ನೆಲ್ಯಾಡಿ: ಕೆಎಸ್ಆರ್ಟಿಸಿ ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಪ್ರಯಾಣಿಕರೋರ್ವರು ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಬರ್ಚಿನಹಳ್ಳ ಎಂಬಲ್ಲಿ ಆ.2ರಂದು ಬೆಳಿಗ್ಗೆ ನಡೆದಿದೆ.
ಧರ್ಮಸ್ಥಳದಿಂದ ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ಸು(ಕೆಎ 40, ಎಫ್ 1508) ಹಾಗೂ ಬೆಂಗಳೂರು ಕಡೆಯಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಸು (ಕೆಎ 40, ಎಫ್ 1130) ನಡುವೆ ಬೆಳಿಗ್ಗೆ 5.30ಕ್ಕೆ ರಾಷ್ಟ್ರೀಯ ಹೆದ್ದಾರಿ 75ರ ಕಡಬ ತಾಲೂಕಿನ ಶಿರಾಡಿ ಗ್ರಾಮದ ಬರ್ಚಿನಹಳ್ಳದಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಘಟನೆಯಲ್ಲಿ ಧರ್ಮಸ್ಥಳದಿಂದ ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕ ಬಿಜು ಜೋಸೆಫ್ ಎಂಬವರ ತಲೆಗೆ ಗುದ್ದಿದ ಗಾಯವಾಗಿದೆ. ಗಾಯಾಳುವನ್ನು ಉಪಚರಿಸಿ ಚಿಕಿತ್ಸೆ ಬಗ್ಗೆ ನಿರ್ವಾಹಕ ಅಶ್ವಥಪ್ಪರವರು ಸಕಲೇಶಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪ್ರಥಮ ಚಿಕಿತ್ಸೆಯ ಬಳಿಕ ಬಿಜು ಜೋಸೆಫ್ ಅವರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಈ ಅಪಘಾತದಿಂದ ಎರಡು ವಾಹನಗಳು ಜಖಂಗೊಂಡಿವೆ, ಈ ಬಗ್ಗೆ ಕೆಎ 40, ಎಫ್ 1508 ನೋಂದಣಿ ನಂಬ್ರದ ಬಸ್ಸಿನ ಚಾಲಕ ಬಸವರಾಜ್ ಎಂಬವರು ನೀಡಿದ ದೂರಿನಂತೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.