ವಿಸ್ತೃತವಾದ ಮನಸ್ಸಿನಿಂದ ಸಾಮಾಜಿಕ ಸಾಮರಸ್ಯ ಬೆಳೆಯುತ್ತದೆ. : ರಾಜೇಶ್ ಪದ್ಮಾರ್
- ಸುಮಾರು 50 ವಿದ್ಯಾಸಂಸ್ಥೆಗಳ 750 ಶಿಕ್ಷಕ, ಶಿಕ್ಷಕೇತರರು, ಆಡಳಿತಮಂಡಳಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿ

ಪುತ್ತೂರು: ಭಾರತೀಯ ಸಮಾಜ ಬಹುತ್ವದಿಂದ ಕೂಡಿದ ಸಮಾಜ ಹಾಗೂ ವೈವಿಧ್ಯಮಯ ಸಂಸ್ಕೃತಿಗಳ ತಾಣ. ಸಂಸ್ಕೃತಿಯ ಪಾಲನೆ ,ಪೋಷಣೆ ಸಂರಕ್ಷಣೆಗೆ ಸಮಾಜ ಬೇಕು. ಇಂತಹ ಶ್ರೇಷ್ಠ ಚಿಂತನೆಗಳು ಮೊಳಗಿದ ದೇಶದಲ್ಲಿ ಜಾತಿಯ ಕಾರಣದಿಂದ ಹಲವು ವಿಷಮತೆಗಳು ಕಾಣಿಸಿಕೊಂಡು ಸಮಾಜದಲ್ಲಿ ಭಿನ್ನಾಭಿಪ್ರಾಯಗಳು ಮೂಡಿದವು. ಇದನ್ನು ಸರಿದೂಗಿಸುವಲ್ಲಿ ಜಾತಿಮೀರಿದ ಬಾಂಧವ್ಯ ಸಮಾಜದಲ್ಲಿ ಬೆಳೆಯಬೇಕು. ಸಾಮಾಜಿಕ ಸಾಮರಸ್ಯ ಬೆಳೆಸಿ, ಕ್ಷೀಣಿಸುತ್ತಿರುವ ಸಂಸ್ಕೃತಿಯನ್ನು ಬಲಿಷ್ಠಗೊಳಿಸಲು, ಭವಿಷ್ಯದ ಕೈಗನ್ನಡಿಯಂತಿರುವ ಇಂದಿನ ವಿದ್ಯಾರ್ಥಿಗಳಿಂದ ಸಾಧ್ಯ. ಅವರ ಮೂಲಕ ಇದನ್ನು ಕಾರ್ಯರೂಪಗೊಳಿಸುವಲ್ಲಿ ಶಿಕ್ಷಣ ಹಾಗೂ ಶಿಕ್ಷಕರ ಪಾತ್ರ ಮಹತ್ತರವಾದದ್ದು ಎಂದು ರಾಜೇಶ್ ಪದ್ಮಾರ್, ಪ್ರಾಂತ ಪ್ರಾಚಾರ್ ಪ್ರಮುಖ್, ರಾಷ್ಟ್ರೀಯ ಸ್ವಯಂಸೇವಕ ಸಂಘ ಇವರು ಹೇಳಿದರು. ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣದಲ್ಲಿರುವ ಕೇಶವ ಸಂಕಲ್ಪದಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಭಾಗದ ಜಿಲ್ಲಾ ಶೈಕ್ಷಣಿಕ ಸಹಮಿಲನ – 2025ರ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದರು. ಸಮಾಜದ ಗುಣಾತ್ಮಕ ಬದಲಾವಣೆಗಾಗಿ ʼಪಂಚ ಪರಿವರ್ತನೆʼ ಎಂಬ ಶೀರ್ಷಿಕೆಯಡಿಯಲ್ಲಿ ಸಾಮಾಜಿಕ ಸಾಮರಸ್ಯ,ಕುಟುಂಬ ಪ್ರಬೋಧನ, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನ ಶೈಲಿ ಹಾಗೂ ನಾಗರಿಕ ಶಿಷ್ಟಾಚಾರ ಪಾಲನೆ ಈ ಐದು ವಿಷಯಗಳ ಕುರಿತು ಸವಿವರವಾದ ಮಾಹಿತಿಯ ಉಪನ್ಯಾಸವನ್ನು ನೀಡಿದರು.
ಕಾರ್ಯಕ್ರಮವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ.ಕೆ.ಎಂ. ಕೃಷ್ಣ ಭಟ್‌ಉದ್ಘಾಟಿಸಿ ಶಿಕ್ಷಣವೆಂಬುದು ವ್ಯಕ್ತಿ ವಿಕಾಸ, ರಾಷ್ಟ್ರ ವಿಕಾಸ ಹಾಗೂ ವಿಶ್ವ ವಿಕಾಸದ ಮಾಧ್ಯಮ. ಯಾವ ರೀತಿ ಬೆಳಕು ಜಗತ್ತಿನ ಕತ್ತಲೆಯನ್ನು ಹೋಗಲಾಡಿಸಿ ಜಗತ್ತನ್ನು ಬೆಳಗುತ್ತದೆಯೋ, ಅದೇ ರೀತಿ ಶಿಕ್ಷಣವು ಒಬ್ಬ ವ್ಯಕ್ತಿಯಲ್ಲಿನ ಹಲವು ದುಶ್ಚಟ ಹಾಗೂ ದುರ್ಗುಣಗಳನ್ನು ಹೋಗಲಾಡಿಸುವ ಮಾಧ್ಯಮವಾಗಿರುತ್ತದೆ. ಅಂತಹ ಶಿಕ್ಷಣವೆಂಬ ಬೆಳಕನ್ನು ಬೆಳಗಿಸುವವರು ಶಿಕ್ಷಕ ಸಮೂಹ. ಒಂದು ಕಡೆ ಪೋಷಕರ ಅಪೇಕ್ಷೆಗಳಿಗೆ ಕಿವಿಗೊಟ್ಟು ಅವರನ್ನು ಗೌರವಿಸುವುದು, ಇನ್ನೊಂದು ಕಡೆ ಸಂಸ್ಥೆಯ ಮುಖ್ಯಸ್ಥರು, ಆಡಳಿತ ಮಂಡಳಿಗಳ ನಿರೀಕ್ಷೆಗಳಿಗೆ ತಕ್ಕಂತೆ ನಡೆದುಕೊಳ್ಳುವುದು, ಜತೆಗೆ ಸರಕಾರದ ಹಲವು ನಿಯಮಗಳನ್ನು ಪಾಲಿಸಿಕೊಂಡು ಚದುರಂಗದ ಆಟದಂತೆ ಎಲ್ಲಾ ವಿಷಯಗಳನ್ನು ಸರಿದೂಗಿಸಿಕೊಂಡು ಹೋಗುವವನೇ ಉತ್ತಮ ಶಿಕ್ಷಕನಾಗಿರುತ್ತಾನೆ. ಒಬ್ಬ ವಿದ್ಯಾರ್ಥಿಯಲ್ಲಿ ಸದ್ಗುಣಗಳನ್ನು ಬೆಳೆಯಬೇಕೆಂದಲ್ಲಿ ಮೊದಲು ಶಿಕ್ಷಕನಾದವನು ಸ್ವಯಂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸ್ವಯಂ ಮೌಲ್ಯಮಾಪನದ ಮೂಲಕ ಸ್ವಯಂ ಸುಧಾರಣೆ ಮಾಡಿಕೊಂಡಲ್ಲಿ ಯಾವುದೇ ವಿದ್ಯಾರ್ಥಿಗಳನ್ನು ತಿದ್ದಿ- ತೀಡಿ ಉತ್ತಮ ನಾಗರಿಕನನ್ನಾಗಿಸಬಹುದು.
ವಿದ್ಯಾಭಾರತೀಯ ಧ್ಯೇಯೋದ್ದೇಶದ ಮಾಹಿತಿಯನ್ನು ವಿದ್ಯಾಭಾರತಿ ಕರ್ನಾಟಕ ಇದರ ಪ್ರಾಂತ ಕಾರ್ಯದರ್ಶಿಯಾದ ವಸಂತ ಮಾಧವ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷರಾದ ಲೋಕಯ್ಯ ಡಿ ವಹಿಸಿಕೊಂಡರು. ವಿದ್ಯಾಭಾರತಿ ಕರ್ನಾಟಕ, ಪುತ್ತೂರು ವಿಭಾಗದ ನಾಲ್ಕು ತಾಲೂಕುಗಳ ಸುಮಾರು 50 ವಿದ್ಯಾಸಂಸ್ಥೆಗಳ 750 ಶಿಕ್ಷಕ, ಶಿಕ್ಷಕೇತರರು, ಆಡಳಿತ ಮಂಡಳಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾದರು. ಉದ್ಘಾಟನೆ ಹಾಗೂ ವಿಶೇಷ ಉಪನ್ಯಾಸದ ಬಳಿಕ ಪ್ರಾಥಮಿಕ, ಪ್ರೌಢ ಪದವಿ ಪೂರ್ವ ವಿಭಾಗ ಹಾಗೂ ಆಡಳಿತ ಮಂಡಳಿಯ ಸದಸ್ಯರಿಗೆ ಪ್ರತ್ಯೇಕವಾಗಿ ಗುಂಪುಶಃ ಬೈಠಕ್ಗಳು ನಡೆಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ವಿದ್ಯಾಭಾರತಿಯ ನೈತಿಕ, ಆಧ್ಯಾತ್ಮಿಕ ಶಿಕ್ಷಕ ಪ್ರಮುಖ್ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಕಾರ್ಯನಿರ್ವಹಣಾಧಿಕಾರಿ ವೆಂಕಟರಮಣ ರಾವ್ ಮಂಕುಡೆ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಆಡಳಿತ ಮಂಡಳಿ ಕೋಶಾಧಿಕಾರಿ ಸಚಿನ್ ಶೆಣೈ ವಂದಿಸಿದರು. ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಕನ್ನಡ ಭಾಷಾ ವಿಭಾಗದ ಉಪನ್ಯಾಸಕಿ ಪುಷ್ಪಲತಾ ಕಾರ್ಯಕ್ರಮವನ್ನು ನಿರೂಪಿಸಿದರು.
