ಪುತ್ತೂರು: ಗ್ರಾಮ ಆಡಳಿತ ಅಧಿಕಾರಿಗಳಿಂದ ವಿವಿಧ ಬೇಡಿಕೆಗೆ ಆಗ್ರಹಿಸಿ ಅನಿರ್ದಿಷ್ಠಾವಧಿ ಮುಷ್ಕರ

0

ಪುತ್ತೂರು :ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳು ಮತ್ತು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಆದೇಶದ ಮೇರೆಗೆ 2ನೇ ಹಂತದ ಅನಿರ್ದಿಷ್ಠಾವಧಿ ಮುಷ್ಕರ ಫೆ.10ರಿಂದ ರಾಜ್ಯವಾಪ್ತಿಯಲ್ಲಿ ನಡೆಯುತ್ತಿದೆ. ಪುತ್ತೂರು ತಾಲೂಕು ಆಡಳಿತದ ಮುಂದೆ ತಾಲೂಕು ಸಮಿತಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಯುತ್ತಿದೆ.


ತಾ.ಪಂ ಕಾರ್ಯನಿರ್ವಹಕ ಅಧಿಕಾರಿ ನವೀನ್ ಭಂಡಾರಿ ಸಹಿತ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳನ್ನು ಆಲಿಸಿದ್ದಾರೆ ಎಂದು ತಿಳಿದು ಬಂದಿದೆ. ತಾಲೂಕು ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ರಾಧಾಕೃಷ್ಣ ಕೆ.ಎನ್, ಪ್ರಧಾನ ಕಾರ್ಯದರ್ಶಿ ನರಿಯಪ್ಪ, ಕೋಶಾಧಿಕಾರಿ ಅಶ್ವಿನಿ ಕೆ ಸಹಿತ ಹಲವಾರು ಮಂದಿ ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಸಾರ್ವಜನಿಕರ ಕೆಲಸಕ್ಕೆ ತೊಂದರೆ ಆಗದಂತೆ ಮುಷ್ಕರ ನಡೆಸಲಾಗುತ್ತಿದೆ ಎಂದು ಸಂಘಟನೆಯಿಂದ ಮಾಹಿತಿ ನೀಡಲಾಗಿದೆ.


ವಿವಿಧ ಬೇಡಿಕೆಗಳು:
2024ರ ಸೆ. 26ರಿಂದ ಅ.3ರ ವರೆಗೆ ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ಧಿಷ್ಟಾವಧಿ ಮುಷ್ಕರದ ಸಂದರ್ಭದಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರಿಂದ ಮುಷ್ಕರ ಹಿಂಪಡೆಯಲಾಗಿತ್ತು. ಆದರೆ, ಈವರೆಗೂ ಭರವಸೆ ಈಡೇರಿಸದ ಕಾರಣ 2ನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ.


ಗ್ರಾಮ ಆಡಳಿತ ಅಧಿಕಾರಿಗಳ ಪ್ರಮುಖ ಬೇಡಿಕೆಗಳಾದ ರಾಜ್ಯಾದ್ಯಂತ ಆಧಾರ್ ಸೀಡಿಂಗ್ ಪ್ರಕ್ರಿಯೆಯಲ್ಲಿ ಪತ್ತೆಯಾಗಿರುವ ರೂ. 51.5 ಲಕ್ಷ ಮೃತ ಖಾತೆದಾರರ ಪಹಣಿ ದಾಖಲೆ ಅಭಿಯಾನ ಮಾದರಿಯಲ್ಲಿ ವಾರಸುದಾರರ ಹೆಸರುಗಳಿಗೆ ಪೌತಿ ಖಾತೆ ದಾಖಲಿಸುವಂತೆ ಇ-ಪೌತಿ ಖಾತಾ ಆಂದೋಲನ ಕೈಬಿಡಬೇಕು. ಚಿಕ್ಕಮಗಳೂರು ಜಿಲ್ಲೆಯಲ್ಲಿ 30 ಗ್ರಾಮ ಆಡಳಿತ ಅಧಿಕಾರಿಗಳ ವಾರ್ಷಿಕ ವೇತನ ಬಡ್ತಿಯನ್ನು ತಡೆದು ನೈಸರ್ಗಿಕ ನ್ಯಾಯ ತತ್ವಗಳನ್ನು ಹಾಗೂ ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಹೊರಡಿಸಿರುವ ದಂಡನಾ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಅಂತರ್ ಜಿಲ್ಲಾ ವರ್ಗಾವಣೆಯ ಕೆಸಿಎಸ್‌ಆರ್ ನಿಯಮ 16ಎ ರ ಉಪಖಂಡ(2)ನ್ನು ಮರುಸ್ಥಾಪಿಸುವ ಬಗ್ಗೆ ಅಥವಾ ಇತರೆ ಎಲ್ಲಾ ಇಲಾಖೆಗಳಲ್ಲಿರುವಂತೆ ಕಂದಾಯ ಇಲಾಖೆಯಲ್ಲಿ ವರ್ಗಾವಣೆಗಾಗಿ ವಿಶೇಷ ಮಾರ್ಗಸೂಚಿ ರಚಿಸಬೇಕು. ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತ ಕಚೇರಿ, ಗುಣಮಟ್ಟದ ಟೇಬಲ್, ಕುರ್ಚಿ, ಅಲ್ಮೀರಾ, ಮೊಬೈಲ್, ಲ್ಯಾಪ್‌ಟಾಪ್, ಪ್ರಿಂಟರ್ ಹಾಗೂ ಸ್ಕ್ಯಾನರ್‌ಗಳನ್ನು ಒದಗಿಸಬೇಕು. ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶ ನೀಡಬೇಕು.ಕಂದಾಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಎಲ್ಲಾ ವೃಂದಗಳನ್ನು ಒಳಗೊಂಡಂತೆ ನೀಡುತ್ತಿರುವ ಅನುಕಂಪದ ನೇಮಕಾತಿಯ ಹುದ್ದೆಯ ವೃಂದ ಹಾಗೂ ನೇಮಕಾತಿ ತಿದ್ದುಪಡಿ ಮಾಡಬೇಕು. ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಜೀವಹಾನಿ ಸಂಭವಿಸಿದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಮಂಜೂರು ಮಾಡಬೇಕು. ಪ್ರಯಾಣ ಭತ್ಯೆಯನ್ನು 500ರಿಂದ 5000 ರೂ. ಹೆಚ್ಚುವರಿ ಮಾಡಬೇಕು. ಬೆಳೆ ಸಮೀಕ್ಷೆ, ಬೆಳೆ ಹಾನಿ ಪರಿಹಾರದ ಕೆಲಸವನ್ನು ಕೃಷಿ, ತೋಟಗಾರಿಕೆ ಇಲಾಖೆಗೆ ನಿರ್ವಹಿಸುವಂತೆ ಆದೇಶಿಸಬೇಕು. ಮ್ಯೂಟೇಶನ್ ಅವಧಿ ದಿನವನ್ನು ವಿಸ್ತರಿಸಬೇಕು. ಪ್ರೋಟೋಕಾಲ್ ಕೆಲಸದಿಂದ ಗ್ರಾಮ ಆಡಳಿತ ಅಧಿಕಾರಿಗಳನ್ನು ಕೈಬಿಡಬೇಕು. ಜಾಬ್ ಚಾರ್ಟ್ ನಿಗದಿಪಡಿಸಬೇಕು. ದಫರ್ ಹಾಗೂ ಜಮಾಬಂದಿಯನ್ನು ರದ್ದುಪಡಿಸಬೇಕು. ಹಾಗೂ ರಾಜ್ಯದ ಗ್ರಾಮ ಸಹಾಯಕರಿಗೆ ಸೇವಾಭದ್ರತೆಯನ್ನು ಒದಗಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ 2ನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಮುಷ್ಕರದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ತಾಲೂಕಿನ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.

ವರ್ಗಾವಣೆ ವಿಶೇಷ ಮಾರ್ಗಸೂಚಿ ರಚಿಸದೆ ಇರುವದೇ ಹಲವು ಸಮಸ್ಯೆ:
ವರ್ಗಾವಣೆಯಲ್ಲಿ ವಿಶೇಷ ಮಾರ್ಗಸೂಚಿಯನ್ನು ಮಾಡದಿದ್ದರೆ ನಮಗೆ ಹಲವು ಸಮಸ್ಯೆಗಳೂ ಎದುರಾಗಲಿವೆ ಎಂದು ಗ್ರಾಮ ಆಡಳಿತಾಧಿಕಾರಿ ಸಂಘ ತಿಳಿಸಿದೆ. ನೌಕರರ ಕೌಟುಂಬಿಕ ಸಮಸ್ಯೆ, ಸಣ್ಣ ಮಕ್ಕಳ ಪಾಲನೆ/ ಪೋಷಣೆ, ಮಕ್ಕಳ ವಿದ್ಯಾಭ್ಯಾಸದ ಸಮಸ್ಯೆ, ದೂರದ ಊರಿನಲ್ಲಿರುವ ವಯಸ್ಸಾಗಿರುವ ತಂದೆ ತಾಯಿಗಳ ಪೋಷಣೆ ಮಾಡಲು ಕಷ್ಟ. ಗರ್ಭಿಣಿಯರು / ಬಾಣಂತಿಯರ ವೈಯುಕ್ತಿಕ ಸಮಸ್ಯೆಗಳು, ಪತಿ ಪತ್ನಿಯ ನಡುವೆ ಬಿರುಕು ಮೂಡುತ್ತಿರುವುದು, ಅಂಗವಿಕಲ ನೌಕರರಿಗೆ ಜೀವನ ನಡೆಸುವುದು ಕಷ್ಟ ಎಂದು ಸಂಘಟನೆ ತಿಳಿಸಿದೆ.

LEAVE A REPLY

Please enter your comment!
Please enter your name here