ಕಡಬ : ಮರ್ದಾಳ ಸಮೀಪದ ಮನೆಯೊಂದರಿಂದ ಹಾಡಹಗಲೇ ಬಾಗಿಲು ಮುರಿದು ಒಳ ನುಗ್ಗಿ ನಗದು ಮತ್ತು ಚಿನ್ನಾಭರಣ ದೋಚಿದ್ದ ಕಳ್ಳತನ ಪ್ರಕರಣವನ್ನು ಭೇದಿಸಿರುವ ಕಡಬ ಪೊಲೀಸರು ಐದೇ ದಿನದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಠಾಣಾ ವ್ಯಾಪ್ತಿಯ 102 ನೆಕ್ಕಿಲಾಡಿ ಗ್ರಾಮದ ಬಜಕೆರೆ ಎಂಬಲ್ಲಿ ರವಿವಾರ ಆಟೋ ಚಾಲಕ ಕುರಿಯಕೋಸ್ ಯಾನೆ ಜೇಮ್ಸ್ ಅವರು ಪತ್ನಿ ಹಾಗೂ ಮಗನೊಂದಿಗೆ ಮನೆಗೆ ಬೀಗ ಹಾಕಿ ರವಿವಾರ ಚರ್ಚ್ ಪ್ರಾರ್ಥನೆಗಾಗಿ ತೆರಳಿದ್ದ ವೇಳೆ ಕಳ್ಳತನ ನಡೆದಿತ್ತು.
ಕಳ್ಳತನ ಆಗಿರುವ ಮನೆಯಿಂದ ಕೂದಳತೆ ದೂರದಲ್ಲಿರುವ ಮನೆಯ ಯುವಕನೇ ಈ ಕಳ್ಳತನದ ಆರೋಪಿ ಎಂಬುದು ಅಚ್ಚರಿಯ ಸಂಗತಿ. ಬಜಕರೆಯ ಸಿನು ಕುರಿಯನ್ ಬಂಧಿತ ಆರೋಪಿ. ಬೈಕ್ ನಲ್ಲಿ ಬಂದು ಕೊಟ್ಟಿಗೆಯಿಂದ ಪಿಕ್ಕಾಸು ತಂದು ಬಾಗಿಲು ಮುರಿದು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುವ ಆರೋಪಿ, ಸಾಲದ ಸುಳಿಯಲ್ಲಿ ಸಿಲುಕಿದ ಕಾರಣ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳವಾದ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಕಳ್ಳತನ ಮಾಡಿರುವ ಹಣದಲ್ಲಿ ಸಾಲವನ್ನು ತೀರಿಸಿ ಉಳಿದ ಹಣವನ್ನು ಆರೋಪಿ ತನ್ನ ಬಳಿಯೇ ಇಟ್ಟುಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕರು, ಕಡಬ ಠಾಣಾ ಎಸ್.ಐ ಅಭಿನಂದನ್, ತನಿಖಾ ಎಸ್.ಐ ಅಕ್ಷಯ್ ಡವಗಿ, ಕಾನ್ಸ್ಟೇಬಲ್ ಗಳಾದ ಸಿದ್ದಪ್ಪ,ಹರ್ಷಿತ್ ಪಾಲ್ಗೊಂಡಿದ್ದರು.