ಸಂಚರಿಸಿದ್ದೇನೆ. ಬಹುತೇಕವಾಗಿ ದೇಶದಲ್ಲಿ ಬಹು ಹೆಚ್ಚು ಮಾದಕತೆ ಇರುವುದು ಪಂಜಾಬಿನಲ್ಲಿ. ಅಲ್ಲಿ ಒಂದು ವಾರ ಸಮೀಕ್ಷೆ ನಡೆಸಿ ಪುಸ್ತಕ ಬರೆದಿದ್ದೇನೆ. 300 ಪುಟಗಳ ಪುಸ್ತಕದಲ್ಲಿ 35 ಭಾಗವಿದೆ. ಮುಂದೆ ದಕ್ಷಿಣ ಕನ್ನಡ ಪಂಜಾಬ್ ಆಗದಿರಲಿ ಎಂದು ನಾನು ಪುಸ್ತಕ ಬರೆದಿದ್ದೇನೆ. ಮಾದಕತೆಯಲ್ಲಿ ಕಾಣದ ಕೈಗಳು ಇವೆ. ಅದೆಲ್ಲವನ್ನು ಪುಸ್ತಕದಲ್ಲಿ ಬರೆದಿದ್ದೇನೆ. ಈ ಕುರಿತು ಎಷ್ಟೇ ಜಾಗೃತಿ ಮೂಡಿಸಿದರು ಮಾದಕ ವ್ಯವಸ್ಥೆ ನಿಲ್ಲುತ್ತಿಲ್ಲ. ಅದನ್ನು ನಿಲ್ಲಿಸುವ ಉದ್ದೇಶದಿಂದ ಪುಸ್ತಕವನ್ನು ಸಮಾಜಕ್ಕೆ ಅರ್ಪಿಸುತ್ತಿದ್ದೇವೆ-ಇಕ್ಬಾಲ್ ಬಾಳಿಲ