ಉಪ್ಪಿನಂಗಡಿ: ರಸ್ತೆಯ ಹೊಂಡ ಮುಚ್ಚುವ ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಿಸದ ವಿರುದ್ಧ ಸಿಡಿದೆದ್ದ ಸ್ಥಳೀಯರು ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಗುತ್ತಿಗೆದಾರನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಕರಾಯ ಗ್ರಾಮದ ಗರಡಿ ಬಳಿ ನಡೆದಿದೆ.
ಗುರುವಾಯನಕೆರೆ – ಉಪ್ಪಿನಂಗಡಿ ರಾಜ್ಯ ಹೆದ್ದಾರಿಯು ಹೊಂಡ- ಗುಂಡಿಗಳಿಂದ ಕೂಡಿ ತೀವ್ರ ಹದಗೆಟ್ಟಿರುವ ಬಗ್ಗೆ ಬೆಳ್ತಂಗಡಿಯ ಸುದ್ದಿ ಬಿಡುಗಡೆ ಪತ್ರಿಕೆಯು ಸಚಿತ್ರ ವರದಿ ಮಾಡಿತ್ತಲ್ಲದೇ, ಗುರುವಾಯಕೆರೆಯಿಂದ ಉಪ್ಪಿನಂಗಡಿಯವರೆಗೆ ರಾಜ್ಯ ಹೆದ್ದಾರಿಯಲ್ಲಿರುವ ಗುಂಡಿಗಳನ್ನು ಲೆಕ್ಕ ಹಾಕಿ ವರದಿಯಲ್ಲಿ ಅದನ್ನು ಉಲ್ಲೇಖಿಸಿತ್ತು. ಬಳಿಕ ಎಚ್ಚೆತ್ತ ಇಲಾಖೆಯು ರಾಜ್ಯ ಹೆದ್ದಾರಿ ವಾರ್ಷಿಕ ನಿರ್ವಹಣಾ ನಿಧಿಯಿಂದ 19 ಲಕ್ಷ ರೂ. ವೆಚ್ಚದಲ್ಲಿ ಹೆದ್ದಾರಿಯ ಗುಂಡಿ ಮುಚ್ಚುವ ಕಾಮಗಾರಿ ಆರಂಭಿಸಿತ್ತು. ಇದಕ್ಕೂ ಮೊದಲು ಹೆದ್ದಾರಿಯ ಹೊಂಡಗಳಿಂದಾಗಿ ವಾಹನ ಸಂಚಾರಕ್ಕೆ ತೀರಾ ಕಷ್ಟಗಳಾದಾಗ ಕರಾಯ- ಕಲ್ಲೇರಿ ನಡುವಿನ ಗ್ರಾಮಸ್ಥರು ಸೇರಿ ಅಲ್ಲಿರುವ ಹೆದ್ದಾರಿ ಹೊಂಡಗಳನ್ನು ಮಣ್ಣು ತುಂಬಿ ಮುಚ್ಚಿದ್ದರು. ಬಳಿಕ ಹೊಂಡ ಮುಚ್ಚುವ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರರ ಕೆಲಸಗಾರರು ಇಲ್ಲಿ ಕಾಮಗಾರಿ ನಡೆಸುವಾಗ ಹೆದ್ದಾರಿಯ ಹೊಂಡಗಳಿಗೆ ಹಾಕಿದ್ದ ಮಣ್ಣನ್ನು ತೆಗೆಯದೇ ಅದರ ಮೇಲೆಯೇ ಡಾಮರು ಹಾಕಿದ್ದರು. ಇದನ್ನು ಅರಿತ ಗ್ರಾಮಸ್ಥರು ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ಕರೆದಿದ್ದು, ಸ್ಥಳಕ್ಕೆ ಬಂದ ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ರನ್ನು ಗುತ್ತಿಗೆದಾರರ ಕಾಮಗಾರಿಯನ್ನು ವಿವರಿಸಿ, ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.
ಇಲಾಖಾ ಇಂಜಿನಿಯರ್ ಅವರು ಕೂಡಾ ಕಾಟಾಚಾರಕ್ಕೆ ಕೆಲಸ ಮಾಡದೇ ಕಾಮಗಾರಿಯನ್ನು ಸರಿಯಾಗಿ ನಿಭಾಯಿಸುವಂತೆ ಎಚ್ಚರಿಕೆ ಕೊಟ್ಟರು. ಗುತ್ತಿಗೆದಾರರು ಈ ಕಾಮಗಾರಿ ನಡೆಸಿದ್ದನ್ನು ಮತ್ತೆ ಸರಿ ಮಾಡಿಕೊಡಲು ಒಪ್ಪಿಕೊಂಡರು. ಈ ಸಂದರ್ಭ ಗ್ರಾಮಸ್ಥರಾದ ಜಯರಾಮ ಆಚಾರ್ಯ, ಜಗದೀಶ ಗೌಡ, ಲಿಂಗಪ್ಪ, ಆನಂದ ಆಚಾರ್ಯ ಮತ್ತಿತರರು ಇದ್ದರು.