ಪುತ್ತೂರು: ಹಲವು ದಿನಗಳಿಂದ ಎಲ್ಲೆಡೆ ಸುದ್ದಿಯಾಗುತ್ತಿರುವ ಧರ್ಮಸ್ಥಳ ಪ್ರಕರಣದ ಕುರಿತು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಅಧೀವೇಶನದಲ್ಲಿ ಮಾತನಾಡಿದ್ದು, ಎಸ್.ಐ.ಟಿ ತನಿಖೆಯಿಂದ ಎಲ್ಲಾ ಗೊಂದಲಗಳಿಗೂ ತೆರೆ ಬೀಳಲಿದೆ ಎಂದವರು ಹೇಳಿದರು.
‘ಧರ್ಮಸ್ಥಳದಲ್ಲಿ ಸುಮಾರು 10-12ವರುಷಗಳ ಹಿಂದೆ ಸೌಜನ್ಯ ಎಂಬ ಯುವತಿಯ ಅತ್ಯಾಚಾರ ಕೊಲೆ ಪ್ರಕರಣ ಗೊಂದಲವನ್ನು ಸೃಷ್ಟಿ ಮಾಡಿತ್ತು. ಕೋರ್ಟ್ ನಲ್ಲಿ ಶಿಕ್ಷೆಯಾಗುವಂತದ್ದು, ಬಳಿಕ ಬಿಡುಗಡೆ ಕೂಡ ಆಗಿತ್ತು. ಆದರೆ ಸಮಾಜದಲ್ಲಿ ಎಲ್ಲ ಕಡೆ ಗೊಂದಲ ಅದೇರೀತಿಯಾಗಿತ್ತು. ಈ ವಿಚಾರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನಿರಂತರ ಚರ್ಚೆಯಾಗುತ್ತಿತ್ತು. ಈಗ ಸುಮಾರು 10-18 ದಿನಗಳಿಂದ ಎಸ್.ಐ.ಟಿ ತನಿಖೆಗೆ ಸರಕಾರ ನೀಡಿದೆ. ಸರಕಾರ ಈ ಪ್ರಕರಣವನ್ನು ಎಸ್.ಐ.ಟಿ ತನಿಖೆಗೆ ನೀಡಿರುವುದನ್ನು ಧರ್ಮಸ್ಥಳ ಕ್ಷೇತ್ರದ ಆಡಳಿತ ಮಂಡಳಿಯವರು ಕೂಡ ಸ್ವಾಗತಿಸಿದ್ದು, ಪರ-ವಿರೋಧ ಇದ್ದವರೂ ಕೂಡ ಎಸ್.ಐ.ಟಿ ತನಿಖೆಗೆ ನೀಡಿರುವುದನ್ನು ಸ್ವಾಗತಿಸಿದ್ದಾರೆ. ಇದು ಸರಕಾರದ ಒಳ್ಳೆಯ ಕೆಲಸವಾಗಿದೆ. ಧರ್ಮಸ್ಥಳ ಕ್ಷೇತ್ರಕ್ಕೆ ವಿಶ್ವದೆಲ್ಲೆಡೆ ಭಕ್ತಾಧಿಗಳಿದ್ದಾರೆ. ಹಲವರ ಮನಸ್ಸಿನಲ್ಲಿ ಈ ಬಗ್ಗೆ ಗೊಂದಲವಿತ್ತು. ಆ ಗೊಂದಲಕ್ಕೆ ತೆರೆಯೆಳೆಯುವ ಕೆಲಸವನ್ನು ಸರಕಾರ ಮಾಡಿದೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಒಳ್ಳೆಯದಲ್ಲ. ಕಾಂಗ್ರೆಸ್ ಪಕ್ಷ ಧರ್ಮಸ್ಥಳಕ್ಕೆ ವಿರೋಧವಿಲ್ಲ. ಎಸ್.ಐ.ಟಿಗೆ ಈ ಪ್ರಕರಣ ನೀಡಿದ್ದರಿಂದ ಜನರಲ್ಲಿರುವಂತಹ ಗೊಂದಲ ನಿವಾರಣೆಗೆ ದಾರಿಯಾಗಿದೆ. ಇದೀಗ ಒಂದು ಹಂತದ ಮಾಹಿತಿಯ ರಿಪೋರ್ಟ್ ನಮಗೆ ಬಂದಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಯಾವ ರೀತಿಯ ಕಾನೂನು ಕ್ರಮಕೈಗೊಳ್ಳಬೇಕು ಅದನ್ನು ಸರಕಾರ ಕೈಗೊಳ್ಳಲಿದೆ. ನಾವು ಯಾವುದೇ ಧರ್ಮದ ವಿರೋಧಿಗಳಲ್ಲ. ಧರ್ಮಸ್ಥಳ ಕ್ಷೇತ್ರ ಧರ್ಮದ ಕ್ಷೇತ್ರ ಮಾತ್ರವಲ್ಲ, ದಕ್ಷಿಣ ಕನ್ನಡ ಜಿಲ್ಲೆಗೆ ಟೆಂಪಲ್ ಟೂರಿಸಂಗೆ ಕೂಡ ಅದು ಸಾಕ್ಷಿಯಾಗಿದೆ. ಅಂತಹ ಕ್ಷೇತ್ರವನ್ನು ಉಳಿಸುವಂತಹ ಕೆಲಸವನ್ನು ಸರಕಾರ ಮಾಡುತ್ತದೆ. ಸರಕಾರ ಕ್ಷೇತ್ರದ ಪರವಾಗಿದೆ. ಕಾನೂನು ರೀತಿಯಲ್ಲಿ ತನಿಖೆ ನಡೆಯಲಿದೆ’ ಎಂದವರು ಹೇಳಿದರು.