✍🏻.ಕಡಮಜಲು ಸುಭಾಸ್ ರೈ, ಪ್ರಗತಿಪರ ಅಡಿಕೆ ಕೃಷಿಕ
ಪುತ್ತೂರು: 2024-25ನೇ ಸಾಲಿನಲ್ಲಿ ಉತ್ತಮ ಅಡಿಕೆ ಫಸಲನ್ನು ನಿರೀಕ್ಷಿಸಿದ ರೈತರ ಪಾಲಿಗೆ ಮೇ ತಿಂಗಳಿನಿಂದ ಪ್ರಾರಂಭವಾದ ಜಿನುಗುಟ್ಟಿದ ಮಳೆ ಶಾಪವಾಗಿ ಪರಿಣಮಿಸಿದೆ. ಕೊಳೆರೋಗಕ್ಕೆ ಒಂದೇ ಒಂದು ಪರಿಣಾಮಕಾರಿಯಾದ ರಾಮಬಾಣ ಬೋರ್ಡೋ ಮಿಶ್ರಣ ಸಿಂಪಡಿಸಲಾಗದ ರೈತ ಕೊಳೆರೋಗವನ್ನು ನಿಯಂತ್ರಿಸಲಾಗದೇ ಕಂಗಾಲಾಗಿದ್ದಾನೆ. ಈವರೆಗೂ ಹೈಬ್ರೀಡ್ ತಳಿಗಳಾದ ಮಂಗಳ, ಸುಮಂಗಳ, ಇಂಟರ್ ಸಿ ಮೊದಲಾದ ತಳಿಗಳಲ್ಲಿ ಶೇ. 40 ರಿಂದ 50 ರಷ್ಟು ಅಡಿಕೆ ಕಾಯಿ ಉದುರಿದೆ. ಊರ ತಳಿಯಲ್ಲಿ ಶೇ. 25 ರಿಂದ 30 ರಷ್ಟು ಅಡಿಕೆ ಕಾಯಿ ಉದುರಿದೆ. ಹೀಗೆ ಮಳೆ ಮುಂದುವರಿದರೆ ರೈತರು ಅಪಾರ ಪ್ರಮಾಣದ ಅಡಿಕೆ ಬೆಳೆನಷ್ಟ ಅನುಭವಿಸಿ ದ.ಕ. ಜಿಲ್ಲೆಯ ಆರ್ಥಿಕ ವ್ಯವಸ್ಥೆಗೆ ಆಘಾತ ಉಂಟಾಗುವ ಭೀತಿ ಎದುರಾಗಬಹುದು. ಪ್ರಾಕೃತಿಕ ವಿಕೋಪದಿಂದಾಗುವ ಪರಿಣಾಮಕ್ಕೆ ಸರಕಾರ ಸೂಕ್ತ ಕ್ರಮ ಕೈಗೊಂಡು ರೈತರ ನಷ್ಟ ಪರಿಹಾರಕ್ಕೆ ಮುಂದಾಗಬೇಕೆಂದು ರೈತರ ಆಗ್ರಹವಿದೆ.
2023-24 ನೇ ಸಾಲಿನಲ್ಲಿ ಅಡಿಕೆ ಬೆಳೆಯಲ್ಲಿ ಫಸಲು ಕುಂಠಿತವಾಗಿತ್ತು. 2022-23 ನೇ ಸಾಲಿನಲ್ಲಿ ಮಳೆ ಇಲ್ಲದೇ ಬೆಳೆ ನಷ್ಟವಾಗಿದೆ. ಈ ಬಾರಿ ಅಧಿಕ ಮಳೆಯಿಂದ ಬೆಳೆ ನಷ್ಟವಾಗುವ ಎಲ್ಲಾ ಭೀತಿಯಲ್ಲಿ ರೈತನಿದ್ದಾನೆ. ಹೀಗೇ ಮುಂದುವರಿದರೆ ರೈತನಿಗೆ ಬದುಕುವ ದಾರಿ ಇಲ್ಲವಾಗುತ್ತದೆ.