ಪದವಿ ಪೂರ್ವ ಕಾಲೇಜಿನ 12 ನೂತನ ಕೊಠಡಿಗಳು ಉದ್ಘಾಟನೆ

0

ಆರೋಗ್ಯ, ಶಿಕ್ಷಣ, ಉದ್ಯೋಗದಿಂದ ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯ: ಅಶೋಕ್ ಕುಮಾರ್ ರೈ

ಉಪ್ಪಿನಂಗಡಿ: ಒಬ್ಬಾತ ವ್ಯಕ್ತಿ ಪೂರ್ಣ ಪ್ರಮಾಣದಲ್ಲಿ ಮನುಷ್ಯನಾಗಬೇಕಾದರೆ ಆರೋಗ್ಯ, ಶಿಕ್ಷಣ, ಉದ್ಯೋಗ ಮುಖ್ಯ. ಇದರಲ್ಲಿ ಪ್ರಮುಖವಾಗಿ ಶಿಕ್ಷಣ ಪಡೆದರೆ ಉದ್ಯೋಗ, ಆರೋಗ್ಯ ಎಲ್ಲವೂ ಪ್ರಾಪ್ತಿಯಾಗುತ್ತದೆ. ಶಿಕ್ಷಣ ನಮ್ಮಲ್ಲಿ ಇದ್ದರೆ ನಾವುಗಳು ಯಾವುದಕ್ಕೂ, ಯಾರನ್ನೂ ಅವಲಂಬಿಸಬೇಕಾಗಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯ ಸರಕಾರದ ಮೂರು ಕೋಟಿ ಅರುವತ್ತು ಸಾವಿರ ರೂಪಾಯಿ ಅನುದಾನದಲ್ಲಿ ವಿವೇಕ ಯೋಜನೆಯಡಿ ನಿರ್ಮಾಣಗೊಂಡ ನೂತನ 12 ವಿವೇಕ ತರಗತಿ ಕೊಠಡಿಗಳನ್ನು ಲೋಕಾರ್ಪಣೆಗೊಳಿಸಿ ಹಾಗೂ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಲು ಒಳ್ಳೆಯ ಅವಕಾಶಗಳಿವೆ. ಶಿಕ್ಷಣವನ್ನು ಕೇವಲ ಪದವಿಗೆ ಮಾತ್ರ ಸೀಮಿತಗೊಳಿಸಬೇಡಿ. ಐಎಎಸ್., ಐಪಿಎಸ್, ಇಂಜಿನಿಯರಿಂಗ್, ವೈದ್ಯಕೀಯ ಮೊದಲಾದವುಗಳಲ್ಲದೆ ಇನ್ನಿತರ ಹಲವು ವಿಶೇಷ ಆಸಕ್ತಿಯುತ ಕೋರ್ಸುಗಳಿವೆ. ಇವೆಲ್ಲವುಗಳಿಗೆ ವಿಫುಲ ಅವಕಾಶಗಳಿದ್ದು, ಇದರ ಸದುಪಯೋಗಪಡಿಸಿಕೊಂಡು ತಾವುಗಳು ತಮ್ಮ ಜೀವನದ ದಾರಿಯನ್ನು ನೋಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವಿದ್ಯಾರ್ಥಿಗಳು ದಿನಾ ಬೆಳಿಗ್ಗೆ ಪತ್ರಿಕೆ ಓದುವ ಅಭ್ಯಾಸ ಮಾಡಿಕೊಳ್ಳಬೇಕು. ಆ ಮೂಲಕ ಜ್ಞಾನ ಭಂಡಾರವನ್ನು ಪಡೆಯಬೇಕು. ಕಲಿಕೆಯ ಬಳಿಕ ಧೈರ್ಯದಿಂದ ಮುನ್ನುಗ್ಗಬೇಕು, ಆತ್ಮವಿಶ್ವಾಸದಿಂದ ಉದ್ಯೋಗಕ್ಕಾಗಿ ಸಂದರ್ಶನವನ್ನು ಎದುರಿಸಬೇಕು ಎಂದ ಅವರು, ಕ್ಷೇತ್ರ ವ್ಯಾಪ್ತಿಯಲ್ಲಿ ವರ್ಷಂಪ್ರತಿ 5 ಸಾವಿರ ವಿದ್ಯಾರ್ಥಿಗಳು ಹೊರ ಬರುತ್ತಾರೆ. ಇವರಿಗೆ ಉದ್ಯೋಗ ಲಭಿಸುವ ಹಾಗೆ ಆಗಬೇಕು. ಅದರ ಸಲುವಾಗಿ ಉದ್ಯಮ ಕ್ಷೇತ್ರಕ್ಕೆ ಪ್ರೋತ್ಸಾಹ ಕೊಡುವ ಕೆಲಸ ಮಾಡುತ್ತಿದ್ದು, ಈ ಮೂಲಕ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ಕೊಡಲಾಗುತ್ತಿದೆ. ನನ್ನ ಕ್ಷೇತ್ರದಲ್ಲಿ ಯಾರೂ ನಿವೇಶನ ರಹಿತರು ಇರಬಾರದು. ಅದಕ್ಕಾಗಿ 180 ಎಕ್ರೆ ಜಾಗವನ್ನು ಗುರುತಿಸಲಾಗಿದ್ದು, ಮುಂದಿನ ಆರು ತಿಂಗಳಲ್ಲಿ ಎರಡು ಸಾವಿರ ನಿವೇಶನಗಳನ್ನು ಹಂಚುವ ಕೆಲಸ ಮಾಡಲಾಗುವುದು. ಎರಡು ಗ್ರಾ.ಪಂ.ಗೊಂದರಂತೆ ಕೆಪಿಎಸ್ ಮಾದರಿ ಶಾಲೆಗಳನ್ನು ನಿರ್ಮಿಸಿ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಚಿಂತನೆ ಸರಕಾರಕ್ಕಿದ್ದು, ಆ ಬಗ್ಗೆ ಪ್ರಯತ್ನಗಳು ನಡೆಯುತ್ತಿದೆ. ಕೇವಲ ರಸ್ತೆ ನಿರ್ಮಾಣ ಮಾಡುವುದು ಮಾತ್ರ ಅಭಿವೃದ್ಧಿಯಲ್ಲ. ಅದನ್ನು ಗ್ರಾ.ಪಂ. ಕೂಡಾ ಮಾಡಬಹುದು. ಅಭಿವೃದ್ಧಿಯೆಂದರೆ ಅದಕ್ಕೊಂದು ಮಾನದಂಡ, ಭವಿಷ್ಯದ ಚಿಂತನೆ ಇರಬೇಕು. ಪುತ್ತೂರಿನಲ್ಲಿ ಬಿರುಮಲೆ ಗುಡ್ಡೆಯನ್ನು ಪ್ರವಾಸೋದ್ಯಮ ತಾಣವಾಗಿ ಪರಿವರ್ತಿಸಲು 3 ಕೋ.ರೂ. ಅನುದಾನ ಮಂಜೂರಾಗಿದೆ. ಉಪ್ಪಿನಂಗಡಿಯಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಪ್ರಯತ್ನಗಳು ಸಾಗಿವೆ. ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ತರಬೇಕೆಂಬ ಕನಸ್ಸಿದ್ದು, ಅದಕ್ಕಾಗಿ ಪ್ರಯತ್ನಗಳು ಸಾಗುತ್ತಿವೆ. ಹಲವು ದೂರದೃಷ್ಟಿಯುಳ್ಳ ಯೋಜನೆಗಳನ್ನು ತನ್ನ ಕ್ಷೇತ್ರಕ್ಕೆ ತರುವ ಪ್ರಯತ್ನ ನಡೆಯುತ್ತಿದ್ದು, ಅದಕ್ಕಾಗಿ ಮುಖ್ಯಮಂತ್ರಿ, ಸಚಿವರುಗಳನ್ನು ನಿರಂತರ ಬೆನ್ನತ್ತುವ ಕೆಲಸಗಳನ್ನು ಮಾಡುತ್ತಿದ್ದೇನೆ. ಒಟ್ಟಿನಲ್ಲಿ ನನ್ನ ಕ್ಷೇತ್ರ ಸಮಗ್ರ ಅಭಿವೃದ್ಧಿ ಕಾಣಬೇಕು. ಇಲ್ಲಿ ಉದ್ಯೋಗಗಳು ಸೃಷ್ಟಿಯಾಗಬೇಕು ಎಂಬುದೇ ನನ್ನ ಕನಸು ಎಂದರು.


ದೇವಸ್ಥಾನದ ಜಾಗವನ್ನು ಭಕ್ತಿಯಿಂದಲೇ ಬಿಟ್ಟುಕೊಡಿ:
ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಸನ್ನಿಧಿಯನ್ನು ಕೂಡಲ ಸಂಗಮದ ಹಾಗೆ ಅಭಿವೃದ್ಧಿ ಪಡಿಸಲು 352 ಕೋ. ರೂ.ಗಳ ಪ್ರಸ್ತಾವನೆ ಸಲ್ಲಿಸಿದ್ದು, ಅದಕ್ಕೆ ಮಂಜೂರಾತಿ ದೊರಕಿದೆ. ಆದ್ದರಿಂದ ದೇವಸ್ಥಾನದ ಜಾಗವನ್ನು ಅನುಭವಿಸುತ್ತಿರುವವರು ಅದನ್ನು ಭಕ್ತಿಯಿಂದಲೇ ದೇವಸ್ಥಾನಕ್ಕೆ ಬಿಟ್ಟುಕೊಡಬೇಕು. ನಿಮ್ಮ ಸಹಕಾರವಿದ್ದರೆ ನಮ್ಮದೂ ಸಹಕಾರವಿರುತ್ತದೆ. ಇಲ್ಲದಿದ್ದಲ್ಲಿ ಅಲ್ಲಿ ಜೆಸಿಬಿ ಶಬ್ಧ ಮಾಡಬೇಕಾಗುತ್ತದೆ. ಇದಕ್ಕೆ ಅವಕಾಶ ಮಾಡಿಕೊಡದೆ ಎಲ್ಲರೂ ಸಹಕಾರ ನೀಡಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಆದ್ಯತೆಯ ಕ್ಷೇತ್ರವಾಗಿರುತ್ತದೆ. ನಾವುಗಳಿಂದು ವಿಜ್ಞಾನ ಯುಗದಲ್ಲಿದ್ದು, ಭಾರತವು ಸಾಧನೆಯ ಹಾದಿಯಲ್ಲಿದೆ. ಆದ್ದರಿಂದ ವಿದ್ಯಾರ್ಥಿಗಳು ಅನ್ವೇಷಕರಾಗಬೇಕು. ತಮ್ಮದೇ ರೀತಿಯಲ್ಲಿ ಕೊಡುಗೆ ಕೊಡಬೇಕು ಎಂದ ಅವರು, ತಂದೆ ತಾಯಿಯ ನಂತರದ ಸ್ಥಾನ ಗುರುಗಳಿಗೆ. ವಿದ್ಯಾಲಯಗಳಿಂದ ಮಾತ್ರ ಸತ್ಪ್ರಜೆಗಳ ಸೃಷ್ಟಿ ಸಾಧ್ಯ. ಈ ಕಟ್ಟಡದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ದೊರಕಲಿ ಎಂದು ಶುಭಹಾರೈಸಿದರು.

ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಅಜೀಜ್ ಬಸ್ತಿಕ್ಕಾರ್ ಮಾತನಾಡಿ, ಶಾಸಕ ಅಶೋಕ್ ಕುಮಾರ್ ರೈಯವರು ಕಾಲೇಜು ಕಟ್ಟಡಕ್ಕೆಂದು ಒದಗಿಸಿದ 3.೦೦6 ಕೋ.ರೂ. ಅನುದಾನದಲ್ಲಿ ಸುಸಜ್ಜಿತ 12 ಕೊಠಡಿಗಳನ್ನು ನಿರ್ಮಿಸಲಾಗಿದೆ. ಕಳೆದ ಮೇ ತಿಂಗಳ ಮಂಗಳವಾರದ ದಿನ ಶಾಸಕರು ಇದಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಆಗ ಕೆಲವರು ಮಂಗಳವಾರ ದಿನ ಆರಂಭಿಸಿದ ಕೆಲಸ ಪೂರ್ಣಗೊಳ್ಳಬಹುದೇ ಎಂದು ಮಾತನಾಡಿಕೊಳ್ಳುತ್ತಿದ್ದರು. ಆದರೆ ಶಿಲಾನ್ಯಾಸ ನೆರವೇರಿಸಿದ ಎಂಟು ತಿಂಗಳಲ್ಲೇ ಗುತ್ತಿಗೆದಾರರು ನಮಗೆ ಕಾಮಗಾರಿಯನ್ನು ಪೂರ್ಣಗೊಳಿಸಿ ನೀಡಿದ್ದಾರೆ.

ಮಂಗಳವಾರದ ದಿನವೇ ಇದರ ಲೋಕಾರ್ಪಣೆ ಕಾರ್ಯವೂ ಆಗಿದೆ. ಆದ್ದರಿಂದ ನಮಗೆ ಶುಭ ಮಂಗಳವಾರವೆಂದರು.
ಕಾರ್ಯಕ್ರಮದಲ್ಲಿ ದಾನಿ, ನಿವೃತ್ತ ಯೋಧ ಜೆ.ಕೆ. ಪೂಜಾರಿ ಹಾಗೂ ಗುತ್ತಿಗೆದಾರ ರಝಾಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ – ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾೖಕ್‌, ದೀನರ ಕನ್ಯಾಮಾತೆ ದೇವಾಲಯದ ಧರ್ಮಗುರು ವಂ.ಫಾ. ಜೆರಾಲ್ಡ್ ಡಿಸೋಜಾ, ಮಾಲಿಕ್ ದೀನಾರ್ ಜುಮಾ ಮಸೀದಿಯ ಅಧ್ಯಕ್ಷ ಎಚ್. ಯೂಸುಫ್, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಕಾಂಗ್ರೆಸ್ ಮುಖಂಡ ಮುರಳೀಧರ ರೈ ಮಠಂತಬೆಟ್ಟು, ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯ ತೌಸೀಫ್ ಯು.ಟಿ., ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ನಝೀರ್ ಮಠ, ಅನಿ ಮಿನೇಜಸ್, ಇಬ್ರಾಹೀಂ ಯು.ಕೆ., ಅಬ್ದುಲ್ ಮಜೀದ್ ಯು.ಎಂ. ಮಠ, ಅಬ್ದುಲ್ ರಹಿಮಾನ್ ಯುನಿಕ್, ಮೋನಪ್ಪ ಪೂಜಾರಿ ಡೆಂಬಳೆ, ಸಣ್ಣಣ್ಣ ಸಂಜೀವ ಮಡಿವಾಳ, ಜಾನ್ ಕೆನ್ಯೂಟ್ ಮಸ್ಕರೇನಸ್, ವೆಂಕಪ್ಪ ಪೂಜಾರಿ, ಡಾ. ನಿರಂಜನ ರೈ, ಶ್ರೀ ನಾಗೇಶ ಪ್ರಭು, ಆದಂ ಕೊಪ್ಪಳ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಜಿ. ಕೃಷ್ಣರಾವ್ ಆರ್ತಿಲ, ಇಳಂತಿಲ ಗ್ರಾ.ಪಂ. ಸದಸ್ಯ ಇಸುಬು ಪೆದಮಲೆ, ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ಅಬ್ದುಲ್ ರಶೀದ್ ಮಠ, ಪ್ರಮುಖರಾದ ಉಮೇಶ ಶೆಣೈ, ಗೋಪಾಲ ಹೆಗ್ಡೆ, ಚಂದ್ರಶೇಖರ ಮಡಿವಾಳ ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಅಜೀಜ್ ಬಸ್ತಿಕ್ಕಾರ್ ಸ್ವಾಗತಿಸಿ, ಪ್ರಾಚಾರ್ಯ ಇಬ್ರಾಹಿಂ ಎಂ. ವಂದಿಸಿದರು. ಉಪನ್ಯಾಸಕರಾದ ಝುಬೇರ್, ತನುಶ್ರೀ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here