ಪುತ್ತೂರು: ವಯನಾಡ್ನಲ್ಲಿ ಸಂಭವಿಸಿದ್ದ ಭೂಕುಸಿತ ದುರಂತದ ಬಗ್ಗೆ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ರೀತಿಯ ಸಂದೇಶಗಳನ್ನು ಸಾಮಾಜಿಕ ಜಾಲಾತಾಣದಲ್ಲಿ ವಿನಿಮಯ ಮಾಡಿಕೊಂಡಿದ್ದ ಆರೋಪದಲ್ಲಿ ಪುತ್ತೂರು ನಗರ ಪೊಲೀಸರು ಶರತ್ ಮಾಡಾವು ಎಂಬವರ ಮೇಲೆ ದಾಖಲಿಸಿಕೊಂಡಿದ್ದ ಸುಮೋಟೋ ಕೇಸ್ಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.
ಇತ್ತೀಚೆಗೆ ಕೇರಳದ ವಯನಾಡಿನಲ್ಲಿ ಸಂಭವಿಸಿದ್ದ ಭೂಕುಸಿತ ದುರಂತದಲ್ಲಿ ಸಾವಿಗೀಡಾದವರನ್ನುದ್ದೇಶಿಸಿ, ಸಾಮಾಜಿಕ ಜಾಲತಾಣ ವಾಟ್ಸಪ್ ಗ್ರೂಪ್ಗಳಾದ ಪುತ್ತೂರು ಡಾಕ್ಟರ್ಸ್ ಹಾಗೂ ಇನ್ನಿತರ ಗ್ರೂಪ್ಗಳಲ್ಲಿ ಪೋಸ್ಟ್ ಮಾಡಿ ಸಂದೇಶಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ. ಈ ವಿಚಾರವು ಉದ್ದೇಶಪೂರ್ವಕವಾಗಿ ಒಂದು ಸಮುದಾಯದ ವಿರುದ್ಧ ಪೋಸ್ಟ್ ಮಾಡಿ ಧರ್ಮದ ಮಧ್ಯೆ, ಕೋಮು ದ್ವೇಷ ಭಾವನೆ ಹುಟ್ಟಿಸುವ, ಕೋಮು ಸಾಮರಸ್ಯಕ್ಕೆ ಧಕ್ಕೆ ಬರುವಂತಹ, ಸಮುದಾಯಗಳ ನಡುವೆ ವೈಮನಸ್ಸು ಉಂಟು ಮಾಡಿ ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ಸಾಧ್ಯತೆಗಳಿರುವುದಾಗಿ ಆರೋಪಿಸಿ ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್.ಐ.ಆಂಜನೇಯ ರೆಡ್ಡಿ ಅವರು ಅಖಿಲ್, ಶರತ್ ಮಾಡಾವು ಮತ್ತು ಪ್ರವೀಣ್ ಪಾರೆ ಎಂಬವರ ವಿರುದ್ಧ ಸುಮೋಟೋ ಕೇಸು ದಾಖಲಿಸಿದ್ದರು.
ಬಿಎನ್ಎಸ್ ಕಾಯ್ದೆಯ ಕಲಂ 353(2)ರಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆರೋಪಿಗಳ ಪೈಕಿ ಶರತ್ ಮಾಡಾವು ಅವರು,ಇದನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಕ್ರಿಮಿನಲ್ ಪಿಟಿಷನ್ ಅರ್ಜಿ ದಾಖಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಿದೆ. ಶರತ್ ಮಾಡಾವು ಪರವಾಗಿ ಹೈಕೋರ್ಟ್ನ ವಕೀಲರಾದ ರಾಜಾರಾಮ್ ಸೂರ್ಯಂಬೈಲ್ ವಾದ ಮಂಡಿಸಿದ್ದರು.