ರಾಮಕುಂಜ: ಭಾರೀ ಗಾಳಿ, ಮಳೆಗೆ ವ್ಯಾಪಕ ಕೃಷಿ ಹಾನಿ

0

ನೂರಾರು ಅಡಿಕೆ ಮರ, ತೆಂಗಿನಮರ ಧರೆಗೆ | ವಿದ್ಯುತ್ ಕಂಬಗಳಿಗೂ ಹಾನಿ

ರಾಮಕುಂಜ: ಕಳೆದ ರಾತ್ರಿ ಬೀಸಿದ ಭಾರೀ ಗಾಳಿ ಹಾಗೂ ಮಳೆಗೆ ರಾಮಕುಂಜ ಗ್ರಾಮದ ಬಾಜಳ್ಳಿ, ಬಾಂತೊಟ್ಟು, ಬಾರಿಂಜ ಪರಿಸರದಲ್ಲಿ ನೂರಾರು ಅಡಿಕೆ ಮರ, ತೆಂಗಿನಮರ, ಬಾಳೆಗಿಡಗಳು ಧರೆಗುರುಳಿವೆ. ಕೆಲವು ಕಡೆ ವಿದ್ಯುತ್ ಕಂಬ, ತಂತಿಯ ಮೇಲೂ ಮರಬಿದ್ದ ಪರಿಣಾಮ ವಿದ್ಯುತ್ ಸಂಚಾರಕ್ಕೂ ಅಡಚಣೆ ಉಂಟಾಗಿದೆ.
ಅ.12ರಂದು ಸಂಜೆಯಿಂದಲೇ ಈ ಪರಿಸರದಲ್ಲಿ ಭಾರೀ ಮಳೆಯಾಗಿದ್ದು ಜೊತೆಗೆ ಬಿರುಗಾಳಿಯೂ ಬಂದ ಪರಿಣಾಮ ನೂರಾರು ಅಡಿಕೆ ಮರಗಳು ಧರೆಗುರುಳಿವೆ.

ಬಾಂತೊಟ್ಟು ನಿವಾಸಿಗಳಾದ ಸೇಸಪ್ಪ ರೈ, ರಾಘವ, ಬಾಜಳ್ಳಿ ನಿವಾಸಿಗಳಾದ ಶ್ರೀಕಾಂತ ಕಲ್ಲೂರಾಯ, ಹೊನ್ನಪ್ಪ ಗೌಡ, ಪ್ರದೀಪ ಕುಲಾಲ್, ಜತ್ತಪ್ಪ ಕುಲಾಲ್, ದಾಮೋದರ ಕುಲಾಲ್, ಬಾರಿಂಜ ನಿವಾಸಿಗಳಾದ ಗಣೇಶ ಗೌಡ, ಕಮಲಾಕ್ಷ ಗೌಡ, ರುಕ್ಮಯ ಗೌಡ, ಈಶ್ವರ ಗೌಡ, ಹರೀಶ ಗೌಡರವರ ತೋಟದಲ್ಲಿ ಅಡಿಕೆ ಮರಗಳ ಧರೆಗುರುಳಿವೆ. ಬಾಜಳ್ಳಿ ನಿವಾಸಿ ಹೊನ್ನಪ್ಪ ಗೌಡ ಅವರ 5 ತೆಂಗಿನಮರಗಳು ಮುರಿದು ಬಿದ್ದಿವೆ. ಸಂಪ್ಯಾಡಿ ನಿವಾಸಿ ಯತೀಶ್ ಬಾನಡ್ಕ ಅವರ ತೋಟದಲ್ಲೂ ಆರು ಅಡಿಕೆ ಮರಗಳು ಧರೆಗುರುಳಿವೆ. ಅಲ್ಲದೇ ಈ ಭಾಗದ ಹಲವು ಕಡೆ ಗಾಳಿ ಮಳೆಗೆ ವ್ಯಾಪಕ ಹಾನಿ ಸಂಭವಿಸಿದೆ. ಈ ಸಲ ಕೊಳೆರೋಗದಿಂದ ಕಂಗೆಟ್ಟಿದ್ದ ಅಡಿಕೆ ಬೆಳೆಗಾರರು ಇದೀಗ ಭಾರೀ ಗಾಳಿ ಹಾಗೂ ಮಳೆಗೆ ನೂರಾರು ಅಡಿಕೆ ಮರಗಳು ಮುರಿದು ಬಿದ್ದಿರುವುದರಿಂದ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ವಿದ್ಯುತ್ ಕಂಬಗಳಿಗೂ ಹಾನಿ
ಈ ಭಾಗದಲ್ಲಿ ವಿದ್ಯುತ್ ಕಂಬ, ತಂತಿ ಮೇಲೆ ಮರಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ಇದರಿಂದಾಗಿ ನಿನ್ನೆ ರಾತ್ರಿಯಿಂದಲೇ ಈ ಭಾಗದಲ್ಲಿ ವಿದ್ಯುತ್ ಸಂಚಾರದಲ್ಲಿ ಅಡಚಣೆ ಉಂಟಾಗಿದೆ. ಹಾನಿಗೊಳಗಾದ ಪ್ರದೇಶಗಳಿಗೆ ರಾಮಕುಂಜ ಗ್ರಾ.ಪಂ.ಸದಸ್ಯ ಯತೀಶ್ ಬಾನಡ್ಕ, ಗ್ರಾಮ ಆಡಳಿತಾಧಿಕಾರಿ ಪಲ್ಲವಿ, ಗ್ರಾಮ ಸಹಾಯಕ ವೆಂಕಟೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here