ನೆಲ್ಯಾಡಿ: ಕೋಲ್ಪೆ ಬದ್ರಿಯಾ ಜುಮಾ ಮಸೀದಿ ಖತೀಬರಾದ ಇಸಾಕ್ ಫೈಝಿ ಅವರಿಗೆ ಜಮಾಅತ್ ವತಿಯಿಂದ ಮಾರುತಿ ವ್ಯಾಗನರ್ ಕಾರು ಉಡುಗೊರೆಯಾಗಿ ನೀಡಲಾಗಿದೆ.
ಎಸ್‌ಕೆಎಸ್‌ಎಸ್‌ಎಫ್ ಮಾಜಿ ಜಿಲ್ಲಾಧ್ಯಕ್ಷರೂ ಆಗಿರುವ ಇಸಾಕ್ ಫೈಝಿ ಅವರು ಕಳೆದ ಒಂದೂವರೇ ವರ್ಷದಿಂದ ನೆಲ್ಯಾಡಿ ಸಮೀಪದ ಕೋಲ್ಪೆ ಬದ್ರಿಯಾ ಜುಮಾ ಮಸೀದಿಯಲ್ಲಿ ಖತೀಬರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮಾದರಿ ಸೇವೆ ಗುರುತಿಸಿ ಜಮಾಅತ್ ವತಿಯಿಂದ 8.50 ಲಕ್ಷ ರೂ.ಮೌಲ್ಯದ ವ್ಯಾಗನರ್ ಕಾರು ಉಡುಗೊರೆಯಾಗಿ ನೀಡಲಾಗಿದೆ.
ಇಸಾಕ್ ಫೈಝಿ ಅವರು ಕೋಲ್ಪೆ ಬದ್ರಿಯಾ ಜುಮಾ ಮಸೀದಿಯಲ್ಲಿ ಖತೀಬರಾಗಿದ್ದುಕೊಂಡು ಸಮುದಾಯದ ಸಬಲೀಕರಣಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಧಾರ್ಮಿಕ ಪ್ರಜ್ಞೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ ಸಮುದಾಯದ, ಊರಿನ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಶುಕ್ರವಾರದ ಜುಮಾ ನಮಾಝ್ ಬಳಿಕ ಅವರು ನೀಡುವ ಪ್ರವಚನಗಳು ಒಳಿತಿನ ಕಡೆಗೆ ಸಾಗಲು ಮತ್ತು ಹೊಣೆಗಾರಿಕೆಯಿಂದ ಜೀವಿಸಲು ಪ್ರೇರಣೆ ನೀಡುತ್ತಿದೆ. ಆಝಾನ್ ಕರೆಯ ಬೆನ್ನಲ್ಲೇ ನಮಾಝ್‌ಗೆ ಬರುವಂತೆ ಕೋಲ್ಪೆಯ ಮುಸ್ಲಿಮರಿಗೆ ದಿನದ ಐದು ಹೊತ್ತು ಮೈಕ್‌ನಲ್ಲಿ ಕರೆ ಕೊಡುತ್ತಾರೆ. ಜಮಾಅತ್‌ನಲ್ಲಿ ಮಾದರಿ ಸೇವೆ ನೀಡುತ್ತಿರುವ ಖತೀಬರಿಗೆ ಉಡುಗೊರೆಯಾಗಿ ಹೊಸ ಕಾರು ನೀಡಿರುವುದಾಗಿ ಕೋಲ್ಪೆ ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಸದಸ್ಯ ಕೆ.ಕೆ.ಇಸ್ಮಾಯಿಲ್ ಕೋಲ್ಪೆ ತಿಳಿಸಿದ್ದಾರೆ. ಕಾರು ಜೊತೆಗೆ ಹೊಸ ಮೊಬೈಲ್ ಫೋನ್ ಸಹ ಉಡುಗೊರೆಯಾಗಿ ನೀಡಿರುವುದಾಗಿ ಕೆ.ಕೆ.ಇಸ್ಮಾಯಿಲ್ ತಿಳಿಸಿದ್ದಾರೆ.