ಪುತ್ತೂರು: ಪುತ್ತೂರಿನ ಸುದಾನ ಪ್ರೌಢ ಶಾಲೆಯಲ್ಲಿ ರೋಟರಿ ಎಲೈಟ್ ನವರ ಸಹಯೋಗದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಅಲೋಶಿಯಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ರೊನಾಲ್ಡ್ ಪಿಂಟೊ ಎಸ್ ಎಸ್ ಎಲ್ ಸಿ ಪರೀಕ್ಷೆ ಎದುರಿಸುವುದು ಹೇಗೆ? ಭವಿಷ್ಯದಲ್ಲಿ ವೃತ್ತಿ ಆಯ್ಕೆ ಹೇಗೆ ಎನ್ನುವುದನ್ನು ವಿವರಿಸುತ್ತಾ ವಿಭಿನ್ನ ವೃತ್ತಿಗಳ ಬಗೆಗೆ, ಸಂಬಂಧಿತ ಶಿಕ್ಷಣ ಪಡೆಯುವ ಸಾಧ್ಯತೆಗಳ ಬಗೆಗೆ ಸುಲಭ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಜೊತೆಗಿದ್ದ ಪತ್ರಕರ್ತ ರೊ.ಮೌನೇಶ್ ವಿಶ್ವಕರ್ಮ ಅವರು ’ವಿದ್ಯಾರ್ಥಿಗಳು ತಮ್ಮ ಗುರಿಸಾಧನೆಯ ಬಗೆಗೆ ಏಕಾಗ್ರಚಿತ್ತರಾಗಬೇಕು. ಕಠಿಣ ಪರಿಶ್ರಮ, ಸೂಕ್ತ ಆಯ್ಕೆ ಮತ್ತು ಸಂಕಲ್ಪ ಶಕ್ತಿ ಇದ್ದರೆ ಮಾತ್ರ ಸಾಧನೆ ಸಾಧ್ಯ’ ಎಂದರು.
ಇಂಟರಾಕ್ಟ್ ಕ್ಲಬ್ ನ ವಿದ್ಯಾರ್ಥಿ ಪ್ರತಿನಿಧಿ ರಿಧಿಮ ಸ್ವಾಗತಿಸಿ, ವಿದ್ಯಾರ್ಥಿ ಕಾರ್ಯದರ್ಶಿ ಪಲ್ಲವಿ ವಂದಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶೋಭಾನಾಗರಾಜ್ ವಿದ್ಯಾರ್ಥಿಗಳಿಗೆ ಶಿಸ್ತುಬದ್ಧ, ಧೃಢಚಿತ್ತದ ಕಲಿಕೆಯಿಂದ ಯಶಸ್ಸಿನ ಕನಸು ನನಸಾಗಲು ಹರಸಿದರು. ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮವು ನಡೆಯಿತು.ಈ ಕಾರ್ಯಕ್ರಮವನ್ನು ಸುದಾನ ಇಂಟರಾಕ್ಟ್ ಕ್ಲಬ್ ಸ್ಪಂದನವು ಆಯೋಜಿಸಿತ್ತು.