ತಾ|ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ನಿಂದ ಬಾಲಕಿಯರ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸುವ ದ.ಕ ಜಿಲ್ಲಾ ಕಬಡ್ಡಿ ಕ್ರೀಡಾಪಟುಗಳಿಗೆ ಕ್ರೀಡಾ ಸಮವಸ್ತ್ರ ವಿತರಣೆ

0

ಪುತ್ತೂರು: ಬೆಂಗಳೂರಿನಲ್ಲಿ 14ರ ವಯೋಮಿತಿಯ ಬಾಲಕಿಯರ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟವು ಜರಗಲಿದ್ದು, ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ನ ವತಿಯಿಂದ ರಾಜ್ಯಮಟ್ಟದಲ್ಲಿ ಭಾಗವಹಿಸುವ ದ.ಕ ಜಿಲ್ಲಾ ತಂಡದ ಕಬಡ್ಡಿ ಕ್ರೀಡಾಪಟುಗಳಿಗೆ ಕ್ರೀಡಾ ಸಮವಸ್ತ್ರ ವಿತರಣೆ ಕಾರ್ಯಕ್ರಮ ನ.2 ರಂದು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಜರಗಿತು.


ಕ್ರೀಡಾಪಟುಗಳು ಶಿಸ್ತುಬದ್ಧವಾಗಿ ಆಡಿ ಶಾಲೆಗೆ, ತಾಲೂಕಿಗೆ, ಜಿಲ್ಲೆಗೆ ಹೆಸರು ತನ್ನಿ-ಚಂದ್ರಹಾಸ ಶೆಟ್ಟಿ:
ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಗೌರವಾಧ್ಯಕ್ಷ, ದ.ಕ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಎನ್.ಚಂದ್ರಹಾಸ ಶೆಟ್ಟಿ ಮಾತನಾಡಿ, ತಾನು ಬ್ಯಾಂಕ್ ಆಫ್ ಬರೋಡ(ವಿಜಯಾ ಬ್ಯಾಂಕ್) ಗೆ ಉದ್ಯೋಗಿಯಾಗಿ ತೊಡಗಿಸಿಕೊಂಡ ಮೇಲೆ ಅನೇಕ ಕಬಡ್ಡಿ ಕ್ರೀಡಾಪಟುಗಳಿಗೆ ಬ್ಯಾಂಕ್ ನಲ್ಲಿ ಉದ್ಯೋಗ ದೊರಕಿಸಿಕೊಟ್ಟಿರುವ ಬಗ್ಗೆ ಆತ್ಮತೃಪ್ತಿ ನನಗಿದೆ. ಹಿಂದೆ ಕಬಡ್ಡಿ ಆಟಗಾರರನ್ನು ಕೇಳುವವರಿಲ್ಲ ಆದರೆ ಈಗ ಕ್ರಿಕೆಟ್ ಆಟಗಾರರ ಬಳಿಕ ಕಬಡ್ಡಿ ಆಟಗಾರರ ಹೆಸರು ಇದೆ. ರಾಜ್ಯಮಟ್ಟದಲ್ಲಿ ಆಯ್ಕೆಯಾದ ಕ್ರೀಡಾಪಟುಗಳು ಶಿಸ್ತುಬದ್ಧವಾಗಿ ಆಡಿ ಶಾಲೆಗೆ, ತಾಲೂಕಿಗೆ, ಜಿಲ್ಲೆಗೆ ಹೆಸರು ತನ್ನಿ ಎಂದರು.


ಕ್ರೀಡಾಪಟುಗಳಿಗೆ ಶ್ರೀ ಮಹಾಲಿಂಗೇಶ್ವರ ದೇವರು ಆಶೀರ್ವದಿಸಲಿ-ಸುರೇಂದ್ರ ರೈ:
ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಸುರೇಂದ್ರ ರೈ ನೇಸರರವರು ಮಾತನಾಡಿ, ರಾಜ್ಯಮಟ್ಟದ ಪಂದ್ಯಾವಳಿಗೆ 14 ಮಂದಿ ಕ್ರೀಡಾಪಟುಗಳು ಆಯ್ಕೆಯಾಗಿದ್ದು ತಮ್ಮ ಪ್ರತಿಭೆಯನ್ನು ತೋರ್ಪಡಿಸಿ. ಕ್ರೀಡಾಪಟುಗಳು ಕಠಿಣ ತರಬೇತಿಯಲ್ಲಿ ಪಾಲ್ಗೊಂಡು ಇದೀಗ ರಾಜ್ಯಮಟ್ಟದ ಪಂದ್ಯಾವಳಿಗೆ ಸಿದ್ಧರಾಗಿರುವ ಕ್ರೀಡಾಪಟುಗಳಿಗೆ ಶ್ರೀ ಮಹಾಲಿಂಗೇಶ್ವರ ದೇವರು ಆಶೀರ್ವದಿಸಲಿ ಎಂದರು.


ಕ್ರೀಡಾಪಟುಗಳು ಪುತ್ತೂರಿನ ಕೀರ್ತಿಯನ್ನು ಹತ್ತೂರಿಗೆ ಪಸರಿಸುವಂತಾಗಲಿ-ಶಿವರಾಮ ಆಳ್ವ:
ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇದರ ಪಂದ್ಯಾಟ ಸಮಿತಿ ಅಧ್ಯಕ್ಷ ಶಿವರಾಮ ಆಳ್ವ ಮಾತನಾಡಿ, ಪುತ್ತೂರಿನಲ್ಲಿ ಅಮೆಚೂರ್ ಕಬಡ್ಡಿಯನ್ನು ಆರಂಭಿಸಿದ್ದು ಈ ವಿವೇಕಾನಂದ ಶಾಲೆಯಲ್ಲಿ. ನಮ್ಮ ಅಮೆಚೂರ್ ಕಬಡ್ಡಿ ಏರ್ಪಡಿಸಿದ ಪ್ರೊ ಕಬಡ್ಡಿ ಪಂದ್ಯಾಟಕ್ಕೆ ಸಾಕಷ್ಟು ಪ್ರೋತ್ಸಾಹಿಸಿದ್ದು ಫಿಲೋಮಿನಾ ಹಾಗೂ ವಿವೇಕಾನಂದ ವಿದ್ಯಾಸಂಸ್ಥೆಗಳು. ಹಿಂದೆ ಮಡ್ ಕಬಡ್ಡಿಯಲ್ಲಿ ಕ್ರೀಡಾಪಟುಗಳು ಆಡಿ ಗಾಯಗೊಳ್ಳುವ ಸಂದರ್ಭಹೆಚ್ಚಾಗಿತ್ತು ಆದರೆ ಈಗ ಮ್ಯಾಟ್ ಕಬಡ್ಡಿ ಬಂದಿದೆ. ಆಟಗಾರರು ಗಾಯಗೊಳ್ಳುವ ಸಂಭವ ಕಡಿಮೆ. ಈಗ ರಾಜ್ಯಮಟ್ಟದ ಕಬಡ್ಡಿ ಕ್ರೀಡೆಗೆ ಆಯ್ಕೆಯಾದ 14 ಮಂದಿ ಕ್ರೀಡಾಪಟುಗಳು ಪುತ್ತೂರಿನ ಕೀರ್ತಿಯನ್ನು ಹತ್ತೂರಿಗೆ ಪಸರಿಸುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.


ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ-ಅಶೋಕ್ ಕುಂಬ್ಳೆ:
ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಕೋಶಾಧಿಕಾರಿ ಅಶೋಕ್ ಕುಂಬ್ಳೆ ಮಾತನಾಡಿ, ಸಮಾಜದಲ್ಲಿ ಗಂಧದ ಸುವಾಸನೆಯನ್ನು ಬೀರುತ್ತಾ ಬರುತ್ತಿರುವ ಸಂಸ್ಥೆ ಅಮೆಚೂರ್ ಕಬಡ್ಡಿ ಅಸೋಸಿಯೇಷನ್. ಗಿಡ ನೆಡುವ ಸಂದರ್ಭದಲ್ಲಿ ಅದಕ್ಕೆ ಕಾಲಕಾಲಕ್ಕೆ ನೀರು ಹಾಕಿ ಪೋಷಣೆ ಮಾಡುವುದರ ಜೊತೆಗೆ ಗಿಡದ ಸುತ್ತಲೂ ಕಟ್ಟೆ ಕಟ್ಟಿ ಗಿಡದ ರಕ್ಷಣೆ ಮಾಡಿದಾಗ ಆ ಗಿಡವು ಒಳ್ಳೆಯ ಫಲ ಕೊಡುವುದು. ಅದರಂತೆ ಕ್ರೀಡಾಪಟುಗಳು ಅನ್ನುವುದು ಮರ. ಮಕ್ಕಳ ಪ್ರತಿಭೆಯನ್ನು ಪೋಷಿಸುವುದು ತರಬೇತುದಾರರು ಹಾಗೆಯೇ ಮಕ್ಕಳಿಗೆ ರಕ್ಷಣೆ ಕೊಡುವುದು ಇಂತಹ ಅಮೆಚೂರ್ ಕಬಡ್ಡಿ ಸಂಸ್ಥೆಗಳು. ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಶಾಲೆಗೆ ಹಾಗೂ ಹತ್ತೂರಿಗೆ ಹೆಸರನ್ನು ತನ್ನಿ ಎಂದು ಹೇಳಿ ಶುಭ ಹಾರೈಸಿದರು.


ಕ್ರೀಡಾಪಟುಗಳು ಪ್ರತಿಭೆಗೆ ಬೆಲೆ ಕೊಡಬೇಕೇ ವಿನಹ ಮೋಸವಾಗಬಾರದು-ದಯಾನಂದ ರೈ:
ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇದರ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ದಯಾನಂದ ರೈ ಕೋರ್ಮಂಡ ಮಾತನಾಡಿ, ಪುತ್ತೂರಿನಲ್ಲಿ ಪ್ರಪ್ರಥಮವಾಗಿ ಮ್ಯಾಟ್‌ ಕಡ್ಡಿಯನ್ನು ಪರಿಚಯಿಸಿದ ಸಂಸ್ಥೆ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಆಗಿದೆ. ಕ್ರೀಡಾಪಟುಗಳ ಪ್ರದರ್ಶನಕ್ಕೆ ನಾವು ಬೆಲೆ ಕೊಡಬೇಕಾಗಿದೆ ವಿನಹ ಕ್ರೀಡಾಪಟುಗಳ ಪ್ರತಿಭೆಗೆ ಮೋಸವನ್ನುಂಟು ಮಾಡಬಾರದು.ಕ್ರೀಡಾಪಟುಗಳ ಕ್ರೀಡೆಯಲ್ಲಿ ಅರ್ಪಿಸಿಕೊಳ್ಳುವುದರ ಜೊತೆಗೆ ಪಾಠದಲ್ಲಿ ತೊಡಗಿಸಿಕೊಳ್ಳಿ. ಮುಂದೆ ನಡೆಯುವ ರಾಜ್ಯಮಟ್ಟದ ಕಬಡ್ಡಿಯಲ್ಲಿ ಕ್ರೀಡಾಪಟುಗಳು ವಿಜಯಿಯಾಗಿ ಬನ್ನಿ, ಪುತ್ತೂರಿನ ಕೀರ್ತಿಪತಾಕೆಯನ್ನು ಹಾರಿಸಿ ಎಂದು ಹೇಳಿ ಶುಭ ಹಾರೈಸಿದರು.


ಕಾರ್ಯಕ್ರಮದ ಆರಂಭದಲ್ಲಿ ಅತಿಥಿ ಗಣ್ಯರು ದೀಪ ಬೆಳಗಿಸಿ ಉದ್ಘಾಟನೆಯನ್ನು ನೆರವೇರಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ ಸ್ವಾಗತಿಸಿ, ವಂದಿಸಿದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ನಮಿತಾ ಕಾರ್ಯಕ್ರಮ ನಿರೂಪಿಸಿದರು. ರೆಫ್ರಿ ಬೋರ್ಡ್ ಅಧ್ಯಕ್ಷ ಆಸಿಫ್ ತಂಬುತ್ತಡ್ಕ, ಸದಸ್ಯ ಪುರುಷೋತ್ತಮ ಕೋಲ್ಫೆ, ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸದಸ್ಯ ಪುರಂದರ, ಕ್ರೀಡಾಪಟುಗಳಿಗೆ ತರಬೇತಿ ನೀಡಿದ ತರಬೇತುದಾರರಾದ ವಿವೇಕಾನಂದ ಶಾಲೆಯ ದಾಮೋದರ್, ಮನೋಹರ್, ಆಲಂಗಾರು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಹಾಸರವರು ಉಪಸ್ಥಿತರಿದ್ದರು.


ನ.3-9:ಬೆಂಗಳೂರಿನಲ್ಲಿ ರಾಜ್ಯಮಟ್ಟದ ಪಂದ್ಯಾಟ..
ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟವು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನ.3 ರಿಂದ 9ರ ವರೆಗೆ ಜರಗಲಿದ್ದು ಈ ಪಂದ್ಯಾವಳಿಯಲ್ಲಿ ಪುತ್ತೂರು, ಕಡಬ ಹಾಗೂ ಮಂಗಳೂರು ವಿಭಾಗದ ಕ್ರೀಡಾಪಟುಗಳನ್ನು ಒಳಗೊಂಡ ದ.ಕ ಜಿಲ್ಲಾ ಕಬಡ್ಡಿ ತಂಡ ಭಾಗವಹಿಸಲಿದೆ. ಈ ಪಂದ್ಯಾವಳಿಯಲ್ಲಿ 14 ವಿದ್ಯಾರ್ಥಿ ಕ್ರೀಡಾಪಟುಗಳಾದ ಯಜ್ಞ, ದೀಕ್ಷಿತಾ, ಸಿಂಚನಾ, ಸುಸ್ರಾವ್ಯ, ಜ್ಯೋತಿ, ಶರಣ್ಯ, ಶ್ರದ್ಧಾ, ಭುವಿ, ಆದ್ಯ, ತೃಷಾ, ಧನ್ಯಶ್ರೀ, ದಿವ್ಯ, ಚೈತನ್ಯ, ಜಸ್ಮಿತಾರವರು ಭಾಗವಹಿಸಲಿದ್ದು ಈ ಕ್ರೀಡಾಪಟುಗಳಿಗೆ ತೆಂಕಿಲ ವಿವೇಕಾನಂದ ಶಾಲೆಯಲ್ಲಿ ಕ್ರೀಡಾ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ರಾಜ್ಯಮಟ್ಟಕ್ಕೆ ಆಯ್ಕೆಯಾದ 14 ಮಂದಿ ಕ್ರೀಡಾಪಟುಗಳಿಗೆ ಜೊತೆಗೆ ವಲಯ ಮಟ್ಟದಿಂದ ತಾಲೂಕು ಮಟ್ಟಕ್ಕೆ ವಿವಿಧ ವಿಭಾಗಗಳಲ್ಲಿ ಆಯ್ಕೆಯಾದ 35 ಮಂದಿ ಕ್ರೀಡಾಪಟುಗಳಿಗೆ ಈ ಸಂದರ್ಭದಲ್ಲಿ ಕ್ರೀಡಾ ಸಮವಸ್ತ್ರ ವಿತರಿಸಲಾಯಿತು.

LEAVE A REPLY

Please enter your comment!
Please enter your name here