ಐದಾರು ಎಕ್ರೆ ಜಾಗದಲ್ಲಿನ ಗೇರುಮರಗಳು ಬೆಂಕಿಗಾಹುತಿ | ಅಪಾರ ನಷ್ಟ
ನೆಲ್ಯಾಡಿ: ಗೇರುತೋಪಿಗೆ ಬೆಂಕಿಬಿದ್ದ ಪರಿಣಾಮ ಐದಾರು ಎಕ್ರೆ ಜಾಗದಲ್ಲಿದ್ದ ನೂರಾರು ಫಲಭರಿತ ಗೇರುಮರಗಳು ಬೆಂಕಿಗಾಹುತಿಯಾಗಿ ಅಪಾರ ನಷ್ಟ ಸಂಭವಿಸಿರುವ ಘಟನೆ ಗೋಳಿತ್ತೊಟ್ಟು ಸಮೀಪ ಶಾಂತಿಮಾರ್ ವ್ಯಾಪ್ತಿಯಲ್ಲಿ ಫೆ.24ರಂದು ಅಪರಾಹ್ನ ನಡೆದಿದೆ. ಗ್ರಾಮಸ್ಥರು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನಿಂದ ಹರಡಿದ ಬೆಂಕಿಯಿಂದಾಗಿ ಈ ಅನಾಹುತ ಸಂಭವಿಸಿದೆ ಎಂದು ಶಂಕಿಸಲಾಗಿದೆ.
ಗೋಳಿತ್ತೊಟ್ಟು ಸಮೀಪ ಕೊಣಾಲು ಗ್ರಾಮದ ಬೊಳ್ಳಿಗುಡ್ಡೆ, ಶಾಂತಿಮಾರು, ಅಂಬರ್ಜೆ, ತಿರ್ಲೆ, ಡೆಬ್ಬೇಲಿ ವ್ಯಾಪ್ತಿಯ ಸುಮಾರು ಐದಾರು ಎಕ್ರೆ ಜಾಗಕ್ಕೆ ಬೆಂಕಿ ಹರಡಿದ್ದು ಈ ಜಾಗದಲ್ಲಿದ್ದ ಗೇರುಮರಗಳು, ಹುಲ್ಲುಗಾವಲು ಹಾಗೂ ಇತರೇ ಗಿಡಬಳ್ಳಿಗಳು ಬೆಂಕಿಗಾಹುತಿಯಾಗಿವೆ. ಫಲಭರಿತ ನೂರಾರು ಗೇರು ಮರಗಳು ಬೆಂಕಿಗೆ ಆಹುತಿಯಾಗಿವೆ. ಇದರಿಂದಾಗಿ ಸಾವಿರಾರು ರೂ.ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಎರಡು ಮನೆ ತನಕ ಬಂದ ಬೆಂಕಿ:
ಗೇರು ತೋಪಿನಲ್ಲಿ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಗೆ ಸುತ್ತಲೂ ಹರಡಿದ್ದು ಶಾಂತಿಮಾರು ಸಮೀಪ ಎರಡು ಮನೆಯ ಅಂಗಳದ ತನಕ ಬೆಂಕಿ ಹರಡಿಕೊಂಡು ಬಂದಿದೆ. ಶಾಂತಿಮಾರು ನಿವಾಸಿ ಅಂಗನವಾಡಿ ಶಿಕ್ಷಕಿ ಕಲಾವತಿ ಮತ್ತು ಲಿಂಗಪ್ಪ ಗೌಡ ದರ್ಖಾಸು ಎಂಬವರ ಮನೆಯ ಅಂಗಳದ ತನಕ ಬೆಂಕಿ ಹರಡಿದೆ. ಗ್ರಾಮಸ್ಥರು ಸಕಾಲಿಕವಾಗಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿ ಸಂಭಾವ್ಯ ಅನಾಹುತ ತಪ್ಪಿಸಿದ್ದಾರೆ. ಕಲಾವತಿಯವರ ಅಂಗಳದಲ್ಲಿದ್ದ ಹುಲ್ಲು ಹಾಗೂ ಇತರೇ ಸೊತ್ತುಗಳು ಬೆಂಕಿಗಾಹುತಿಯಾಗಿದ್ದು ಅಲ್ಲೇ ಪಕ್ಕದಲ್ಲಿ ದನದ ಕೊಟ್ಟಿಗೆಯಲ್ಲಿ ದನಗಳೂ ಇತ್ತು. ಮನೆಯಲ್ಲಿ ಯಾರೂ ಇರಲಿಲ್ಲ. ಅಂಗಳದಲ್ಲಿ ಬೆಂಕಿ ಉರಿಯುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ನೀರು ಹಾಕಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಬೆಂಕಿ ನಂದಿಸಿದ ಗ್ರಾಮಸ್ಥರು:
ಗೇರು ತೋಪಿಗೆ ಬೆಂಕಿ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ಪರಿಸರದ ನೂರಾರು ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಮೂರ‍್ನಾಲ್ಕು ಗಂಟೆ ಶ್ರಮವಹಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಗ್ರಾಮಸ್ಥರಾದ ಲೋಕೇಶ್ ಶಾಂತಿಮಾರು, ಚಂದ್ರಶೇಖರ ಶಾಂತಿಮಾರು, ಶರತ್ ಶಾಂತಿಮಾರು, ಪುಷ್ಪಾ ಶಾಂತಿಮಾರು, ಕಲಾವತಿ ಶಾಂತಿಮಾರು, ಭಾರತಿ ಶಾಂತಿಮಾರು, ಜನಾರ್ದನ ಶಾಂತಿಮಾರು, ಸಂದೇಶ್ ಏಡ್ಮೆ, ಮನೀಷ್ ಶಾಂತಿಮಾರು, ಮಧುರ ಶಾಂತಿಮಾರು, ಜ್ಯೋತಿ ಶಾಂತಿಮಾರು, ಸಂದೀಪ್ ಏಡ್ಮೆ, ಶೇಖರ ಶಾಂತಿಮಾರು, ಶ್ರೀಧರ ಅಂಬರ್ಜೆ, ಶೇಖರ ಅಂಬರ್ಜೆ, ಗಣೇಶ್ ಕಲ್ಲಡ್ಕ, ಡೀಕಯ್ಯ ಕೊಚ್ಚಿಲ, ರುಕ್ಮಯ ತಿರ್ಲೆ, ಡೀಕಯ್ಯ ತಿರ್ಲೆ, ಮಹಮ್ಮದ್ ರಫೀಕ್ ಕೋಲ್ಪೆ, ರಾಮಚಂದ್ರ ಪಾಲೇರಿ, ಕಿರಣ್ ಡೆಬ್ಬೇಲಿ, ಗೋಳಿತ್ತೊಟ್ಟು ಗ್ರಾ.ಪಂ.ಕಾರ್ಯದರ್ಶಿ ಚಂದ್ರಾವತಿ, ಸದಸ್ಯ ನೋಣಯ್ಯ ಗೌಡ ಡೆಬ್ಬೇಲಿ, ಸಿಬ್ಬಂದಿಗಳಾದ ದಿನೇಶ್, ಯಶವಂತ, ಪಂಜ ವಲಯ ಅರಣ್ಯಾಧಿಕಾರಿ ಸಂಧ್ಯಾ, ಉಪವಲಯಾರಣ್ಯಾಧಿಕಾರಿ ಸುನೀಲ್‌ಕುಮಾರ್, ಅರಣ್ಯ ವೀಕ್ಷಕ ಜನಾರ್ದನ ಡಿ.ಪಿ., ಕೆಸಿಡಿಸಿ ಅರಣ್ಯ ವೀಕ್ಷಕ ಪೂವಪ್ಪ ಸೇರಿದಂತೆ ಹಲವಾರು ಮಂದಿ ಬೆಂಕಿ ನಂದಿಸಿದರು.

ಟಿ.ಸಿ.ಯಿಂದಲೇ ಹರಡುತ್ತಿರುವ ಬೆಂಕಿ:
ಗೇರುತೋಪಿನ ಮಧ್ಯೆ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಪೆಟ್ಟಿಗೆ ಇದ್ದು ವಿದ್ಯುತ್ ತಂತಿಯೂ ಗೇರುತೋಪಿನ ಮಧ್ಯೆಯೇ ಹಾದು ಹೋಗಿದೆ. ಬಿಸಿಲಿನ ತಾಪಕ್ಕೆ ಈ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನಿಂದಲೇ ಬೆಂಕಿಯ ಕಿಡಿ ಒಣಗಿರುವ ಹುಲ್ಲುಗಾವಲುಗೆ ಬಿದ್ದು ಕ್ಷಣ ಮಾತ್ರದಲ್ಲಿ ಎಲ್ಲೆಡೆ ಹರಡುತ್ತಿದೆ. ಕಳೆದ ಮೂರ‍್ನಾಲ್ಕು ವರ್ಷಗಳಿಂದ ನಿರಂತರವಾಗಿ ಈ ಗೇರುತೋಪು ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ಫಲಭರಿತ ಗೇರುಮರಗಳು ಸುಟ್ಟುಹೋಗುತ್ತಿವೆ ಎಂದು ಸ್ಥಳೀಯರು ಹೇಳಿದ್ದಾರೆ.