





ನೆಲ್ಯಾಡಿ: ಕಾಂಚನ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಗೌಡರವರು ಮಾ.31ರಂದು ನಿವೃತ್ತಿಯಾಗಲಿದ್ದಾರೆ.
ಬಜತ್ತೂರು ಗ್ರಾಮದ ಕಾಂಚನ ಹಾಲು ಉತ್ಪಾದಕರ ಸಹಕಾರ ಸಂಘವು 22-1-1990ರಲ್ಲಿ ಸ್ಥಾಪನೆಗೊಂಡಿದ್ದು ಚಂದ್ರಶೇಖರ ಗೌಡರವರು ಅಂದಿನಿಂದಲೇ ಸಂಘದ ಕಾರ್ಯನಿರ್ವಾಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆರಂಭದ ಅವಧಿಯಲ್ಲಿ ಸಂಘದಲ್ಲಿ ಪ್ರತಿದಿನ 20 ಲೀ.ಹಾಲು ಸಂಗ್ರಹಣೆಯಾಗುತ್ತಿದ್ದು ಆ ಬಳಿಕ ಪ್ರತಿದಿನ 1200 ಲೀ.ತನಕ ಹಾಲು ಸಂಗ್ರಹಣೆಯಾಗಿತ್ತು. ಪ್ರಸ್ತುತ ಸಂಘದಲ್ಲಿ ಪ್ರತಿದಿನ 550 ಲೀ.ಹಾಲು ಸಂಗ್ರಹಣೆಯಾಗುತ್ತಿದೆ. ಹಾಲು ಸಂಗ್ರಹ ಏರಿಕೆಗೆ ಚಂದ್ರಶೇಖರ ಗೌಡರವರು ಪ್ರಯತ್ನಿಸಿದ್ದರು. ಚಂದ್ರಶೇಖರ ಅವರು ಸುಮಾರು 35 ವರ್ಷ ಸಂಘದ ಕಾರ್ಯನಿರ್ವಾಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಈ ಅವಧಿಯಲ್ಲಿ ಸಂಘಕ್ಕೆ ಹಾಲಿನ ಗುಣಮಟ್ಟಕ್ಕೆ ಸಂಬಂಧಿಸಿ ದ.ಕ.ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಪುತ್ತೂರು ತಾಲೂಕು ಮಟ್ಟದಲ್ಲಿ ಎರಡು ಸಲ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ ಬಂದಿತ್ತು. ಸಂಘದ ಸ್ಥಾಪಕಾಧ್ಯಕ್ಷ ಯಶವಂತ ಜಿ., ನಂತರ ಅಧ್ಯಕ್ಷರಾಗಿದ್ದ ಶಿವರಾಮ ಕಾರಂತ ಊರಾಬೆ, ಧನಂಜಯ ಗೌಡ ಮುದ್ಯ, ಶ್ರೀಧರ ಗೌಡ ಮುದ್ಯ, ಡೆನ್ನಿಸ್ಪಿಂಟೋ ಪುಯಿಲ, ಹರಿಶ್ಚಂದ್ರ ಗೌಡ ಮುದ್ಯರವರ ನೇತೃತ್ವದ ಆಡಳಿತ ಮಂಡಳಿಯ ಜೊತೆ ಸಂಘದ ಅಭಿವೃದ್ಧಿಗೆ ಚಂದ್ರಶೇಖರ ಗೌಡರವರು ಶ್ರಮಿಸಿದ್ದರು.
ಬಜತ್ತೂರು ಗ್ರಾಮದ ಕಾಂಚನ ಚಂದ್ರಗಿರಿ ನಿವಾಸಿಯಾಗಿರುವ ಚಂದ್ರಶೇಖರ ಗೌಡರವರು, ಕಾಂಚನ ವಿಕ್ರಂ ಯುವಕ ಮಂಡಲದ ಅಧ್ಯಕ್ಷರಾಗಿ, ಕಾಂಚನ ಶ್ರೀ ಲಕ್ಷ್ಮೀನಾರಾಯಣ ಹಿರಿಯ ಪ್ರಾಥಮಿಕ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಂಚನ ಒಕ್ಕೂಟದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ವಿವಿಧ ಸಂಘ ಸಂಸ್ಥೆಗಳಲ್ಲಿ ಇವರು ಸಕ್ರಿಯರಾಗಿದ್ದಾರೆ. ಇವರಿಗೆ ಮಾ.28ರಂದು ಬೆಳಿಗ್ಗೆ ಸಂಘದ ವತಿಯಿಂದ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.











