ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಮುಖ ಕವಚಕ್ಕೆ 104 ವರ್ಷದ ಇತಿಹಾಸ

0

ಪುತ್ತೂರು:ಇತಿಹಾಸ ಪ್ರಸಿದ್ಧ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರು ವಿಶ್ವದೆಲ್ಲೆಡೆ ನೆಲೆಸಿರುವ ಅಗಣಿತ ಭಕ್ತರ ಆರಾಧ್ಯಮೂರ್ತಿ.ಈ ಕ್ಷೇತ್ರದ ಮಹಾಲಿಂಗಕ್ಕೆ ರಜತ ಮುಖಕವಚ ಸಮರ್ಪಿಸಿ ಇಂದಿಗೆ 104 ವರ್ಷ ಸಂದಿದೆ.

ರಜತ ಮುಖಕವಚ


ಕಾಶ್ಯಪ ಶಿಲ್ಪ, ಮಾನಸಾರ, ಸಮರಾಂಗಣ, ಸೂತ್ರಧಾರ, ಶಿಲ್ಪರತ್ನ, ಮಯಶಾಸ್ತ್ರ, ವಿಶ್ವಕರ್ಮ ವಾಸ್ತುಶಾಸ್ತ್ರ, ವಿಶ್ವಕರ್ಮ ಸಂಹಿತಾ,ಅಗಸ್ತ್ಯ ಸಕಲಾಧಿಕಾರ,ಕಾಶ್ಯಪ ಸಂಹಿತಾ,ರಾಜವಲ್ಲಭ ಇತ್ಯಾದಿ ಪ್ರಾಚೀನ ಗ್ರಂಥಗಳು-ಗೃಹ,ರಾಜಾಗೃಹ,ಯಂತ್ರಶಾಲಾ,ನಗರ ನಿರ್ಮಾಣ ಹಾಗೂ ದೇವಾಲಯ ಮತ್ತು ದೇವತಾಮೂರ್ತಿ ನಿರ್ಮಾಣದ ವಿಷಯಗಳನ್ನು ಆಮೂಲಾಗ್ರವಾಗಿ ತಿಳಿಸುವುದರಿಂದ ಶಿಲ್ಪಶಾಸಾನುಯಾಯಿಗಳಿಗೆ ಅವಶ್ಯಕವಾಗಿದೆ.ಇವೆಲ್ಲವನ್ನೂ ಕರಗತ ಮಾಡಿಕೊಂಡ ಶಿಲ್ಪಿಗಳಿಂದ ದೇಶಾದ್ಯಂತ ದೇವಾಲಯಗಳು ಉನ್ನತ ಸ್ಥಿತಿಯಲ್ಲಿದೆ.

ದರ್ಬೆಯಲ್ಲಿರುವ ಈ ಮನೆಯಲ್ಲೇ ಮುಖಕವಚ ರಚಿಸಲ್ಪಟ್ಟಿತು.


ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಮೂಲ ಲಿಂಗಕ್ಕೆ ಬಹಳ ಹಿಂದಿನ ಕಾಲದಲ್ಲಿ ಹಿತ್ತಾಳೆಯ ಲಿಂಗರೂಪ, ತ್ರಿನೇತ್ರಗಳನ್ನೊಳಗೊಂಡ ಮುಖಕವಚದಿಂದ ಅಲಂಕರಿಸಲಾಗುತ್ತಿತ್ತು. 1920ರಲ್ಲಿ ಅಂದಿನ ದೇವಾಲಯದ ಆಡಳಿತೆಯವರು, ಮಹಾಲಿಂಗೇಶ್ವರನಿಗೆ ಬೆಳ್ಳಿಯ ಮುಖಕವಚವನ್ನು ರಚಿಸಲು ಸಂಕಲ್ಪಿಸಿ ಆಗಿನ ಕಾಲದಲ್ಲಿ ಚಿನ್ನ ,ಬೆಳ್ಳಿ ಆಭರಣಗಳಿಂದ ದೇವರ-ದೈವಗಳ ಮುಖವಾಡಗಳನ್ನು ರಚಿಸುವ ಖ್ಯಾತ ಲೋಹಶಿಲ್ಪಿ ಮಹಾಲಿಂಗ ಆಚಾರ್ಯ ಎಂಬವರನ್ನು ದೇವಳಕ್ಕೆ ಕರೆಸಿ, ಕಾರ್ಯ ಒಪ್ಪಿಸಿದರು.

ಕೀರ್ತಿಶೇಷ ಲೋಹಶಿಲ್ಪಿ ಮಹಾಲಿಂಗ ಆಚಾರ್ಯ


ಪ್ರಸನ್ನ ವದನ:
ಮಹಾಲಿಂಗ ಆಚಾರ್ಯರು 283 ತೊಲೆ (3295 ಗ್ರಾಂ ಮತ್ತು 950 ಮಿಲಿ ಗ್ರಾಂ ಬೆಳ್ಳಿಯನ್ನು ಬಳಸಿ, ಸೌಮ್ಯರೂಪಿ, ಪ್ರಸನ್ನವದನ, ಕೊರಳಲ್ಲಿ ನಾಗನನ್ನು ಸುತ್ತುವರಿದು ಹೆಡೆಗಳನ್ನು ಶಿರದ ಮೇಲೇರಿಸಿ,ನೇತ್ರಗಳು ಕರ್ಣಗಳಲ್ಲಿನ ಒಂಟಿ, ಸ್ವರ್ಣ ಹೊಂದಿದ ಶೋಭೆಯೊಂದಿಗೆ ಅತ್ಯಾಕರ್ಷಕ ಬೆಳ್ಳಿಯ ಮುಖಕವಚವನ್ನು ಸುಸೂತ್ರವಾಗಿ ತಯಾರಿಸಿಕೊಟ್ಟರು.1921ರಲ್ಲಿ ದೇವರಿಗೆ ಸಮರ್ಪಣೆಗೊಂಡು ಇಂದಿಗೂ ಮಧ್ಯಾಹ್ನ ಮತ್ತು ರಾತ್ರಿ ಪೂಜೆಗಾಗಿ ಅಲಂಕರಿಸಲ್ಪಡುತ್ತಿದೆ.ದೇವಾಲಯ ಮತ್ತು ದೇವತಾಮೂರ್ತಿಗಳ ಕೆತ್ತನೆಗಳು,ಆಭರಣಗಳು ನಿರ್ಮಿತವಾಗುವಾಗ ಸ್ವತಃ ದೇವತೆಗಳೇ ಶಿಲ್ಪಿಗಳಲ್ಲಿ ಆವಾಹನೆಯಾಗಿ ರಚನಾಕಾರ್ಯದಲ್ಲಿ ಸಹಕರಿಸುತ್ತಾರೆ ಎಂಬ ಪ್ರತೀತಿ ಇದೆ.

100 ವರ್ಷಗಳ ಹಿಂದೆ ಉಪಯೋಗಿಸುತ್ತಿದ್ದ ಸಾಧನಗಳು


ಮನೆಗೆ ಬಂದು ಗೌರವಿಸಿದರು:
ಪುತ್ತೂರಿನ ದರ್ಬೆ ಗೇಟ್ ನಿವಾಸಿಯಾಗಿದ್ದ ದಿ.ಮಹಾಲಿಂಗ ಆಚಾರ್ಯರು ವಂಶಪಾರಂಪರ್ಯವಾಗಿ ತಮಗೆ ಬಂದ ಕುಸುರಿಕೆಲಸದಲ್ಲಿ ಅಪಾರ ನೈಪುಣ್ಯತೆಯನ್ನು ಹೊಂದಿದ್ದರು.ಆ ಕಾರಣದಿಂದಾಗಿ ಈ ಮುಖಕವಚ ಅಷ್ಟು ಸುಂದರವಾಗಿ ರೂಪುಗೊಂಡಿದೆ.ಇಂದು ದೇವರ ಸರ್ವಭಕ್ತರ ಕೇಂದ್ರಬಿಂದುವಾಗಿ ಕಂಗೊಳಿಸುತ್ತಿದೆ.ದೇವರಿಗೆ ಮುಖ ಕವಚ ಸಮರ್ಪಣೆಯಾದ ಬಳಿಕ ಮಹಾಲಿಂಗ ಆಚಾರ್ಯರನ್ನು ದೇವಸ್ಥಾನದ ಅಂದಿನ ಆಡಳಿತದವರು ಅವರ ದರ್ಬೆ ಗೇಟ್ ಮನೆಗೇ ತೆರಳಿ ಗೌರವಿಸಿದ್ದರು ಎಂದು ಅವರ ಮನೆಯವರು, ಹಿರಿಯವರು ಹೇಳಿದ್ದ ಕತೆಯನ್ನು ನೆನಪಿಸುತ್ತಾರೆ.ಅವರು ಬಳಸುತ್ತಿದ್ದ ಅಂದಿನ ಕಾಲದ ಕೆಲವು ಸಲಕರಣೆಗಳನ್ನು ಜೋಪಾನ ಮಾಡಿದ್ದಾರೆ.

100 ವರ್ಷಗಳ ಹಿಂದೆ ಉಪಯೋಗಿಸುತ್ತಿದ್ದ ಸಾಧನಗಳು

ಹಿಂದೆ ಹಿತ್ತಾಳೆಯ, ಲಿಂಗರೂಪದ ತ್ರಿನೇತ್ರಗಳನ್ನೊಳಗೊಂಡ ಮುಖ ಕವಚ ಅಳವಡಿಸಲಾಗುತ್ತಿತ್ತು. ನಂತರದಲ್ಲಿ ಶತಮಾನದಿಂದ ಅಲಂಕೃತಗೊಳ್ಳುತ್ತಿರುವ ದೇವರ ರಜತ ಮುಖಕವಚವನ್ನು ದೇವರ ಹೆಸರಿನವರೇ ರಚಿಸಿರುವುದು ಇಲ್ಲಿನ ವಿಶೇಷ.

ಪ್ರಭಾವಳಿ ಸಹಿತ ಅಲಂಕಾರ ಗೊಂಡಾಗ….

ಎಲ್ಲಾ ಕಡೆ ಕಪ್ಪು ಬಿಳುಪು ಭಾವಚಿತ್ರ
ನಂತರ ಶ್ರೀ ದೇವರ ಈ ಮುಖಕವಚ, ಪ್ರಭಾವಳಿ ಸಹಿತ ಕಪ್ಪು-ಬಿಳುಪು ಭಾವಚಿತ್ರವನ್ನು ದಿ. ಪುರುಷೋತ್ತಮ ತೋಲ್ಪಾಡಿಯವರು ಆಕರ್ಷಕವಾಗಿ ತೆಗೆದು ಸಮರ್ಪಿಸಿದರು.ಇಂದು ಪ್ರತಿನಿತ್ಯ ಮನೆ ಮನೆಗಳಲ್ಲಿ, ಕಚೇರಿ, ವಾಹನಗಳಲ್ಲಿ ಈ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿಯೇ ಸಕಲ ಭಕುತರು ತಮ್ಮ ದೈನಂದಿನ ಕಾರ್ಯವನ್ನು ಆರಂಭಿಸುತ್ತಾರೆ .

LEAVE A REPLY

Please enter your comment!
Please enter your name here