ಉಪ್ಪಿನಂಗಡಿ: ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ತಂತಿ ಬೇಲಿ ಕಿತ್ತು ಹಾಕಿ ಅವಾಚ್ಯ ಶಬ್ದಗಳಿಂದ ಬೈದು ಕತ್ತಿಯಿಂದ ಕಡಿಯುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಮಹಿಳೆಯೊಬ್ಬರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಕೇಸು ದಾಖಲಾಗಿದೆ.
ಗೋಳಿತ್ತೊಟ್ಟು ಗ್ರಾಮದ ಬರಮೇಲು ನಿವಾಸಿ ಗಿರಿಯಪ್ಪ ಎಂಬವರ ಪತ್ನಿ ಮೀನಾಕ್ಷಿ ಎಂಬವರು ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ಮೀನಾಕ್ಷಿ ಹಾಗೂ ಅವರ ಅಕ್ಕ ಹೊನ್ನಮ್ಮರವರಿಗೆ ಪಿತ್ರಾರ್ಜಿತವಾಗಿ ಹಿರೇಬಂಡಾಡಿ ಗ್ರಾಮದ ಮಡಮ್ಮಾರ ಎಂಬಲ್ಲಿ ತಲಾ 0.71ಎಕ್ರೆ ಜಾಗವಿದ್ದು, ಸದ್ರಿ ಜಾಗದ ತಕರಾರು ಪುತ್ತೂರು ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ನ್ಯಾಯಾಲಯದ ಆದೇಶದ ಪ್ರಕಾರ ಅಳತೆಯಾಗಿ ಜಾಗ ಅವರ-ಅವರ ಸ್ವಾಧೀನದಲ್ಲಿರುತ್ತದೆ. ಸದ್ರಿ ಜಾಗಕ್ಕೆ ಒಟ್ಟು ೧ ಲಕ್ಷ ರೂ.ಖರ್ಚು ಮಾಡಿ ತಂತಿ ಬೇಲಿ ಹಾಕಿರುತ್ತಾರೆ. ಎ.೧೩ರಂದು ಬೆಳಿಗ್ಗೆ ೧೧ ಗಂಟೆಗೆ ಸದ್ರಿ ಜಾಗಕ್ಕೆ ಮೀನಾಕ್ಷಿ ಹಾಗೂ ಅವರ ಅಕ್ಕ ಹೊನ್ನಮ್ಮ, ಗಿರಿಯಪ್ಪ, ಮಹಾಬಲ ಮತ್ತು ಶಶಿಕಲಾರವರು ತೋಟದ ಕೆಲಸಕ್ಕೆ ಹೋದಾಗ ಆರೋಪಿಗಳಾದ ತಿಮ್ಮಕ್ಕ, ಜಯಂತಿ, ಪರಮೇಶ್ವರ, ಹರೀಶ ಎಂಬವರು ಮೀನಾಕ್ಷಿ ಮತ್ತು ಹೊನ್ನಮ್ಮರವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ, ತಂತಿ ಬೇಲಿಯನ್ನು ಕಿತ್ತು ಹಾಕಿದ್ದು, ಇದನ್ನು ಪ್ರಶ್ನಿಸಲು ಹೋದಾಗ ಆರೋಪಿ ಹರೀಶನು ಅವಾಚ್ಯ ಶಬ್ಧಗಳಿಂದ ಬೈದು, ಕತ್ತಿಯಿಂದ ಕಡಿಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ತಂತಿ ಬೇಲಿ ಕಿತ್ತು ಹಾಕಿರುವುದರಿಂದ ೧ ಲಕ್ಷ ರೂ.ನಷ್ಟ ಉಂಟಾಗಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ದೂರಿನಂತೆ ಆರೋಪಿಗಳ ವಿರುದ್ಧ ಉಪ್ಪಿನಂಗಡಿ ಠಾಣಾ ಅ.ಕ್ರ: 24/2025 ಕಲಂ: 329(3), 324(4), 352, 351(2) r/w 3(5) BNS ಯಂತೆ ಪ್ರಕರಣ ದಾಖಲಾಗಿದೆ.