ಉಪ್ಪಿನಂಗಡಿ: ಮಾದಕ ವಸ್ತು ಸೇವನೆ ಮಾಡಿಕೊಂಡದ್ದಲ್ಲದೆ, ಅದನ್ನು ಇತರರಿಗೆ ಮಾರಾಟಕ್ಕಾಗಿ ಸಾಗಿಸುತ್ತಿದ್ದ ಸಂದರ್ಭ ಉಪ್ಪಿನಂಗಡಿ ಪೊಲೀಸರು ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ಆರೋಪಿಯೋರ್ವನನ್ನು ಬಂಧಿಸಿದ್ದಾರೆ.
ಉಪ್ಪಿನಂಗಡಿಯ ಮಠದ ಹಿರ್ತಡ್ಕ ನಿವಾಸಿ ರಝಾಕ್ (43) ಬಂಧಿತ ಆರೋಪಿ.
ಸೆ.30ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಅವಿನಾಶ ಎಚ್. ಹಾಗೂ ಸಿಬ್ಬಂದಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ನೆಲ್ಯಾಡಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕಾರೊಂದನ್ನು ನಿಲ್ಲಿಸುವಂತೆ ಸೂಚಿಸಿದರು. ಆದರೆ ಅಲ್ಲಿ ಕಾರನ್ನು ನಿಲ್ಲಿಸದ ಅದರ ಚಾಲಕ ದೂರದಲ್ಲಿ ಕಾರನ್ನು ನಿಲ್ಲಿಸಿ ಕಾರಿನಿಂದ ಇಳಿದು ಓಡಿ ಹೋಗಲು ಯತ್ನಿಸಿದಾಗ ಪೊಲೀಸರು ಚಾಲಕನನ್ನು ಸುತ್ತುವರಿದು ಹಿಡಿದು ಹೆಚ್ಚಿನ ವಿಚಾರಣೆ ನಡೆಸಿದಾಗ ಈತ ಎಂಡಿಎಂಎ ಮಾದಕ ವಸ್ತುವನ್ನು ಸೇವಿಸಿದಲ್ಲದೇ, ಉಪ್ಪಿನಂಗಡಿ, ಮಠ ಹಾಗೂ ಹಿರೇಬಂಡಾಡಿಯಲ್ಲಿ ತನ್ನ ಗ್ರಾಹಕರಿಗೆ ಕೊಡುವುದಕ್ಕಾಗಿ ಕಾರಿನಲ್ಲಿ ಎಂಡಿಎಂಎ ಮಾದಕ ವಸ್ತುವನ್ನು ಕೊಂಡೊಯ್ಯುತ್ತಿರುವುದಾಗಿ ಬಾಯ್ಬಿಟ್ಟಿದ್ದಾನೆ. ಬೆಂಗಳೂರಿನ ಮೆಜೆಸ್ಟಿಕ್ನಿಂದ ಅಪರಿಚಿತ ವ್ಯಕ್ತಿಯೋರ್ವನಿಂದ ಇದನ್ನು ಪಡೆದುಕೊಂಡಿದ್ದಾಗಿಯೂ ತಿಳಿಸಿದ್ದಾನೆ. ಪೊಲೀಸರು ಈತನ ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 12.35 ಗ್ರಾಂ ತಿಳಿ ಕೆಂಪು ಬಣ್ಣದ ಎಂ.ಡಿ.ಎಂ.ಎ ಅನ್ನು ವಶಪಡಿಸಿಕೊಂಡಿದ್ದಾರೆ. ಇದರ ಅಂದಾಜು ಮೌಲ್ಯ 20 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಅಲ್ಲದೇ, ಈತನಲ್ಲಿದ್ದ ತಲಾ 10 ಸಾವಿರ ರೂ. ಮೌಲ್ಯದ ಎರಡು ಮೊಬೈಲ್, ಕೃತ್ಯಕ್ಕೆ ಬಳಸಿದ ಸುಮಾರು 3 ಲಕ್ಷ ರೂ. ಮೌಲ್ಯದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.