ಘಟ್ಟದಲ್ಲಿ (ಬೆಂಗಳೂರು, ಮಡಿಕೇರಿ,ಮೈಸೂರು) ಗಣಿಕೆ ಸೊಪ್ಪು, ಸಂಸ್ಕೃತದಲ್ಲಿ ಕಾಕಮಾಚಿ ಎಂದು ಕರೆಯಲ್ಪಡುತ್ತದೆ. ಇದನ್ನು ಸಣ್ಣ ಸಣ್ಣ ತುಂಡು ಮಾಡಿ ಪಲ್ಯ, ಸಾಂಬಾರು ಮಾಡುತ್ತಾರೆ. ಒಂದುವರೆಯಿಂದ ಎರಡು ಅಡಿ ಎತ್ತರ ಬೆಳೆಯುವ ಈ ಗಿಡ ಬದನೆ ಜಾತಿಗೆ ಸೇರಿದೆ. ನೋಡಲು ಕುದನೆ ಗಿಡದಂತೆ ಇದ್ದರೂ ಮುಳ್ಳುಗಳಿಲ್ಲ. ಕುದನೆ ಕಾಯಿ ಹಣ್ಣಾದಾಗ ಹಳದಿ ವರ್ಣದಲ್ಲಿ ಕಂಡುಬಂದರೆ ಇದರ ಕಾಯಿ ಕಡು ನೇರಳೆ ಬಣ್ಣದಲ್ಲಿ ಗೊಂಚಲಲ್ಲಿ ಸುಂದರವಾಗಿ ಕಾಣಸಿಗುತ್ತದೆ. ಎಲೆ 2-3 ಇಂಚು ಉದ್ದ 1-2 ಇಂಚು ಅಗಲ ಇರುತ್ತದೆ. ಬಿಳಿ ಬಣ್ಣದ ನಕ್ಷತ್ರಾಕಾರದ ಹೂಗಳು ಬದನೆಯ ಹೂವಿನಂತೆ ಇರುತ್ತದೆ.ಇದರ ಎಲೆ, ಬೇರು, ಹೂ, ಹಣ್ಣು ಕಾಂಡಗಳೆಲ್ಲವೂ ಔಷಧಿಗೆ ಉಪಯೋಗ. ಬೇರು ಭಾಗವನ್ನು ಬಿಟ್ಟು ಉಳಿದ ಭಾಗವನ್ನು ಪಲ್ಯ ಮಾಡಿ ಉಪಯೋಗಿಸಲಾಗುತ್ತದೆ.
ಲಿವರ್ ತೊಂದರೆಗಳು:
ಕೆಮಿಕಲ್ ಮಿಶ್ರಿತ ಆಹಾರ ಪದಾರ್ಥಗಳ ಭರಾಟೆಯ ಈ ದಿನಗಳಲ್ಲಿ Fatty liver ತೊಂದರೆ ಸ್ಕಾನಿಂಗ್ ಮಾಡಿಸಿದ ಶೇಕಡಾ 75 ಜನರಲ್ಲಿ ಕಂಡುಬರುತ್ತದೆ. ಹಲವು ವರ್ಷಗಳ ಹಿಂದೆ ಆಲ್ಕೋಹಾಲ್ ಕುಡಿದವರಲ್ಲಿ ಕಂಡುಬರುವ Fatty liver ಈಗ ಸರ್ವ ಸಾಮಾನ್ಯವಾಗಿದೆ. ಚವಿಗಿಡದ ರಸ ತೆಗೆದು 10 ಮಿಲಿಯಷ್ಟು 30 ರಿಂದ 60 ದಿನ ಕುಡಿಯುವುದರಿಂದ ಲಿವರ್ ತೊಂದರೆ ನಿವಾರಣೆಯಾಗುವುದು. ಲಿವರಿನಲ್ಲಿ ಕೆಲವೊಮ್ಮೆ ಕಂಡುಬರುವ ಸಣ್ಣ ಸಣ್ಣ ಗಂಟುಗಳು (Nodules) ಅಪಾಯಕಾರಿಗಾಗಿವೆ. ಇವುಗಳ ನಿರ್ವಹಣೆ ಚವಿ ಸೊಪ್ಪಿನ ರಸ ಅಥವಾ ಗಿಡವನ್ನು ತೊಳೆದು ಒಣಗಿಸಿದ ಪುಡಿಯನ್ನು ತುಂಬಾ ಸಮಯ ಸೇವಿಸುವುದರಿಂದ ಪ್ರಯೋಜನವನ್ನು ಕಂಡುಕೊಳ್ಳಬಹುದು. ಪ್ಲೀಹಾ (Spleen) ವೃದ್ಧಿಯಾಗಿರುವಾಗಲೂ ಇದನ್ನು ಉಪಯೋಗಿಸಬಹುದು.

ಸ್ವರ ಹೀನತೆ:
ಗಟ್ಟಿ ಮಾತಾಡಿದರೂ ಮೆಲ್ಲಗೆ ಕೇಳುವ ಅವಸ್ಥೆಯಲ್ಲಿ ಧ್ವನಿ ಪೆಟ್ಟಿಗೆಯ ಸ್ವರತಂತುಗಳಿಗೆ ತೊಂದರೆಯಾಗಿರಬಹುದು ಅಥವಾ ಸಣ್ಣ ಸಣ್ಣ ಗುಳ್ಳೆಗಳು ಅಥವಾ ಗಂಟುಗಳು ಎದ್ದಾಗಲೂ ಸ್ವರಹೀನತೆ ಉಂಟಾಗುತ್ತದೆ. ಕೆಮ್ಮು ಕಫ ಇರುವಾಗಲೂ ಚವಿ ಗಿಡ ಒಣಗಿಸಿ ತಯಾರಿಸಿದ ಪುಡಿಯನ್ನು ಜೇನಿನಲ್ಲಿ ಸೇವಿಸುವುದರಿಂದ ಕಡಿಮೆಯಾಗುವುದು. ಇದರ ಹಣ್ಣನ್ನು ಒಣಗಿಸಿ ಪುಡಿಮಾಡಿಟ್ಟು ಕೆಮ್ಮು ಇರುವಾಗ ಅಲ್ಪ ಪ್ರಮಾಣದಲ್ಲಿ ಜೀನಿನೊಂದಿಗೆ ಸೇವಿಸಿದರೆ ಕಡಿಮೆಯಾಗುವುದು.
ಬಾಯಿಹುಣ್ಣು:
ಇದರ ಎಲೆಯಲ್ಲಿ ವಿಟಮಿನ್ ಅಂಶ ಜಾಸ್ತಿ ಇರುವುದರಿಂದ ಬಾಯಿ ಹುಣ್ಣು ಇರುವವರು ಇದರ ಜ್ಯೂಸ್ ಮಾಡಿ ಕುಡಿಯಬೇಕು. ಜ್ಯೂಸನ್ನು ಬಾಯಲ್ಲಿ 5-10 ನಿಮಿ ಇರಿಸಿ ಗುಳು ಗುಳು ಮಾಡಿ ಉಗಿದರೂ ಬಾಯಿ ಹುಣ್ಣು ಬೇಗ ಕಡಿಮೆಯಾಗುವುದು.
ರಕ್ತ ಹೀನತೆ :
ಬಾಯಿ ಹುಣ್ಣುಗಳು ರಕ್ತ ಹೀನತೆ ಇರುವಾಗಲೂ ಕಂಡು ಬರುತ್ತದೆ. ರಕ್ತ ಹೀನತೆಯಲ್ಲಿ ಇದರ ಚಿಗುರು ತಂಬುಳಿ ಮಾಡಿ ಊಟ ಮಾಡುವುದರಿಂದ ರಕ್ತ ವೃದ್ಧಿಯಾಗುತ್ತದೆ.

ಚರ್ಮವ್ಯಾದಿ:
ಸಣ್ಣ ಮಕ್ಕಳಲ್ಲಿ ಕಂಡು ಬರುವ ತುರಿಕೆ ಕಜ್ಜಿಗಳಿಗೆ ಇದರ ರಸವನ್ನು ಎಣ್ಣೆಯಲ್ಲಿ ಕಾಯಿಸಿ ಪಾಕ ಮಾಡಿ ಸಂಗ್ರಹಿಸಿ ಹಚ್ಚಿದರೆ ಕಡಿಮೆಯಾಗುವುದು.
ಅಧಿಕ ಸ್ರಾವ :
ಸ್ತ್ರೀಯರ ಮುಟ್ಟಿನ ಸಮಯದ ಅತಿಯಾದ ಸ್ರಾವಕ್ಕೆ ಚವಿ ಸೊಪ್ಪಿನ ರಸಕ್ಕೆ ಕಲ್ಲು ಸಕ್ಕರೆ ಸೇರಿಸಿ ಒಂದು ವಾರ ಕುಡಿಯುವುದರಿಂದ ಕಡಿಮೆಯಾಗುವುದು. ಸ್ತ್ರೀಯರ ಮುಟ್ಟಿನ ಸಮಯದ ಹೊಟ್ಟೆನೋವಿಗೂ ಇದನ್ನು ಇದೇ ರೀತಿ ಉಪಯೋಗಿಸಬಹುದು. ಇದಕ್ಕಾಗಿಯೇ ಹಳ್ಳಿಯಲ್ಲಿ ಚವಿ ಸೊಪ್ಪು ಪ್ರಸಿದ್ಧಿ ಪಡೆದಿದೆ.
