ಪುತ್ತೂರು: ಬಂಟರ ಯಾನೆ ನಾಡವರ ಮಾತೃ ಸಂಘ ಪುತ್ತೂರು ತಾಲೂಕು ಸಮಿತಿಯಿಂದ ದಯಾನಂದ ರೈ ಮನವಳಿಕೆಗುತ್ತುರವರಿಗೆ ಚಾವಡಿ ಸಮ್ಮಾನ ಹಾಗೂ ಸಮಿತಿ ಸಭೆಯು ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈಯವರ ಅಧ್ಯಕ್ಷತೆಯಲ್ಲಿ ಪುತ್ತೂರು ಬಂಟರ ಭವನದಲ್ಲಿ ಆ.11ರಂದು ಜರಗಿತು.
ಬಂಟರ ಭವನದ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿ, ಭವನದ ಸೌಂದರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅನುದಾನವನ್ನು ಕಾಯ್ದಿರಿಸಲಾಯಿತು. ಪುತ್ತೂರು ಬಂಟರ ಸಂಘಕ್ಕೆ ಸರಕಾರದಿಂದ ನಿವೇಶವನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹಾಗೂ ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರಿಗೆ ವಿಶೇಷ ಅಭಿನಂದನೆಯನ್ನು ಸಲ್ಲಿಸಲಾಯಿತು. ಎಪ್ರಿಲ್ ತಿಂಗಳಿನಿಂದ ಇಲ್ಲಿಯವರಿಗೆ ಮಾಡಿದ ಖರ್ಚು-ವೆಚ್ಚಗಳನ್ನು ಸಭೆಯಲ್ಲಿ ಅನುಮೋದಿಸಲಾಯಿತು.
ದಯಾನಂದ ರೈ ಮನವಳಿಕೆಗುತ್ತುರವರಿಗೆ ಚಾವಡಿ ಸಮ್ಮಾನ
ಸಭೆಯ ಬಳಿಕ ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಹಾಗೂ ಅಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾಗಿರುವ ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕರಾದ ದಯನಂದ ರೈ ಮನವಳಿಕೆಗುತ್ತುರವರಿಗೆ ಮಾತೃ ಸಂಘದ ತಾಲೂಕು ಸಮಿತಿಯ ವತಿಯಿಂದ ಚಾವಡಿ ಸಮ್ಮಾನವನ್ನು ನೇರವೇರಿಸಲಾಯಿತು.
ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಸನ್ಮಾನವನ್ನು ನೆರವೇರಿಸಿ, ದಯಾನಂದ ರೈಗಳ ಮುಂದಿನ ಸಾಮಾಜಿಕ ಚಟುವಟಿಕೆಗಳಿಗೆ ಶುಭಹಾರೈಸಿದರು. ಮಾತೃ ಸಂಘದ ತಾಲೂಕು ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ ಹಾಗೂ ಸಹಸಂಚಾಲಕ ಸಾಜ ರಾಧಾಕೃಷ್ಣ ಆಳ್ವರವರುಗಳು ದಯಾನಂದ ರೈಯವರಿಗೆ ಶುಭಕೋರಿದರು. ಮಾತೃ ಸಂಘದ ನಿರ್ದೇಶಕರಾದ ಮಿತ್ರಂಪಾಡಿ ಪುರಂದರ ರೈ, ಜೈರಾಜ್ ಭಂಡಾರಿ ನೊಣಾಲು, ಜಯಪ್ರಕಾಶ್ ರೈ ನೂಜಿಬೈಲು, ನಿತ್ಯಾನಂದ ಶೆಟ್ಟಿ ಮನವಳಿಕೆ, ವಾಣಿ ಶೆಟ್ಟಿ ನೆಲ್ಯಾಡಿ, ಬಂಟರ ಸಂಘದ ನಿರ್ದೇಶಕ ರವಿಪ್ರಸಾದ್ ಶೆಟ್ಟಿ ನೆಲ್ಯಾಡಿ, ದಯಾನಂದ ರೈ ಕೋರ್ಮಂಡ, ಬಂಟರ ಸಂಘದ ಕಾರ್ಯದರ್ಶಿ ರಂಜಿನಿ ಶೆಟ್ಟಿ, ಬಂಟರ ಭವನ ಕಚೇರಿ ನಿರ್ವಹಕರಾದ ರವಿಚಂದ್ರ ರೈ ಕುಂಬ್ರ ಹಾಗೂ ಭಾಸ್ಕರ್ ರೈ ಉಪಸ್ಥಿತರಿದ್ದರು.