ಉಪ್ಪಿನಂಗಡಿ: ಬೈಕ್ ಅಪಘಾತದಿಂದ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 34 ನೆಕ್ಕಿಲಾಡಿಯ ಸುಭಾಶ್ನಗರ ನಿವಾಸಿ ನೌಶಾದ್ (35) ಚಿಕಿತ್ಸೆ ಫಲಕಾರಿಯಾಗದೇ ಜು.9ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬಕ್ರೀದ್ ದಿನವಾದ ಜು.7ರಂದು ಸುಭಾಶ್ನಗರದ ಮನೆಯಿಂದ ಮಸೀದಿಗೆಂದು ಬೈಕ್ನಲ್ಲಿ ಹೊರಟಿದ್ದ ಇವರಿಗೆ ಬೊಳ್ವಾರ್ನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸುವಾಗ ಮಾಣಿ ಕಡೆಯಿಂದ ಬಂದ ಬೈಕೊಂದು ಡಿಕ್ಕಿ ಹೊಡೆದಿತ್ತು. ಈ ಸಂದರ್ಭ ಬೈಕ್ನಿಂದ ರಸ್ತೆಗೆಸೆಯಲ್ಪಟ್ಟ ಇವರ ತಲೆ ರಸ್ತೆ ವಿಭಾಜಕಕ್ಕೆ ಬಡಿದು ಕೋಮಾ ಸ್ಥಿತಿಯಲ್ಲಿದ್ದ ಇವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕೋಮಾ ಸ್ಥಿತಿಯಿಂದ ಇವರು ಚೇತರಿಸಿಕೊಳ್ಳುವ ಲಕ್ಷಣಗಳು ಕಾಣದಿದ್ದಾಗ ಕೆಲವು ದಿನಗಳ ಹಿಂದೆ ಅವರನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಜು.9ರಂದು ನಸುಕಿನ ಜಾವ ಮೃತಪಟ್ಟಿದ್ದಾರೆ.
ಶ್ರಮಜೀವಿಯಾಗಿದ್ದ ಇವರು ನೆಕ್ಕಿಲಾಡಿಯ ತಂಪು ಪಾನೀಯ ಘಟಕವೊಂದರಲ್ಲಿ ಲೈನ್ ಸೇಲ್ ಕೆಲಸಕ್ಕಿದ್ದರಲ್ಲದೆ, ಬಿಡುವಿದ್ದಾಗ ಶಾಮಿಯಾನದ ಕೆಲಸಗಳಿಗೂ ತೆರಳುತ್ತಿದ್ದರು. ಮೃತರು ಪತ್ನಿ ಹಾಗೂ ಆರು ವರ್ಷ ಮತ್ತು ನಾಲ್ಕು ವರ್ಷದ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.