ಕಲಿತ ಸಂಸ್ಥೆಯೊಂದಿಗೆ ಉತ್ತಮ ಬಾಂಧವ್ಯ, ಸಂಬಂಧ ಇಟ್ಟುಕೊಳ್ಳಬೇಕು-ವಂ. ಫಾ. ವಿಜಯ್ ಲೋಬೋ
ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ಸಮಾಗಮ ಫಿಲೋ ಮಿಲನ-2025 ಕಾರ್ಯಕ್ರಮ ಮಾ.8ರಂದು ಕಾಲೇಜಿನ ಪ್ರಾಂಗಣದಲ್ಲಿ ನಡೆಯಿತು.
ಫಲಕ ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಜಿರೆ ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ. ಫಾ. ವಿಜಯ್ ಲೋಬೋ ಮಾತನಾಡಿ, ಫಿಲೋ ಮಿಲನ ಕಾರ್ಯಕ್ರಮದ ಯಶಸ್ಸಿಗೆ ನೀವೆಲ್ಲಾ ಕಾರಣಕರ್ತರಾಗಿದ್ದೀರಿ. ಕೋವಿಡ್ ಬಳಿಕ ಫಿಲೋ ಮಿಲನ ಕಾರ್ಯಕ್ರಮ ಮತ್ತೆ ಆರಂಭ ಮಾಡಿದ್ದಾರೆ. ವಿದ್ಯಾರ್ಥಿಗಳು ಉತ್ತಮ ಭಾಂಧವ್ಯ, ಸಂಬಂಧವನ್ನು ಸಂಸ್ಥೆಯೊಂದಿಗೆ ಇಟ್ಟುಕೊಳ್ಳಬೇಕು. ಮತ್ತೊಮ್ಮೆ ಉಪನ್ಯಾಸಕರನ್ನು ಪ್ರಾಂಶುಪಾಲರನ್ನು ಭೇಟಿಯಾಗುವ ಅವಕಾಶ ಬಂದಿದೆ ಎಂದು ಹೇಳಿದ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಡಾ. ಶ್ರೀಪ್ರಕಾಶ್ ಬಿ. ಮಾತನಾಡಿ ಸಂತ ಫಿಲೋಮಿನಾ ಕಾಲೇಜಿಗೆ ತನ್ನದೇ ಆದ ಪರಂಪರೆ ಇದೆ. ವಿದ್ಯಾರ್ಥಿ ಜೀವನದಲ್ಲಿ ನಮ್ಮನ್ನು ಪಾಕ ಮಾಡಿದ ಸ್ಥಳ ಇದಾಗಿದೆ. ನಾವು ಕಲಿತ ಸಂಸ್ಥೆಯ ಮೇಲೆ ನಮಗೆ ಅಭಿಮಾನ ಇದೆ. ಈ ಅಭಿಮಾನದಿಂದ ನಮ್ಮನ್ನು ಇಲ್ಲಿಗೆ ಕರೆತಂದಿದೆ ಎಂದರು. ಹಳೆಯ ದಿನಗಳ ಸವಿನೆನಪುಗಳನ್ನು ಭಾಂಧವ್ಯಗಳನ್ನು ಮೆಲುಕು ಹಾಕೋಣ ಎಂದರು.

ಪದವಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಪ್ರತಿಮಾ ಹೆಗ್ಡೆ ಮಾತನಾಡಿ ಹಿರಿಯ ವಿದ್ಯಾರ್ಥಿ ಸಂಘದ ಮೂಲಕ ಮತ್ತೊಮ್ಮೆ ಕಾಲೇಜಿಗೆ ಆಗಮಿಸಲು ಅವಕಾಶ ಬಂದಿದೆ. ಕಾಲೇಜು ನನ್ನ ವ್ಯಕ್ತಿತ್ವವನ್ನು ರೂಪಿಸಲು ಸಹಕಾರಿಯಾಗಿದೆ. ಎಲ್ಲ ಹಿರಿಯ ವಿದ್ಯಾರ್ಥಿಗಳು ಆಸಕ್ತಿಯಿಂದ ಬಂದಿದ್ದೀರಿ ಎಂದು ಹೇಳಿದ ಅವರು ಭೂಮಿ ಮೇಲೆ ಬಾಂಧವ್ಯಗಳು ಮುಖ್ಯವಾದ ಸಂಪತ್ತು ಆಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಚಾಲಕ ವಂ.ಲಾರೆನ್ಸ್ ಮಸ್ಕರೇನಸ್ ಮಾತನಾಡಿ ಆಂಟನಿ ಪತ್ರಾವೋರವರು ನೆಟ್ಟ ಗಿಟ ಹೆಮ್ಮರವಾಗಿ ಬೆಳೆದಿದೆ. ಅವರ ಕನಸು ದಾರಿಯಲ್ಲಿ ನಾವು ಬೆಳೆದಿದ್ದೇವೆ. ವಿದ್ಯಾರ್ಥಿಗಳಿಗೆ ಕಲಿಕೆ ಮಾತ್ರವಲ್ಲ ಅವರ ಪ್ರತಿಭೆಗಳಿಗೆ ವೇದಿಕೆ ಕೊಡುವ ಕೆಲಸ ಇಲ್ಲಿ ಆಗುತ್ತಿದೆ. ವಿದ್ಯಾರ್ಥಿಗಳು ಉತ್ತಮ ವ್ಯಕ್ತಿಗಳಾಗಬೇಕು ಎಂದರು. ಕಲಿತ ಶಾಲೆಗೆ ಮರಳಿ ಬರುವ ಅವಕಾಶ ನಿಮಗೆ ಸಿಕ್ಕಿದೆ. ಸಹಪಾಠಿಗಳೊಂದಿಗೆ ಕಳೆದ ಕ್ಷಣಗಳನ್ನು ಮೆಲಕು ಹಾಕಲು ಅವಕಾಶ ಬಂದಿದೆ. ನಮ್ಮ ಭಾಂಧವ್ಯವನ್ನು ಗಟ್ಟಿಗೊಳಿಸಲು ನೀವು ಕಾರಣರಾಗಿದ್ದೀರಿ. ಹಿರಿಯ ವಿದ್ಯಾರ್ಥಿ ಸಂಘದ ಬೆಳವಣಿಗೆಗೆ ಸಹಕಾರವಿರಲಿ ಎಂದರು.
ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಫಾ|ಅಶೋಕ್ ರಾಯನ್ ಕ್ರಾಸ್ತಾ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಪದವಿ ಪೂರ್ವ ಕಾಲೇಜಿಗೆ ಹಿರಿಯ ವಿದ್ಯಾರ್ಥಿ ಸಂಘ ಮಾಡಬೇಕೆಂಬ ಉದ್ಧೇಶದಿಂದ ಸಂಘ ಆರಂಭಿಸಲಾಗಿದೆ. 2020ರಲ್ಲಿ ಫಿಲೋ ಮಿಲನ ಕಾರ್ಯಕ್ರಮ ಮಾಡಲಾಗಿತ್ತು. ಬಳಿಕ ಕೊರೋನಾ ಕಾರಣದಿಂದ ಕಾರ್ಯಕ್ರಮ ನಿಂತು ಹೋಗಿತ್ತು. ಇದೀಗ ೪ವರ್ಷದ ಬಳಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ವಿದ್ಯಾರ್ಥಿಗಳಿಗೆ ಕಾಲೇಜಿಗೆ ಮರಳಿ ಬರಲು ಅವಕಾಶ ನೀಡಲು ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್. ಡಿ ಕೋಸ್ಟಾ, ಹಿರಿಯ ವಿದ್ಯಾರ್ಥಿ ಸಂಘದ ಸಂಚಾಲಕ ಭರತ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಸಂದೇಶ್ ಜಾನ್ ಲೋಬೋ ವಂದಿಸಿ ಹಿರಿಯ ವಿದ್ಯಾರ್ಥಿ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು.

ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿ ರಚನೆ
ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘಕ್ಕೆ ನೂತನ ಸಮಿತಿ ರಚಿಸಲು 15 ಮಂದಿಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಕಾರ್ಯಕಾರಿ ಸಮಿತಿಗೆ 5 ಮಂದಿ ಉಪನ್ಯಾಸಕರು ಹಾಗೂ 10 ಮಂದಿ ಹಿರಿಯ ವಿದ್ಯಾರ್ಥಿಗಳನ್ನು ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯರುಗಳಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದೆಂದು ಪ್ರಾಂಶುಪಾಲರಾದ ಫಾ|ಅಶೋಕ್ ರಾಯನ್ ಕ್ರಾಸ್ತಾ ತಿಳಿಸಿದರು.
ಸನ್ಮಾನ
ಮುಖ್ಯ ಅತಿಥಿಯಾಗಿದ್ದ ಉಜಿರೆ ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ. ಫಾ. ವಿಜಯ್ ಲೋಬೋರವರನ್ನು ಹಾರ, ಶಾಲು, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಉಪನ್ಯಾಸಕಿ ಉಷಾ ಸನ್ಮಾನಿತರ ಪರಿಚಯ ಮಾಡಿದರು.