ನರೇಂದ್ರ ಪ.ಪೂ. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಅನಾವರಣ ಕಾರ್‍ಯಕ್ರಮ ಟ್ಯಾಲೆಂಟ್ ಶೋ

0

ಪುತ್ತೂರು: ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಇದೊಂದು ಉತ್ತಮ ವೇದಿಕೆಯಾಗಿದೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಸಾಹಿತ್ಯ, ಸಂಗೀತ, ನೃತ್ಯ, ನಾಟಕ ಮುಂತಾದ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಉತ್ತಮ ವ್ಯಕ್ತಿತ್ವ ಮತ್ತು ಉಜ್ವಲ ಭವಿಷ್ಯ ನಿರ್ಮಾಣ ಸಾಧ್ಯ.ಹೊಸ ಹೊಸತಾದ ವಿಚಾರಗಳು, ಸಂಶೋಧನೆಗಳು ಜೀವನಕ್ಕೆ ಹೊಸ ರೂಪಗಳನ್ನು ಕೊಡುತ್ತದೆ ಎಂದು ಚಲನಚಿತ್ರ ನಟರಾದ ವಿಜಯಹರಿ ರೈ ಬಳ್ಳಮಜಲು ಹೇಳಿದರು.

ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಾ ಅನಾವರಣ ಕಾರ್‍ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್‍ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪತ್ರಕರ್ತರು ಮತ್ತು ಪುತ್ತೂರಿನ ಸುದ್ದಿ ಚಾನಲ್ ನಲ್ಲಿ ನಿರೂಪಕರಾದ ಹೇಮಾ ಜಯರಾಮ ರೈ ರವರು ಮಾತನಾಡುತ್ತಾ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಇಂದಿನ ಯುವಜನತೆಗೆ ಪರಿಚಯಿಸುವ ಈ ಕಾರ್‍ಯಕ್ರಮ ಅರ್ಥಪೂರ್ಣವಾಗಿದೆ. ಶೈಕ್ಷಣಿಕ ಕಾಲ ಘಟ್ಟದಲ್ಲಿ ಪಠ್ಯದ ಜೊತೆಗೆ ಇನ್ನಿತರ ಚಟುವಟಿಕೆಗಳಲ್ಲಿ ನಮ್ಮನ್ನು ಹೆಚ್ಚು ಸಕ್ರಿಯರಾಗಿಸುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಇಂತಹ ಕಾರ್‍ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸಿದ್ದಲ್ಲಿ ವಿದ್ಯಾರ್ಥಿಗಳು ಕ್ರಿಯಾತ್ಮಕ ಯೋಚನೆಗಳಿಗೆ ತಮ್ಮನ್ನು ತೆರೆದುಕೊಳ್ಳುತ್ತಾರೆ. ವಿದ್ಯಾರ್ಥಿ ಜೀವನವನ್ನು ವ್ಯರ್ಥ ಮಾಡದೆ ಎಚ್ಚರಿಕೆಯಿಂದ ಹೆಜ್ಜೆಯಿಡುತ್ತಾ ಮುನ್ನಡೆದು ಗುರಿಯನ್ನು ತಲುಪಿ ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಕಾಂತ ಕೊಳತ್ತಾಯ ರವರು ಮಾತನಾಡುತ್ತಾ ಸೋಲು ಗೆಲುವು ಶಾಶ್ವತವಲ್ಲ ಎಂಬ ಸತ್ಯದ ಅರಿವಿನೊಡನೆ ಮುನ್ನಡೆಯಿರಿ. ಅವಕಾಶಗಳನ್ನು ಉತ್ತಮ ಅಭಿಲಾಷೆಯೊಂದಿಗೆ ನಿಮ್ಮದಾಗಿಸಿಕೊಳ್ಳಿ ಮತ್ತು ಈ ದೇಶದ ಉತ್ತಮ ನಾಗರಿಕರಾಗಿ ಬಾಳಿ ಎಂದು ಹೇಳಿದರು.

ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್‍ಯಕ್ರಮ ಎಲ್ಲರ ಮನಸೆಳೆಯಿತು. ವಿದ್ಯಾರ್ಥಿಗಳು ಆಯ್ಕೆ ಮಾಡಿದವಿಷಯದ ಆಧಾರದ ಮೇಲೆ ದೇಶದ ವಿವಿಧ ರೀತಿಯ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿದರು. ಬಳಿಕ ನಡೆದ ಸಮಾರೋಪ ಕಾರ್‍ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬೆಂಗಳೂರಿನ ಶಂಕರ್ ಮಹಾದೇವನ್ ಅಕಾಡೆಮಿಯಲ್ಲಿ ಸಂಗೀತದ ಪ್ರಾಧ್ಯಾಪಕರಾದ ನಂದಿನಿ ವಿನಾಯಕ ಪುತ್ತೂರು ಇವರು ಮಾತನಾಡುತ್ತಾ, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪರಿಪೂರ್ಣ ವ್ಯಕ್ತಿತ್ವ ರೂಪಿಸಲು ಪಠ್ಯೇತರ ಮತ್ತು ಸಾಂಸ್ಕೃತಿಕ ಚಟುವಟಿಕೆ ಸಹಕಾರಿಯಾಗಿದ್ದು,ಇಂತಹ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಪಾಲ್ಗೊಳ್ಳುವುದು ಮುಖ್ಯ ಹೊರತು ಸೋಲು ಗೆಲುವಲ್ಲ.ಇಂತಹ ಸುಪ್ತ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಕ್ಕಾಗ ಮಾತ್ರ ಯುವಶಕ್ತಿಯು ವಿಶ್ವಕ್ಕೆ ಪರಿಚಿತವಾಗಿ ದೇಶದ ಕೀರ್ತಿ ಹೆಚ್ಚಿಸಬಲ್ಲದು ಎಂದು ಹೇಳಿದರು.

ಚಲನಚಿತ್ರ ನಿರ್ದೇಶಕರಾದ ಕೀರ್ತನ್ ಶೆಟ್ಟಿ ಸುಳ್ಯ ಇವರು ಮಾತನಾಡುತ್ತಾ ಇಂತಹ ಕಾರ್‍ಯಕ್ರಮಗಳಿಂದ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಲು ಸಾಧ್ಯವಾಗುತ್ತದೆ .ಪಠ್ಯೇತರ ಚಟುವಟಿಕೆಗಳಲ್ಲಿ ಅವರ ಆಸಕ್ತಿಯ ಜೊತೆಗೆ ಸೃಜನಾತ್ಮಕತೆ, ಆತ್ಮವಿಶ್ವಾಸವು ವೃದ್ಧಿಸುತ್ತದೆ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಅವಕಾಶಕೊಟ್ಟಾಗ ಹೊಸ ಆವಿಷ್ಕಾರಗಳು ಹೊರಹೊಮ್ಮುವ ಸಾಧ್ಯತೆಗಳಿರುತ್ತದೆ ಎಂದು ಹೇಳಿದರು.

ಬೆಂಗಳೂರಿನ ಶಂಕರ್ ಮಹಾದೇವನ್ ಅಕಾಡೆಮಿಯಲ್ಲಿ ಸಂಗೀತದ ಪ್ರಾಧ್ಯಾಪಕರಾದ ನಂದಿನಿ ವಿನಾಯಕ ಪುತ್ತೂರು ಮತ್ತು ಚಲನಚಿತ್ರ ನಿರ್ದೇಶಕರಾದ ಕೀರ್ತನ್ ಶೆಟ್ಟಿ ಸುಳ್ಯ ಇವರು ಪರೀಕ್ಷಕರಾಗಿ ಭಾಗವಹಿಸಿದ್ದರು. ಅತ್ಯುತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳ ತಂಡಕ್ಕೆ ಬಹುಮಾನವನ್ನು ನೀಡಲಾಯಿತು. ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ತಂಡ ಪ್ರಥಮ ಬಹುಮಾನವನ್ನು ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ತಂಡ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿತು.

ಕಾರ್‍ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಸ್ವಾಗತಿಸಿ, ಉಪನ್ಯಾಸಕರಾದ ಶ್ರೀಮತಿ ರುಚಿತ ಕೃಷ್ಣ ವಂದಿಸಿದರು.ಶ್ರೀಮತಿ ಮಧುರಾ, ಶ್ರೀಮತಿ ಸಾಯಿಗೀತಾ ಕಾರ್‍ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here