





ಉಪ್ಪಿನಂಗಡಿ: ಪುತ್ತೂರು ನಗರ ಸಭೆಯ ಕುಡಿಯುವ ನೀರು ಪೂರೈಕೆಯ ಸಲುವಾಗಿ 34 ನೇ ನೆಕ್ಕಿಲಾಡಿಯಲ್ಲಿ ಕುಮಾರಧಾರಾ ನದಿಗೆ ಕಟ್ಟಲಾದ ಕಿಂಡಿ ಅಣೆಕಟ್ಟಿನ ಗೇಟುಗಳನ್ನು ತೆರವು ಮಾಡದೇ ಇರುವುದರಿಂದ ರಭಸವಾಗಿ ಹರಿದು ಬರುವ ನೀರನ್ನು ಕಿಂಡಿ ಅಣೆಕಟ್ಟು ತಡೆಯೊಡ್ಡುತ್ತಿರುವ ಪರಿಣಾಮ ಪರಿಸರದ ಕೃಷಿ ಭೂಮಿಯಲ್ಲಿ ಭಾರೀ ಪ್ರಮಾಣದ ಸವಕಳಿಯುಂಟಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ.


ಪುತ್ತೂರು ನಗರ ಸಭಾ ವ್ಯಾಪ್ತಿಯ ಜನತೆಗೆ ಕುಡಿಯುವ ನೀರು ಸರಬರಾಜುಗೊಳಿಸುವ ಉದ್ದೇಶದಿಂದ ನಿರ್ಮಾಣಗೊಂಡಿರುವ ಈ ಕಿಂಡಿ ಅಣೆಕಟ್ಟಿಗೆ ಮಳೆಗಾಲ ಮುಗಿದಾಕ್ಷಣ ಗೇಟು ಅಳವಡಿಸಿ ನೀರನ್ನು ಸಂಗ್ರಹಿಸಲಾಗುತ್ತಿತ್ತು. ಕಳೆದೆರಡು ವರ್ಷಗಳಲ್ಲಿ ಬಿಳಿಯೂರು ನೇತ್ರಾವತಿ ನದಿಯ ಅಣೆಕಟ್ಟಿನಲ್ಲಿ ಗೇಟು ಅಳವಡಿಸಿದ ಬಳಿಕ ಸಂಗ್ರಹವಾಗುವ ಹಿನ್ನೀರಿನಿಂದ ಈ ಕಿಂಡಿ ಅಣೆಕಟ್ಟು ಕೂಡಾ ಮುಳುಗಡೆಯಾಗುತ್ತಿದೆ. ಈ ಕಾರಣದಿಂದ ಇಲ್ಲಿನ ಕಿಂಡಿ ಅಣೆಕಟ್ಟಿಗೆ ಗೇಟು ಅಳವಡಿಸುವ ಅವಶ್ಯಕತೆ ಇಲ್ಲದಿದ್ದರೂ, ಬಿಳಿಯೂರು ಅಣೆಕಟ್ಟು ಹೆಚ್ಚುವರಿ ಜಲಾಶಯವಾಗಿ ಪರಿಗಣಿಸಲ್ಪಟ್ಟಿದ್ದು, ಯಾವುದೇ ಸಂದರ್ಭದಲ್ಲಿ ನೀರನ್ನು ಹರಿಯಬಿಡಬಹುದಾಗಿರುವುದರಿಂದ ಮುಂದಾಲೋಚನೆಯಿಂದ ಇಲ್ಲಿನ ಕಿಂಡಿ ಅಣೆಕಟ್ಟಿಗೆ ಗೇಟು ಅಳವಡಿಸುವ ಕಾರ್ಯವನ್ನು ಪ್ರತಿವರ್ಷ ಮಾಡಲಾಗುತ್ತಿದೆ. ಅದರಂತೆ ಈ ಬಾರಿ ಅಳವಡಿಸಲಾದ ಗೇಟುಗಳನ್ನು ತೆರವುಗೊಳಿಸದೇ ಇರುವುದರಿಂದ ಮಳೆಗಾಲದಲ್ಲಿ ಪರಿಸರದ ಕೃಷಿಕರಿಗೆ ಪ್ರತಿಕೂಲ ಪರಿಣಾಮವನ್ನು ಮೂಡಿಸಿದೆ.
ಕುಮಾರಧಾರಾ ನದಿಯ ನೀರಿನಲ್ಲಿ ಪ್ರತಿದಿನವೂ ವೇಗವಾದ ನೀರಿನ ಹರಿವು ಇದ್ದು, ಇದು ಕಿಂಡಿ ಅಣೆಕಟ್ಟಿಗೆ ಅಪ್ಪಳಿಸಿ ಪರಿಸರದ ಕೃಷಿ ಭೂಮಿಗೆ ಕಡಲ ತೆರೆಯಂತೆ ಬಂದಪ್ಪಳಿಸುತ್ತಿದೆ. ಇದರಿಂದಾಗಿ ಈ ಬಾರಿಯ ಮಳೆಗಾಲದ ಎರಡು ತಿಂಗಳಾವಧಿಯಲ್ಲಿ ಗರಿಷ್ಠ ಪ್ರಮಾಣದ ಕೃಷಿ ಭೂಮಿಯು ಸವಕಳಿಗೆ ತುತ್ತಾಗಿ ನದಿಪಾಲಾಗಿದೆ.






ಬೇಗನೇ ಮಳೆ ಬಂದು ಗೇಟು ತೆರವಿಗೆ ಅಸಾಧ್ಯವಾಯಿತು: ಜಯರಾಮ್
ಈ ಬಗ್ಗೆ ಪ್ರತಿಕ್ರಿಯಿಸಿದ ನೀರು ಸರಬರಾಜು ಘಟಕದ ಜಯರಾಮ್, ಈ ಬಾರಿ ಮೇ ತಿಂಗಳಲ್ಲೇ ಮಳೆಗಾಲ ಬಿರುಸಿನಿಂದ ಪ್ರಾರಂಭವಾದ ಕಾರಣ ಕಿಂಡಿ ಅಣೆಕಟ್ಟಿಗೆ ಅಳವಡಿಸಿದ ಗೇಟು ತೆರವಿಗೆ ಅಸಾಧ್ಯವಾಯಿತು. ಮೂರು ಗೇಟುಗಳನ್ನು ತೆಗೆಯುವಷ್ಟರಲ್ಲಿ ನದಿಯಲ್ಲಿನ ನೀರಿನ ಪ್ರವಾಹವು ಹೆಚ್ಚಾಗತೊಡಗಿ ತೆಗೆಯಲಾದ ಮೂರು ಗೇಟುಗಳನ್ನು ಕೊಚ್ಚಿ ಕೊಂಡೊಯ್ದಿದೆ. ಬಳಿಕದ ದಿನಗಳಲ್ಲಿ ನದಿಯಲ್ಲಿ ನೀರಿನ ಹರಿವು ಹೆಚ್ಚುತ್ತಿರುವುದರಿಂದ ಗೇಟು ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ. ಬಿಳಿಯೂರು ಅಣೆಕಟ್ಟಿನಿಂದ ಹಿನ್ನೀರು ನಮ್ಮ ಕಿಂಡಿ ಅಣೆಕಟ್ಟನ್ನು ಮುಳುಗಿಸುತ್ತಿದ್ದರೂ, ಅಲ್ಲಿನ ಅಣೆಕಟ್ಟಿನಿಂದ ಯಾವುದೇ ಸಮಯದಲ್ಲೂ ನೀರು ಹರಿಯ ಬಿಡುವ ಸಾಧ್ಯತೆ ಇರುವುದರಿಂದ ಪುತ್ತೂರಿನ ಜನತೆಗೆ ನೀರು ಸರಬರಾಜಿನಲ್ಲಿ ಅಡಚನೆಯಾಗದಂತೆ ಪ್ರತಿವರ್ಷವೂ ಇಲ್ಲಿ ಗೇಟು ಅಳವಡಿಸಲಾಗುವುದು ಹಾಗೂ ಇಲ್ಲಿ ಮಾನವ ಶ್ರಮದೊಂದಿಗೆ ಗೇಟು ಅಳವಡಿಸುವ ಮತ್ತು ತೆರವುಗೊಳಿಸುವ ಕಾರ್ಯ ನಡೆಯುವುದರಿಂದ ನದಿಯ ನೀರಿನ ಪ್ರವಾಹದ ವೇಗಕ್ಕೆ ಈ ಬಾರಿ ತೆರವು ಕಾರ್ಯ ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ಹಾನಿಗೆ ಯಾರು ಹೊಣೆ: ಶಾಂತಾರಾಮ ಕಾಂಚನ
ಕುಮಾರಧಾರಾ ನದಿಯ ಕಿಂಡಿ ಅಣೆಕಟ್ಟಿಗೆ ಅಳವಡಿಸಲಾದ ಗೇಟುಗಳನ್ನು ಮುಂಜಾಗ್ರತಾ ಕ್ರಮವಾಗಿ ಪ್ರತಿವರ್ಷವೂ ತೆರವು ಮಾಡಿದಂತೆ ಈ ಬಾರಿ ಮಾಡದೇ ಇರುವುದರಿಂದ ಈ ಬಾರಿಯ ಮಳೆಗಾಲ ಭಯಾನಕವಾಗಿದೆ. ನದಿ ದಡದಲ್ಲಿರುವ ನಮ್ಮ ಕೃಷಿ ಭೂಮಿ ನದಿ ನೀರು ಅಪ್ಪಳಿಸುವುದರಿಂದ ಭೂ ಕುಸಿತವುಂಟಾಗಿ ಭೂಮಿಯನ್ನು ಕಳೆದುಕೊಳ್ಳುವಂತಾಗಿದೆ. ಈ ಕರ್ತವ್ಯ ಲೋಪದಿಂದ ಉಂಟಾಗಿರುವ ನಷ್ಟಕ್ಕೆ ಯಾರು ಹೊಣೆ ಎನ್ನುವುದೇ ತಿಳಿಯದಾಗಿದೆ. ಆಡಳಿತ ವ್ಯವಸ್ಥೆ ಈ ಬಗ್ಗೆ ತ್ವರಿತ ಗಮನ ಹರಿಸಿ ಉಂಟಾಗಿರುವ ಹಾನಿಯ ಬಗ್ಗೆ ಸೂಕ್ತ ಸ್ಪಂದನೆ ತೋರಬೇಕೆಂದು ನದಿ ಪಾತ್ರದಲ್ಲಿ ಭೂ ಸವಕಳಿಗೆ ತುತ್ತಾಗಿರುವ ಕೃಷಿಕ ಶಾಂತಾರಾಮ ಕಾಂಚನ ತಿಳಿಸಿದ್ದಾರೆ.









