ರೂ.11.19ಲಕ್ಷ ಲಾಭ, ಶೇ.5 ಡಿವಿಡೆಂಡ್
ಪುತ್ತೂರು: ಪುತ್ತೂರು ಹಾಗೂ ಕಡಬ ತಾಲೂಕುಗಳ ವ್ಯಾಪ್ತಿ ಹೊಂದಿರುವ ನೇತ್ರಾವತಿ ಸ್ತ್ರೀಶಕ್ತಿ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘವು 2024-25ನೇ ಸಾಲಿನಲ್ಲಿ ರೂ.11,19,885.91 ನಿವ್ವಳ ಲಾಭಗಳಿಸಿದೆ. ಸದಸ್ಯರಿಗೆ ಶೇ.5 ಡಿವಿಡೆಂಟ್ ನೀಡಲಾಗುವುದು ಎಂದು ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ ವಾರ್ಷಿಕ ಮಹಾಸಭೆಯಲ್ಲಿ ಹೇಳಿದರು.
ಸಭೆಯು ಸೆ.17ರಂದು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸಭಾಭವನದಲ್ಲಿ ನಡೆಯಿತು. ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2014-15ರಲ್ಲಿ ಪ್ರಾರಂಭಗೊಂಡಿರುವ ಸಂಘವು ರೂ.43,25,500 ಸದಸ್ಯರ ಪಾಲು ಬಂಡವಾಳ ಹಾಗೂ ರೂ.11,47,000 ಸರಕಾರದ ಸಹಾಯ ನಿಧಿಯನ್ನು ಹೊಂದಿದೆ. ರೂ.1,62,15,082 ಠೇವಣಿಯನ್ನು ಹೊಂದಿದೆ. ಸದಸ್ಯರಿಗೆ ರೂ.1,81,26,700 ಸಾಲ ವಿತರಿಸಲಾಗಿದ್ದು ರೂ.2,00,98,714 ಸಾಲ ಹೊರಬಾಕಿಯಿರುತ್ತದೆ. ಆಡಿಟ್ ವರ್ಗೀಕರಣದಲ್ಲಿ ಸಂಘವು `ಎ’ ಶ್ರೇಣಿ ಪಡೆದುಕೊಂಡಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಗಳ ಕಾಳೆ, ಸಹಕಾರಿ ಸಂಘದ ನಿರ್ದೇಶಕರಾದ ಅಮಿತಾ ಹರೀಶ್, ಜಯಂತಿ ಆರ್.ಗೌಡ, ಜಯಲಕ್ಷ್ಮೀ ಸುರೇಶ್, ಜೊಹರಾ ನಿಸಾರ್, ಕೀರ್ತಿ ಕುಮಾರಿ, ಸುಲೋಚನ, ಸುಶೀಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಪದನಿಮಿತ್ತ ನಿರ್ದೇಶಕರಾಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನೂತನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹರೀಶ್ ಕೆ. ಹಾಗೂ ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿಯ ಅಧ್ಯಕ್ಷೆ ಕಮಲರವರನ್ನು ಗೌರವಿಸಲಾಯಿತು.
ನಿರ್ದೇಶಕಿ ಶಕುಂತಳಾ ಎ. ಪ್ರಾರ್ಥಿಸಿದರು. ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ ಎಂ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕಿ ಪ್ರೇಮಲತಾ ಎಸ್ ರೈ ಮಹಾಸಭೆಯ ತಿಳುವಳಿಕೆ ಪತ್ರ ಓದಿದರು. ಉಪಾಧ್ಯಕ್ಷೆ ಧನ್ಯಮೋಹನ್ ವಂದಿಸಿದರು. ಅಕೌಂಟೆAಟ್ ಅಶ್ವಿನಿ ಸಾಮಾನಿ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಸಂಘವು ಲಾಭಗಳಿಕೆಯಲ್ಲಿ ಹಂತ ಹಂತವಾಗಿ ಏರಿಕೆ ಕಂಡಿದ್ದು ಈ ವರ್ಷ ರೂ.11.19 ಲಕ್ಷ ಲಾಭಗಳಿಸಿದೆ. ಮುಂದಿನ ವರ್ಷದ ಇನ್ನಷ್ಟು ಹೆಚ್ಚಿನ ಲಾಭಗಳಿಸುವ ನಿರೀಕ್ಷೆಯಿದೆ. ಮಹಿಳೆಯರ ಆರ್ಥಿಕಾಭಿವೃದ್ಧಿಗಾಗಿರುವ ಸಹಕಾರಿ ಸಂಘದ ಮುಖಾಂತರ ಸದಸ್ಯರೆಲ್ಲರೂ ವ್ಯವಹರಿಸಬೇಕು. ಸಂಘದಲ್ಲಿಯೇ ಹೆಚ್ಚಿನ ಠೇವಣಿಯಿಡಬೇಕು. ಸಾಲಗಾರರು ಕ್ಲಪ್ತ ಸಮಯದಲ್ಲಿ ಮರುಪಾವತಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು.
-ಮೀನಾಕ್ಷಿ ಮಂಜುನಾಥ, ಅಧ್ಯಕ್ಷರು