ದೇವಳಗಳ 1 ಲಕ್ಷ ಎಕ್ರೆಗಿಂತ ಜಾಸ್ತಿ ಜಾಗ ಒತ್ತುವರಿ
ಪುತ್ತೂರು: ರಾಜ್ಯದಲ್ಲಿ ದೇವಸ್ಥಾನಗಳ 1 ಲಕ್ಷ ಎಕ್ರೆಗಿಂತ ಜಾಸ್ತಿ ಜಾಗ ಒತ್ತುವರಿಯಾಗಿದೆ. ಇದನ್ನೆಲ್ಲವನ್ನು ಕಾಲಮಿತಿಯೊಳಗೆ ಪುನಃ ದೇವಸ್ಥಾನದ ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಸಂಘದ ಮೂಲಕ ಹೋರಾಟ ನಡೆಯುತ್ತಿದೆ ಎಂದು ಅಖಿಲ ಕರ್ನಾಟಕ ಅರ್ಚಕ, ಆಗಮಿಕರ, ಉಪಾಧಿವಂತರ ಒಕ್ಕೂಟದ ಅಧ್ಯಕ್ಷ ಪ್ರೊ|ಡಾ.ರಾಧಾಕೃಷ್ಣ ಅವರು ಹೇಳಿದರು.
ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಮೇ.15ರಂದು ಸಂಜೆ ಭೇಟಿ ನೀಡಿ ರಾತ್ರಿಯ ಪೂಜೆಯಲ್ಲಿ ಪಾಲ್ಗೊಂಡ ಅವರು ಬಳಿಕ ಮಾಧ್ಯಮದ ಜೊತೆ ಮಾತನಾಡಿದರು. ಬಹುತೇಕ ದೇವಸ್ಥಾನದ ಜಾಗ ಒತ್ತುವರಿಯಾಗಿದೆ. ಇದನ್ನೆಲ್ಲ ನಾವು ದೇವಸ್ಥಾನದ ಸುಪರ್ದಿಗೆ ತೆಗೆದುಕೊಂಡರೆ ದೇವಸ್ಥಾನದಿಂದ ಆಸ್ಪತ್ರೆ ಕಟ್ಟಬಹುದು, ಶಾಲೆ ನಡೆಸಬಹುದು,ದೇವಸ್ಥಾನದ ಅರ್ಚಕರು, ಸಿಬ್ಬಂದಿಗಳು ನೆಮ್ಮದಿಯಾಗಿ ಬದುಕುವಂತೆ ಮಾಡಬಹುದು. ಅದಕ್ಕಾಗಿ ಸಂಘದ ಮೂಲಕ ಹೋರಾಟ ನಡೆಯುತ್ತಿದೆ. ಮುಜುರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿಯವರೂ ಇದಕ್ಕೆ ಗಮನ ನೀಡಿದ್ದಾರೆ. ಸಂಘದ ಮೂಲಕವೂ ಪಿಎಎಲ್ ಹಾಕಿ ರಾಜ್ಯಪಾಲರನ್ನು ಭೇಟಿ ಮಾಡಲಿದ್ದೇವೆ. ತಮಿಳುನಾಡಿನಲ್ಲಿ ಎಲ್ಲಾ ದೇವಸ್ಥಾನಗಳ ಮ್ಯಾಪಿಂಗ್ ಮಾಡಿದಂತೆ ಕರ್ನಾಟಕದಲ್ಲೂ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಹಿರಿಯ ಅಧಿಕಾರಿಯನ್ನು ಸೇರಿಸಿಕೊಂಡು ಕಾಲಮಿತಿಯೊಳಗೆ ಭೂಮಿ ಹಿಂದಕ್ಕೆ ಪಡೆಯುವ ಕಾರ್ಯ ನಡೆಯಲಿದೆ ಎಂದರು.
ಸಂಘದ ಮೂಲಕ ಹಲವು ಸೌಲಭ್ಯ:
ಸಂಘದ ಮೂಲಕ ದೇವಸ್ಥಾನದ ಅರ್ಚಕರು, ಸಿಬ್ಬಂದಿ ಸೌಲಭ್ಯ ಪಡೆಯಲು ಅವಕಾಶವಿದೆ. ಮಾಜಿ ಮುಖ್ಯಮಂತ್ರಿ ದಿ.ಗುಂಡೂರಾವ್ ಅವರು ಅಖಿಲ ಕರ್ನಾಟಕ ಅರ್ಚಕ, ಆಗಮಿಕರ, ಉಪಾಧಿವಂತರ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದು ಪ್ರಸ್ತುತ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಸಂಘದ ಗೌರವಾಧ್ಯಕ್ಷರಾಗಿದ್ದಾರೆ. ಸುಮಾರು 40 ವರ್ಷದಿಂದ ಇದನ್ನು ನಡೆಸಿಕೊಂಡು ಬಂದವರು ಕೆ.ಎಸ್.ದೀಕ್ಷಿತ್ ಅವರು. ಸರಕಾರದಲ್ಲಿ ಹೋರಾಟ ಮಾಡಿ ಅನೇಕ ಸೌಲಭ್ಯಗಳನ್ನು ದೇವಸ್ಥಾನದ ಉದ್ಯೋಗಿಗಳಿಗೆ ಅನುಕೂಲವಾಗವ ಸೌಲಭ್ಯ ಒದಗಿಸುವ ಪ್ರಯತ್ನ ಮಾಡಿದ್ದೇವೆ. ಅದರಲ್ಲೂ ಸಿ ದೇವಸ್ಥಾನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ ಎಂದ ಅವರು, ತಸ್ತಿಕ್ ರೂ.1 ಸಾವಿರ ಜಾಸ್ತಿ ಮಾಡಿದ್ದಾರೆ. ಕಾಂಗ್ರೆಸ್ ಸರಕಾರವೇ 4 ಬಾರಿ ಒಂದೊಂದು ಸಾವಿರ ತಸ್ತಿಕ್ ಜಾಸ್ತಿ ಮಾಡಿದೆ. ಜೊತೆಗೆ ಪೂಜಾ ದ್ರವ್ಯಗಳಿಗಾಗಿ ಕೂಡಾ ಅನುದಾನ ಕೇಳಿದ್ದೇವೆ. ದೇವಸ್ಥಾನದ ಅರ್ಚಕರು ಮತ್ತು ಸಿಬ್ಬಂದಿ ಇನ್ಶೂರೆನ್ಸ್, ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿವೇತನ, ಆರೋಗ್ಯ ಕಾರ್ಡ್ ಕೂಡಾ ಇದೆ. ಅವರ ಕುಟುಂಬಕ್ಕೆ ಕಾಶಿ ರಾಮೇಶ್ವರ ಪ್ರವಾಸ ಯಾತ್ರೆ ಅವಕಾಶ ಸಹಿತ ಹಲವು ಸೌಲಭ್ಯವಿದೆ. ಅದಕ್ಕೆ ಅರ್ಜಿ ಆಹ್ವಾನಿಸಿದಾಗ ಅರ್ಜಿ ಹಾಕಿ ಪಡೆಯಬೇಕು ಎಂದರು.
ಅರ್ಚಕರು,ಸಿಬ್ಬಂದಿಗೆ ಮನೆಕಟ್ಟಲು 5 ಲಕ್ಷ ರೂ.ನೆರವಿಗೆ ಮನವಿ:
ಮುಂದೆ ಸಿ ದೇವಸ್ಥಾನಗಳಿಗೆ ರೂ.5 ಸಾವಿರ ಪೂಜಾದ್ರವ್ಯ ಕೊಡಬೇಕು ಮತ್ತು ಎಲ್ಲೆಲ್ಲಿ ಸ್ಥಳವಿದೆ ಅಲ್ಲಿ ಅರ್ಚಕರಿಗೆ ಸಿಬ್ಬಂದಿಗೆ ಮನೆ ಕಟ್ಟಲು ರೂ.೫ ಲಕ್ಷ ನೀಡುವಂತೆ ಸರಕಾರವನ್ನು ಒತ್ತಾಯಿಸಲಿದ್ದೇವೆ ಎಂದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಪೆರ್ನಾಜೆ ಮೂಲದ ಪ್ರೊ|ರಾಧಾಕೃಷ್ಣ ಅವರಿಗೆ ಶಲ್ಯ ಹೊದಿಸಿ ಗೌರವಿಸಿದರು. ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಮತ್ತು ವೇ ಮೂ ವಸಂತ ಕೆದಿಲಾಯ ಅವರು ಪ್ರಸಾದ ವಿತರಿಸಿದರು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಬಲ ರೈ ವಳತ್ತಡ್ಕ, ಈಶ್ವರ ಬೆಡೇಕರ್, ಸುಭಾಶ್ ರೈ ಬೆಳ್ಳಿಪ್ಪಾಡಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ಉಪಸ್ಥಿತರಿದ್ದರು.