ಕಟ್ ಕನ್ವರ್ಶನ್ ಮತ್ತು ಅನಧಿಕೃತ ಕಟ್ಟಡಗಳಿಗೆ ಬಿ ಖಾತಾ ನೀಡಲು ಸರಕಾರದ ಆದೇಶ

0

ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ಸರಕಾರ

ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯ ಜನರಿಗೆ ಸಿಹಿ ಸುದ್ದಿಯೊಂದು ಸಿಕ್ಕಂತಾಗಿದೆ, ಕಳೆದ 14 ವರ್ಷಗಳಿಂದ ಖಾತಾ ಪಡೆಯುವುದಕ್ಕೋಸ್ಕರ ಅಲೆದಾಟ ಮಾಡುತ್ತಿದ್ದ ಪುತ್ತೂರು ನಗರಸಭಾ ವ್ಯಾಪ್ತಿಯ 1200 ಮಂದಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ, ನಗರದಲ್ಲಿ ಕಟ್ ಕನ್ವರ್ಶನ್ ಮತ್ತು ಅನಧಿಕೃತ ( ಪರವಾನಿಗೆ ಇಲ್ಲದೆ ) ನಿರ್ಮಾಣವಾದ ಕಟ್ಟಡಗಳಿಗೆ ಬಿ ಖಾತಾ ನೀಡಲು ರಾಜ್ಯ ಸರಕಾರ ಅಧಿಸೂಚನೆಯನ್ನು ಹೊರಡಿಸಿದೆ.


2014 ರಿಂದ ಕಟ್‌ಕನ್ವರ್ಶನ್ ಮಾಡಿಸಿದವರಿಗೆ ಮತ್ತು ತನ್ನ ಸ್ವಂತ ಜಮೀನಿನಲ್ಲಿ ಪರವಾನಿಗೆ ಇಲ್ಲದೆ ಮನೆ ನಿರ್ಮಾಣ ಮಾಡಿದವರಿಗೆ ಖಾತಾ ಮಾಡಲು ಅವಕಾಶ ಇರಲಿಲ್ಲ. ಖಾತಾ ನೀಡುವಂತೆ ಹಲವು ಬಾರಿ ಸರಕಾರದ ಮುಂದೆ ಪ್ರಸ್ತಾಪವೂ ಆಗಿತ್ತು. ಇದು ಪುತ್ತೂರು ನಗರ ಸೇರಿದಂತೆ ರಾಜ್ಯಾದ್ಯಂತ ಇದೇ ವಿಚಾರಕ್ಕೆ ಸಂಬಂದಿಸಿದಂತೆ ಹೋರಾಟಗಳು ನಡೆಯುತ್ತಿತ್ತು.

ಏನಿದು ಅನಧಿಕೃತ ಕಟ್ಟಡಗಳು:
ನಗರಸಭಾ ವ್ಯಾಪ್ತಿಯಲ್ಲಿ ತನ್ನ ಸ್ವಂತ ಜಮೀನಿನಲ್ಲಿ ಮನೆ ಅಥವಾ ಕಟ್ಟಡ ನಿರ್ಮಾಣ ಮಾಡಿಕೊಂಡವರು, ಕಟ್ಟಡ ಅಥವಾ ಮನೆ ನಿರ್ಮಾಣದ ವೇಳೆ ನಗರಸಭೆಯಿಂದ ಪರವಾನಿಗೆ ಪಡೆಯದೆ ಕಟ್ಟಡ ನಿರ್ಮಾಣ ಮಾಡಿಕೊಡಿದ್ದರು. ನಗರಸಭಾ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಮಾಡುವಲ್ಲಿ ಪಾಲಿಸಬೇಕಾದ ನಿಯಮಗಳನ್ನು ಪಾಲಿಸದೇ ಇದ್ದು ಅಂಥಹ ಮನೆಗಳು ಅನಧಿಕೃತ ಮನೆಗಳ ಪಟ್ಟಿಗೆ ಸೇರ್ಪಡೆಯಾಗಿತ್ತು. ಕಾನೂನು ಉಲ್ಲಂಘಿಸಿ ತನ್ನ ಸ್ವಂತ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಿದರೂ ಅದನ್ನು ತೆರವು ಮಾಡುವ ಅಧಿಕಾರ ನಗರಸಭೆಗೆ ಇದೆ. ಈಗಾಗಲೇ ಅನಧಿಕೃತ ಮನೆಗಳ ತೆರವಿಗೆ ನೊಟೀಸ್ ಕೂಡಾ ಜಾರಿಯಾಗಿತ್ತು. ಇಂಥಹ ಮನೆಗಳಿಗೆ ಇನ್ನು ಬಿ ಖಾತಾ ಮಾಡಲು ಸರಕಾರ ಅವಕಾಶ ಮಾಡಿಕೊಟ್ಟಿದೆ. ಇದು ಸುದೀರ್ಘ 14 ವರ್ಷಗಳ ಬೇಡಿಕೆಯಾಗಿತ್ತು. ಅನಧಿಕೃತ ಮನೆ ನಿರ್ಮಾಣ ಅಥವಾ ಕಟ್ಟಡ ನಿರ್ಮಾಣ ಮಾಡಿದವರು ದುಪ್ಪಟ್ಟು ತೆರಿಗೆ ಪಾವತಿಸಿ ಬಿ ಖಾತಾ ಮಾಡಿಸಿಕೊಳ್ಳಬಹುದಾದರೂ ಪರವಾನಿಗೆಯೇ ಮಾಡಿಸಿಕೊಳ್ಳಲು ಅಶಕ್ತರಾಗಿದ್ದ ಬಡ ಕುಟುಂಬಗಳಿಗೆ ಇದು ಸಂಕಷ್ಟವನ್ನು ತಂದೊಡ್ಡಿತ್ತು.

ಕಟ್ ಕನ್ವರ್ಶನ್ :
ಕಟ್ ಕನ್ವರ್ಶನ್ ಮಾಡಿಸಿಕೊಂಡವರಿಗೂ ಖಾತೆ ನೀಡಲು ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಉದಾ: ಎರಡು ಎಕ್ರೆ ಜಾಗವಿದ್ದಲ್ಲಿ ಅದರಲ್ಲಿ 10 ಸೆಂಟ್ಸ್ ಮಾತ್ರ ಕನ್ವರ್ಶನ್ ಮಾಡಿಸಿಕೊಂಡು ಅದಕ್ಕೆ ಖಾತಾ ಮಾಡಲು ಅರ್ಜಿ ಸಲ್ಲಿಸಿದವರಿಗೆ ಖಾತಾ ನೀಡುತ್ತಿರಲಿಲ್ಲ. ಖಾತಾ ನೀಡಬೇಕಾದಲ್ಲಿ ೨ ಎಕ್ರೆ ಜಾಗವನ್ನೂ ಕನ್ವರ್ಶನ್ ಮಾಡಿಸಬೇಕಾದ ಅನಿವಾರ್ಯತೆ ಇತ್ತು. ಈ ಪ್ರಕರಣವೂ 2014 ರಿಂದ ಪೆಂಡಿಂಗ್ ಇತ್ತು. ಕಟ್ ಕನ್ವರ್ಶನ್ ಮಾಡಿಸಿಕೊಂಡವರಿಗೂ ಈ ಕಾನೂನಿನಡಿ ಬಿ ಖಾತಾ ಪಡೆಯಲು ಅವಕಾಶ ದೊರೆತಂತಾಗಿದೆ.

1000-1200 ಅರ್ಜಿಗಳು ಬಾಕಿ
ಪುತ್ತೂರು ನಗರಸಭೆ ಒಂದರಲ್ಲೇ ಕಟ್ ಕನ್ವರ್ಶನ್ ಮತ್ತು ಅನಧಿಕೃತ ಕಟ್ಟಡ , ಮನೆ ನಿರ್ಮಾಣಕ್ಕೆ ಖಾತೆ ನೀಡಲು ಸುಮಾರು 1000 ರಿಂದ 1200 ಅರ್ಜಿಗಳು 2014 ರಿಂದ ಬಾಕಿ ಇದೆ. ಕಾನೂನಿನ ತೊಡಕು ಇದ್ದ ಕಾರಣ ಅರ್ಜಿಗಳ ವಿಲೇವಾರಿ ನಡೆದಿರಲಿಲ್ಲ.

ಯಾರು ಅರ್ಜಿ ಸಲ್ಲಿಸಬಹುದು
2024 ಸೆಪ್ಟಂಬರ್ ತಿಂಗಳಿಗಿಂತ ಮೊದಲು ಕಟ್‌ಕನ್ವರ್ಶನ್ ಮಾಡಿಸಿಕೊಂಡವರು ಮತ್ತು ಅನಧಿಕೃತ ಮನೆ ಅಥವಾ ಕಟ್ಟಡ ನಿರ್ಮಾಣ ಮಾಡಿಕೊಂಡವರು ಬಿ ಖಾತೆಗೆ ನಗರಸಭೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಮೇ. 2025 ಅರ್ಜಿ ಸಲ್ಲಿಸಲು ಕೊನೇ ದಿನವಾಗಿರುತ್ತದೆ.

ಈ ಸಮಸ್ಯೆಯ ಬಗ್ಗೆ ನಾನು ಶಾಸಕನಾದ ಪ್ರಾರಂಭದಲ್ಲೇ ಹಲವಾರು ಮಂದಿ ನನ್ನ ಕಚೇರಿಗೆ ಬಂದು ಖಾತೆಯ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದರು. ಇದರ ಬಗ್ಗೆ ನಾನು ಅಧಿವೇಶನದಲ್ಲೂ ಸರಕಾರದ ಗಮನಕ್ಕೆ ತಂದಿದ್ದೆ. ಮುಖ್ಯಮಂತ್ರಿ ಹಾಗೂ ಅದಕ್ಕೆ ಸಂಬಂಧಿಸಿದ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದೆ. ಅನೇಕ ಬಡವರು ತಮ್ಮ ಸ್ವಂತ ಜಾಗದಲ್ಲಿ ನಗರಸಭೆಯ ಪರವಾನಿಗೆ ಇಲ್ಲದೆ ಮನೆ ಮಾಡಿಕೊಂಡಿದ್ದು ಅವರಿಗೆ ಬಿ ಖಾತೆ ನೀಡುವಂತೆ ವಿನಂತಿಸಿದ್ದೆ. ಕಟ್ ಕನ್ವರ್ಶನ್ ಮಾಡಿಸಿಕೊಂಡು ಏನೂ ಮಾಡಲಾಗದ ಸ್ಥಿತಿಯಲ್ಲಿ ಅನೇಕರೂ ಇದ್ದರೂ ಅವರ ಪರವಾಗಿಯೂ ಸರಕರದ ಗಮನ ಸೆಳೆದಿದ್ದೆ. ಇದೀಗ ಸರಕಾರ ನನ್ನ ಮನವಿಗೆ ಮಾನ್ಯತೆಯನ್ನು ನೀಡಿ ಪುತ್ತೂರಿಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಬಿ ಖಾತಾ ನೀಡಲು ಆದೇಶ ಮಾಡಿದೆ, ಇದು ನನಗೆ ಅತ್ಯಂತ ಖುಷಿ ತಂದಿದೆ. ಅನಧಿಕೃತವಾಗಿದ್ದ ಎಲ್ಲಾ ಮನೆಗಳಿಗೂ ಇನ್ನು ಬಿ ಖಾತಾ ದೊರೆಯಲಿದೆ. ಜನಪರ ಯೋಜನೆಯನ್ನು ಜಾರಿಗೆ ತಂದಿರುವ ಸರಕಾರಕ್ಕೆ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇನೆ.
ಶಾಸಕ ಅಶೋಕ್‌ ಕುಮಾರ್‌ ರೈ

LEAVE A REPLY

Please enter your comment!
Please enter your name here