ಉಪ್ಪಿನಂಗಡಿ: ಇಲ್ಲಿನ ಬಿಎಸ್ಸೆನ್ನೆಲ್ ಕಚೇರಿಯಲ್ಲಿರುವ ಆಧಾರ್ ಕಾರ್ಡ್ ಕೇಂದ್ರದಲ್ಲಿ ದುಪ್ಪಟ್ಟು ಹಣ ಪಡೆದು ಸರದಿ ಸಾಲಿನಲ್ಲಿ ಮೊದಲ ಪ್ರಾಶಸ್ತ್ಯ ನೀಡುವ ಕುರಿತಾಗಿ ವ್ಯಕ್ತಿಯೋರ್ವರು ಆರೋಪಿಸಿದಾಗ ಅಲ್ಲಿ ಮಾತಿನ ಚಕಮಕಿ ನಡೆದು, ಬಳಿಕ ಪೊಲೀಸರು ಎಂಟ್ರಿಯಾಗಿ ಇದರ ಗುತ್ತಿಗೆದಾರನಿಂದ ಮುಚ್ಚಳಿಕೆ ಬರೆಸಿಕೊಂಡ ಘಟನೆ ನಡೆದಿದೆ.
ಇಲ್ಲಿನ ಬಿಎಸ್ಸೆನ್ನೆಲ್ ಕಚೇರಿಯಲ್ಲಿ ಖಾಸಗಿ ಗುತ್ತಿಗೆದಾರ ಸಂಸ್ಥೆಯೊಂದು ಆಧಾರ್ ಕಾರ್ಡ್ ಕೇಂದ್ರದ ಜವಾಬ್ದಾರಿ ವಹಿಸಿಕೊಂಡಿದ್ದು, ಇಲ್ಲಿಗೆ ಆದಂ ಕೊಪ್ಪಳ ಎಂಬವರು ತನ್ನ ಮಗಳ ಆಧಾರ್ ಕಾರ್ಡ್ ತಿದ್ದುಪಡಿಗೆ ಬಂದಿದ್ದು, ಟೋಕನ್ ಅನ್ನು ಕೂಡಾ ಪಡೆದಿದ್ದರು. ಆದರೆ ಟೋಕನ್ ಪ್ರಕಾರ ಸರದಿ ಸಾಲಿನಲ್ಲಿ ಜನರನ್ನು ಬಿಡದೇ ಆಧಾರ್ ಕಾರ್ಡ್ ಕೆಲಸಗಳಿಗೆ ನಿಗದಿಗಿಂತ ಜಾಸ್ತಿ ಹಣ ಪಡೆದು ಅವರನ್ನು ಬಿಡುತ್ತಿರುವುದು ಕಂಡು ಬಂತು. ಈ ಬಗ್ಗೆ ಆದಂ ಕೊಪ್ಪಳ ಅವರು ಅಲ್ಲಿನ ಸಿಬ್ಬಂದಿಯನ್ನು ಪ್ರಶ್ನಿಸಿದ್ದು, ಇದು ಮಾತಿನ ಚಕಮಕಿಗೂ ಕಾರಣವಾಯಿತು. ಬಳಿಕ ಅವರು ಉಪ್ಪಿನಂಗಡಿ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ವಿಚಾರಣೆ ನಡೆಸಿ, ಗುತ್ತಿಗೆದಾರನಿಗೆ ಎಚ್ಚರಿಕೆ ನೀಡಿದ್ದರಲ್ಲದೆ, ಆತನಿಂದ ಮುಚ್ಚಳಿಕೆಯನ್ನು ಬರೆಸಿಕೊಂಡು ಈ ಪ್ರಕರಣವನ್ನು ಸುಖಾಂತ್ಯಗೊಳಿಸಿದರು.