ಮಕ್ಕಳ ಭವಿಷ್ಯಕ್ಕೆ ಪೂರಕ ಪುಸ್ತಕ-ಎಸ್.ಆರ್. ಸತೀಶ್ಚಂದ್ರ
ಮೊಗ್ಗು ಅರಳುವ ಸಂದರ್ಭ ಮಕ್ಕಳಿಗೆ ಸಾಮಾನ್ಯ ಜ್ಞಾನ ನೀಡಬೇಕು-ನಾ. ಕಾರಂತ
ಮಕ್ಕಳಿಗೆ ವಿಚಾರಧಾರೆ ನೀಡಲು ಸಹಕಾರಿ-ನಾ. ಕುಕ್ಕುವಳ್ಳಿ
ನನ್ನ ಬರವಣಿಗೆಗೆ ಪ್ರೋತ್ಸಾಹಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು – ಬಿ. ವಿ. ಸೂರ್ಯನಾರಾಯಣ
ಪುತ್ತೂರು: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಪುತ್ತೂರು ಇದರ ಸಹಸಂಸ್ಥೆ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರಕಾಶನಗೊಳ್ಳುತ್ತಿರುವ 8 ನೇ ಕೃತಿ ನಿವೃತ್ತ ಪ್ರಾಚಾರ್ಯ ಬಿ.ವಿ. ಸೂರ್ಯನಾರಾಯಣರವರು ಬರೆದ ‘ಮೊಗ್ಗು ಅರಳುವ ಮುನ್ನ’ ಕೃತಿಯ ಲೋಕಾರ್ಪಣಾ ಸಮಾರಂಭ ಸೆ.25 ರಂದು ದರ್ಬೆಯ ವಿನಾಯಕನಗರದಲ್ಲಿರುವ ಸಚ್ಚಿದಾನಂದ ಸೇವಾಸದನದಲ್ಲಿ ನಡೆಯಿತು.
ಸಭಾಧ್ಯಕ್ಷತೆ ವಹಿಸಿದ್ದ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರೂ ಆಗಿರುವ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಎಸ್. ಆರ್. ಸತೀಶ್ಚಂದ್ರರವರು ಮಾತನಾಡಿ, ಹೊಸತನ ತರುವ ನಿಟ್ಟಿನಲ್ಲಿ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಪ್ರಾರಂಭಿಸಲಾಯಿತು. ಇದರಡಿ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಈ ಪೈಕಿ ಪುಸ್ತಕ ಬಿಡುಗಡೆ ಕಾರ್ಯಕ್ರಮವೂ ಒಂದು. ಮೊಗ್ಗು ಅರಳುವ ಮುನ್ನ ಪುಸ್ತಕ ನಮ್ಮಸಂಸ್ಥೆಯಿಂದ ಪ್ರಕಾಶನಗೊಳ್ಳುತ್ತಿರುವ 8ನೇ ಕೃತಿಯಾಗಿದೆ. ಈ ಪುಸ್ತಕವನ್ನು ಪೋಷಕರು ಓದಿ ತಮ್ಮ ಮಕ್ಕಳಿಗೆ ದೃಷ್ಟಿಕೋನ ನೀಡಬೇಕು. ನಮ್ಮ ಮಕ್ಕಳ ಭವಿಷ್ಯಕ್ಕೆ ಪೂರಕವಾದ ಪುಸ್ತಕ ಇದಾಗಿದೆ ಎಂದರು.
ಕೃತಿ ಲೋಕಾರ್ಪಣೆ ಮಾಡಿದ ಅಡಿಕೆ ಪತ್ರಿಕೆಯ ಉಪಸಂಪಾದಕ ನಾ. ಕಾರಂತ ಪೆರಾಜೆ ಮಾತನಾಡಿ, ಸೂರ್ಯನಾರಾಯಣ ಅವರ ಬಗ್ಗೆ ನಾನು ತಿಳಿದುಕೊಂಡಿದ್ದೇನೆ. ಬಾಲ್ಯದಲ್ಲಿ ನಾವು ನೀವೆಲ್ಲರೂ ಮಾಡಿದ ತುಂಟಾಟಗಳನ್ನು ಒಳಗೊಂಡಿದೆ. ಈ ಪುಸ್ತಕವನ್ನು ಓದುತ್ತಾ ಹೋದಂತೆ ನಾನೂ ಮಗುವಾದೆ ಎಂದರು. ಮಕ್ಕಳನ್ನು ಬೈಯುವ ಪ್ರವೃತ್ತಿ ಹೆಚ್ಚುತ್ತಿದೆ. ಸಾಮಾನ್ಯ ಜ್ಞಾನ ನೀಡದೇ ಮಕ್ಕಳನ್ನು ದೂಷಿಸಿ ಪ್ರಯೋಜನವಿಲ್ಲ. ಹೀಗಾಗಿ ಮೊಗ್ಗು ಅರಳುವ ಸಂದರ್ಭದಲ್ಲಿ ಮಕ್ಕಳಿಗೆ ಬೇಕಾದ ಸಾಮಾನ್ಯ ಜ್ಞಾನ ನೀಡಬೇಕು. ತಮ್ಮ ಮಕ್ಕಳ ಮುಂದೆ ಪೋಷಕರು ಮಾದರಿಯಾಗಿ ನಡೆದುಕೊಳ್ಳಬೇಕು. ಪೋಷಕರು ಸಂಸ್ಕೃತಿ ಪಾಲಿಸಿದರೆ ಮಕ್ಕಳೂ ಪಾಲಿಸುತ್ತಾರೆ. ಮಗುವಿನ ಆಸಕ್ತಿಯನ್ನು ಬಾಲ್ಯದಲ್ಲೇ ತಿಳಿದುಕೊಳ್ಳಬೇಕು. ಒತ್ತಡದಿಂದ ಕಲಿಸಿದರೆ ಮಕ್ಕಳು ಗುರಿ ತಲುಪುವ ಮುನ್ನವೇ ಆಸಕ್ತಿ ಕಳೆದುಕೊಳ್ಳುತ್ತಾರೆ. ಹೀಗಾಗಿ ಬಾಲ್ಯದಲ್ಲೇ ತಮ್ಮ ಮಕ್ಕಳ ಆಸಕ್ತಿಯನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ಪ್ರೋತ್ಸಾಹಿಸಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ, ಸುದ್ದಿ ಬಿಡುಗಡೆ ‘ಪ್ರತಿಭಾರಂಗ’ ಅಂಕಣಕಾರ ನಾರಾಯಣ ರೈ ಕುಕ್ಕುವಳಿ ಮಾತನಾಡಿ, ಸೂರ್ಯನಾರಾಯಣ ಅವರು ಇಂಗ್ಲಿಷ್ ಶಿಕ್ಷಕರಾಗಿದ್ದರೂ ಕನ್ನಡ ಭಾಷೆಯ ಮೇಲೆ ಉತ್ತಮ ಹಿಡಿತ ಸಾಧಿಸಿದ್ದಾರೆ. ಅವರ ಪದಪುಂಜಗಳು ನನ್ನ ಬರವಣಿಗೆಗೆ ಸಹಕಾರಿಯಾಗಿದೆ. ಇವರು ಬರೆದ ಪುಸ್ತಕ ಓದುತ್ತಿದ್ದಾಗ ನನ್ನ ಬಾಲ್ಯದ ನೆನಪುಗಳಾದವು. ಅಂದು ಮಕ್ಕಳಿಗೆ ಸಿಗುತ್ತಿದ್ದ ಪ್ರೀತಿ ಇಂದು ಸಿಗುತ್ತಿಲ್ಲ. ಅಂದಿನ ಮಕ್ಕಳಿಗೆ ಹಿರಿಯರು ನೀಡುತ್ತಿದ್ದ ವಿಚಾರಧಾರೆಗಳನ್ನು ಇಂದಿನ ಹಿರಿಯರು ತಮ್ಮ ಮಕ್ಕಳಿಗೆ ಕಲಿಸಿಕೊಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ತಮ್ಮ ಮಕ್ಕಳಿಗೆ ವಿಚಾರಧಾರೆಗಳನ್ನು ನೀಡಲು ಈ ಪುಸ್ತಕ ಸಹಕಾರಿಯಾಗಲಿದೆ ಎಂದರು. `ಮೊಗ್ಗು ಅರಳುವ ಮುನ್ನ’ ಕೃತಿಯ ಲೇಖಕ ನಿವೃತ್ತ ಪ್ರಾಂಶುಪಾಲ ಬಿ. ವಿ. ಸೂರ್ಯನಾರಾಯಣ ಎಲಿಯ ಮಾತನಾಡಿ ನನ್ನ ಬರವಣಿಗೆಗೆ ಪ್ರೋತ್ಸಾಹಿಸುತ್ತಿರುವ ಮತ್ತು ಎಲ್ಲಾ ಕಾರ್ಯಕ್ರಮಗಳಿಗೆ ಸಹಕರಿಸುತ್ತಿರುವ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
.ಸ. ಹಿ. ಪ್ರಾ. ಶಾಲೆ, ಭಕ್ತಕೋಡಿ ಇಲ್ಲಿನ ಸಹಶಿಕ್ಷಕಿ ಸುನೀತಾ ಯನ್. ಕೃತಿ ಪರಿಚಯ ಮಾಡಿದರು. ಕಾರ್ಯಕ್ರಮದಲ್ಲಿ ಸೂರ್ಯನಾರಾಯಣ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಹಲವಾರು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದರು. ಸಿಬ್ಬಂದಿ ಚಂದ್ರಶೇಖರ್, ರವಿಚಂದ್ರ ನಾಯಕ್ ಸಹಕರಿಸಿದರು. ಶಿಲ್ಪ ಪ್ರಾರ್ಥಿಸಿದರು. ಸಹಕಾರಿಯ ಸಿಇಒ ವಸಂತ ನಾಯಕ್ ಎ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಹಕಾರಿಯ ದರ್ಬೆ ಶಾಖಾ ವ್ಯವಸ್ಥಾಪಕ ದೇವಿಪ್ರಸಾದ್ ವಂದಿಸಿದರು. ಟ್ರಸ್ಟ್ ಸಾರ್ವಜನಿಕ ಸಂಪರ್ಕಾಧಿಕಾರಿ ಬಿಪಿನ್ ಚಂದ್ರ ನಿರೂಪಿಸಿದರು.

ಮೊಗ್ಗು ಅರಳುವ ಮುನ್ನ
ಮನೆಯಲ್ಲಿ ಸೂಕ್ತ ಸಂಸ್ಕಾರ ದೊರೆಯದೇ ಹೋದರೆ, ಶಿಕ್ಷಣ ಸಂಸ್ಥೆಗಳು ಯಾವುದೇ ಸೌಲಭ್ಯ, ತಂತ್ರಜ್ಞಾನ, ಪರಿಣಿತ ಶಿಕ್ಷಕರು, ಉಪನ್ಯಾಸಕರನ್ನು ಹೊಂದಿದ್ದರೂ, ಮೊಗ್ಗಿನಂತಿರುವ ಭವಿಷ್ಯದ ಮಕ್ಕಳು ಸುಂದರ ವ್ಯಕ್ತಿತ್ವದ ಹೂವುಗಳಾಗಿ ಅರಳದೆ ಬಾಡಿ ಕಮರಿ ಹೋಗುವುದು ಖಂಡಿತ ಎಂಬುದನ್ನು ನಾವು ಹೆತ್ತವರು ಪೋಷಕರು, ಶಿಕ್ಷಣ ತಜ್ಞರು, ಸರಕಾರ, ಒಟ್ಟಿನಲ್ಲಿ ಇಡೀ ಸಮಾಜ ಚಿಂತಿಸದೇ ಹೋದರೆ ಗಂಡಾಂತರ ಅನುಭವಿಸ ಬೇಕಾದುದು ಖಂಡಿತ ಎಂಬುದನ್ನು ನಿವೃತ್ತ ಪ್ರಾಂಶುಪಾಲರು, ಭಾವಗಾನ ಪದಪಲ್ಲವಿಯ ಕವಿ ಚಿಂತಕ ಸಂಪನ್ಮೂಲ, ಸಹೃದಯಿಗಳೂ ಆಗಿರುವ ಬಿ. ವಿ. ಸೂರ್ಯನಾರಾಯಣ ಎಲಿಯ ತಮ್ಮಮೊಗ್ಗು ಅರಳುವ ಮುನ್ನ ಕೃತಿಯಲ್ಲಿ ಮನಮುಟ್ಟುವಂತೆ ನಿರೂಪಿಸಿದ್ದಾರೆ. ಈ ಕೃತಿಗೆ ನನ್ನ ಮನದ ಮಾತಿನೊಂದಿಗೆ ಸರ್ವ ಯಶಸ್ಸನ್ನು ಕೋರುತ್ತಾ ಬಿವಿ ಯವರಿಂದ ಇನ್ನಷ್ಟು ಕೃತಿ ಮೂಡಿಬರಲೆಂದು ಹಾರೈಸುತ್ತೇನೆ.
-ನಾರಾಯಣ ರೈ ಕುಕ್ಕುವಳ್ಳಿ.
ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ