ಉಪ್ಪಿನಂಗಡಿ: ಹಿಂದೂ ಸಮಾಜದ ಶ್ರದ್ಧಾ ಕೇಂದ್ರ, ಸಮಾಜದ ಸರ್ವಾಂಗೀಣ ಉನ್ನತಿಗಾಗಿ ಶ್ರಮಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಪಾವಿತ್ರತೆಗೆ ಹಾನಿ, ಷಡ್ಯಂತ್ರದ ಪ್ರಯತ್ನ ನಡೆಯುತ್ತಿದೆ ಎಂದು ಕ್ಷೇತ್ರದ ಪಾವಿತ್ರತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ದೇವತಾ ಶಕ್ತಿಗಳು ಕೃಪೆ ತೋರಬೇಕೆಂದು ಯಾಚಿಸಿ ಭಕ್ತ ಸಮುದಾಯ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಸನ್ನಿಧಿಯಲ್ಲಿ ಸಾಮೂಹಿಕ ವಿಶೇಷ ಪ್ರಾರ್ಥನೆ ನಡೆಸಿ, ನೇತ್ರಾವತಿ ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿ ಹಣತೆಗಳನ್ನು ತೇಲಿ ಬಿಡಲಾಯಿತು.
ಶ್ರೀ ಸಹಸ್ರಲಿಂಗೇಶ್ವರ ಮತ್ತು ಮಹಾಕಾಳಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಭಕ್ತ ಜನತೆ ಬಳಿಕ ಪ್ರಕೃತಿಯ ಆರಾಧನೆಯ ನೆಲೆಯಲ್ಲಿ 51 ಹಣತೆಗಳನ್ನು ಬೆಳಗಿಸಿ ನದಿ ಸಂಗಮ ಸ್ಥಳದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಹಣತೆಗಳನ್ನು ಸಮರ್ಪಿಸಲಾಯಿತು.
ಈ ಸಂಧರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ವ್ಯವಸ್ಥಿತ ಪಿತೂರಿಯಂತೆ ವಿವಿಧ ಆರೋಪಗಳನ್ನು ಮಾಡುತ್ತಾ ನಾಡಿನ ಜನತೆಗೆ ಕ್ಷೇತ್ರದ ಬಗ್ಗೆ ಅಪನಂಬಿಕೆ ಬರುವಂತೆ ಮಾಡುವುದು, ಸಾಕ್ಷಿಗಳನ್ನು ಒದಗಿಸದೆ ಬರಿಯ ಆರೋಪ ಮಾಡುತ್ತಾ ಪವಿತ್ರ ಕ್ಷೇತ್ರದ ಬಗ್ಗೆ ಭಕ್ತ ಜನತೆಯ ಭಾವನೆಗಳಿಗೆ ಧಕ್ಕೆ ತರುವಂತೆ ಹೇಳಿಕೆಗಳನ್ನು ನೀಡುವುದು, ದೇವಾಲಯವನ್ನು ವಶಪಡಿಸಿಕೊಳ್ಳುವ ಮತ್ತು ಧ್ವಂಸಗೊಳಿಸುವ ಬೆದರಿಕೆಯೊಡ್ಡುವ ಮೂಲಕ ಭಕ್ತ ಸಮುದಾಯದ ಭಾವನೆಗಳಿಗೆ ಘಾಸಿಯನ್ನುಂಟು ಮಾಡುತ್ತಿರುವ ವಿದ್ಯಾಮಾನಗಳಿಂದಾಗಿ ಪ್ರತಿಯೊಬ್ಬ ಭಕ್ತರ ಹೃದಯದಲ್ಲಿ ನೋವು ಮಡುಗಟ್ಟಿದೆ. ಈ ಸೂಕ್ಷ್ಮ ಸಂಧರ್ಭದಲ್ಲಿ ದೈವೀ ಶಕ್ತಿಯು ತನ್ನ ವಿರಾಟ ಸ್ವ್ವರೂಪವನ್ನು ಪ್ರದರ್ಶಿಸಿ ಕ್ಷೇತ್ರದ ಪಾವಿತ್ರತೆಯನ್ನು ಹಾಳುಗೆಡವಲು ಯತ್ನಿಸುವ ಮಂದಿಗೆ ಸದ್ಭುದ್ದಿಯನ್ನು ಕರುಣಿಸಬೇಕು. ಷಡ್ಯಂತ್ರ ರೂಪಿಸಿದ ದುಷ್ಟ ಶಕ್ತಿಗಳನ್ನು ದೈವದ ಅಭೀಷ್ಠೆಯಂತೆ ನಿಗ್ರಹಿಸಬೇಕೆಂದು ಸಾಮಾಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಪ್ರಮುಖರಾದ ಕರುಣಾಕರ ಸುವರ್ಣ, ಧನ್ಯ ಕುಮಾರ್ ರೈ, ವಿದ್ಯಾಧರ ಜೈನ್, ಕಂಗ್ವೆ ವಿಶ್ವನಾಥ ಶೆಟ್ಟಿ, ಎನ್. ಉಮೇಶ್ ಶೆಣೈ, ಹರಿರಾಮಚಂದ್ರ, ಲೋಕೇಶ್ ಬೆತ್ತೋಡಿ, ಉಷಾ ಆಚಾರ್ಯ, ಧನಂಜಯ್ ನಟ್ಟಿಬೈಲು, ಸುರೇಶ್ ಅತ್ರಮಜಲು, ಅಂಬಾಪ್ರಸಾದ್ ಪಾತಾಳ, ಹೇರಂಭ ಶಾಸ್ರಿ, ಶ್ರೀ ರಾಮ ಪಾತಾಳ, ಹೊನ್ನಪ್ಪ ವರೆಕ್ಕಾ, ಮಹೇಂದ್ರ ವರ್ಮ ಪಡ್ಪು, ಸುನಿಲ್ ಅನಾವು, ಚಂದ್ರಶೇಖರ್ ಮಡಿವಾಳ, ಕೈಲಾರ್ ರಾಜಗೋಪಾಲ ಭಟ್, ಜಯಂತ ಪೊರೋಳಿ, ಉಷಾಚಂದ್ರ ಮುಳಿಯ, ಪ್ರಸಾದ್ ಭಂಡಾರಿ, ಲೋಕೇಶ್ ಜೈನ್ ಮತ್ತಿತರರು ಭಾಗವಹಿಸಿದ್ದರು.