ಆಲಂಕಾರು : ಲಹರಿ ಸಂಗೀತ ಕಲಾಕೇಂದ್ರ ಐಐಸಿಟಿ ನೆಲ್ಯಾಡಿಯ ಆಲಂಕಾರು ಶಾಖೆಯ ಉದ್ಘಾಟನೆ ಜು.6 ರಂದು ನಡೆಯಿತು.
ಆಲಂಕಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಮಾಧವ ಪೂಜಾರಿ ಕಯ್ಯಪ್ಪೆ ಅವರು ದೀಪ ಬೆಳಗಿಸಿ ಶಾಖೆಯ ಉದ್ಘಾಟನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಸಂಗೀತ ಕಲಾಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಈಗಿನ ಕಾಲದಲ್ಲಿ ಕಲಿಕೆಯ ಅವಕಾಶಗಳು ಬಹಳಷ್ಟು ವಿಸ್ತರಿಸಿವೆ. ಹಿಂದಿನ ಕಾಲದಲ್ಲಿ ಕಲಿಸುವ ಗುರುಗಳೂ ಕಡಿಮೆ, ಕಲಿಯುವವರೂ ಕಡಿಮೆ. ಆದರೆ ಇಂದು ಶಾಲಾ ಶಿಕ್ಷಣದ ಜೊತೆಗೆ ಸಂಗೀತ, ಸಾಹಿತ್ಯ ಮುಂತಾದ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಮತ್ತೊಬ್ಬ ಅತಿಥಿ, ಆಲಂಕಾರು ಹಾಲು ಉತ್ಪಾದಕ ಸಹಕಾರಿ ಸಂಘದ ನಿರ್ದೇಶಕ ರಾಧಾಕೃಷ್ಣ ರೈ ಮಾತನಾಡುತ್ತಾ, “ಯಾವುದೇ ವಿದ್ಯೆಯನ್ನು ಗುರುಮುಖೇನ ಕಲಿತರೆ ಅದು ಹೆಚ್ಚು ಪರಿಣಾಮಕಾರಿಯಾಗಿ ಬದುಕಿನಲ್ಲಿ ಪ್ರತಿಫಲಿಸುತ್ತದೆ. ಮೊಬೈಲ್ ಯುಗದಲ್ಲಿ ಮಕ್ಕಳಿಗೆ ಮೊಬೈಲ್ ದಾಸ್ಯಕ್ಕೆ ಬದಲಾಗಿ ಸಂಗೀತ, ನೃತ್ಯ, ಸಾಹಿತ್ಯ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಅಭ್ಯಾಸ ಬೆಳೆಯಬೇಕು” ಎಂದರು.
ಲಹರಿ ಸಂಗೀತ ಕಲಾಕೇಂದ್ರದ ಗುರು ವಿಶ್ವನಾಥ ಶೆಟ್ಟಿ ಮಾತನಾಡಿ, “ಯಾವುದೇ ಶಾಸ್ತ್ರೀಯ ವಿದ್ಯೆಯು ಆರಂಭದಲ್ಲಿ ಕಠಿಣವಾಗಿದರೂ, ಅಭ್ಯಾಸದಿಂದ ಅದು ಸುಲಭವಾಗುತ್ತದೆ. ಏಕಾಗ್ರತೆಯಿಂದ ನಿರಂತರ ಅಭ್ಯಾಸವೇ ಯಶಸ್ಸಿನ ಮಾರ್ಗ” ಎಂದರು.
ಲಹರಿ ಸಂಗೀತ ಕಲಾಕೇಂದ್ರ ಐಐಸಿಟಿ ನೆಲ್ಯಾಡಿಯ ವಿದ್ಯಾರ್ಥಿ ಸಂಪತ್ ಕುಮಾರ್ ಕೀಬೋರ್ಡ್ ನುಡಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರದ ಸಂಯೋಜಕಿ ಅಕ್ಷತಾ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಆಲಂಕಾರು ಶಾಖೆಯ ಸಂಯೋಜಕಿ ಗಾಯತ್ರಿ ಸ್ವಾಗತಿಸಿದರು. ಮೋನಿಶ್ ಪ್ರಾರ್ಥಿಸಿದರು. ಗುರುಕಿರಣ್ ಕಾರ್ಯಕ್ರಮ ನಿರೂಪಿಸಿದರು