ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ವತಿಯಿಂದ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿಸ್ಮೃತಿ ಮತ್ತು ಬೃಹತ್ ಜನಜಾಗೃತಿ ಸಮಾವೇಶವು ಅ.15ರಂದು ಬೆಳಗ್ಗೆ ಗಂಟೆ 10.30ಕ್ಕೆ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿಯವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ದೂರದರ್ಶಿತ್ವದಲ್ಲಿ ಕಳೆದ 33 ವರ್ಷಗಳ ಹಿಂದೆ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಬೆಳ್ತಂಗಡಿ ತಾಲೂಕಿನಲ್ಲಿ ಸ್ಥಾಪಿತವಾದ ಸಂಸ್ಥೆಯೇ ’ಜನಜಾಗೃತಿ ವೇದಿಕೆ’. ಇದೀಗ ವೇದಿಕೆಯು ರಾಜ್ಯದಲ್ಲೆಡೆ 37 ಜಿಲ್ಲಾ ವೇದಿಕೆಗಳು ಹಾಗೂ 16 ತಾಲೂಕು ವೇದಿಕೆಗಳ ಮೂಲಕ 7000ಕ್ಕೂ ಮಿಕ್ಕಿದ ಸಕ್ರಿಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಈ ಆಂದೋಲನದಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಈ ಸಂಘಟನೆಗಳಿಗೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.)ಯ ಮೂಲಕ ನಿರಂತರ ಮಾರ್ಗದರ್ಶನ ನೀಡಲಾಗುತ್ತಿದೆ. ಬೆಳ್ತಂಗಡಿ ತಾಲೂಕಿನ ಉಜಿರೆಯ, ಲ್ಯಾಲದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಿ ನಿರಂತರ ವಿಶೇಷ ಶಿಬಿರಗಳು ಹಾಗೂ ಸಂಶೋಧನಾ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದ ಅವರು ದ.ಕ ಜಿಲ್ಲೆಯ ಕಾರ್ಯಕ್ರಮಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಆಗಮಿಸಲಿದ್ದು, ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್ ಇವರು ಆಶಯ ಭಾಷಣ ನುಡಿಯಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ಕರ್ನಾಟಕ ವಿಧಾನಪರಿಷತ್ ಶಾಸಕ ಕಿಶೋರ್ ಕುಮಾರ್ ಪುತ್ತೂರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ನ ಸಂಘಟನಾಧ್ಯಕ್ಷ ನಟರಾಜ ಬಾದಾಮಿ, ಟ್ರಸ್ಟ್ನ ನಿರ್ದೇಶಕರು ಮತ್ತು ಮನೋತಜ್ಞರಾಗಿರುವ ಡಾ| ಶ್ರೀನಿವಾಸ್ ಭಟ್ ಭಾಗವಹಿಸಲಿದ್ದಾರೆ. ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷ ವಸಂತ್ ಸಾಲಿಯಾನ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ, ಮುಂಬಯಿ ಉದ್ಯಮಿ ಆರ್ ಬಿ ಹೆಬ್ಬಳ್ಳಿ, ಜನಜಾಗೃತಿ ಪ್ರಾದೇಶಿಕ ವಿಭಾಗದ ನಿರ್ದೇಶಕ ವಿವೇಕ್ ವಿ ಪಾಯಸ್, ಕರಾವಳಿ ಪ್ರಾದೇಶಿಕ ವಿಭಾಗದ ನಿರ್ದೇಶಕ ಆನಂದ ಸುವರ್ಣ ಗೌರವ ಉಪಸ್ಥಿತಿಯಲ್ಲಿರುವರು ಎಂದು ಪದ್ಮನಾಭ ಶೆಟ್ಟಿಯವರು ಹೇಳಿದರು.
86 ಜಿಲ್ಲಾ, ತಾಲೂಕು ಮಟ್ಟದ ಕಾರ್ಯಕ್ರಮ:
ಅ.2 ಗಾಂಧಿ ಜಯಂತಿ ಸಂಭ್ರಮವನ್ನು ಜನಜಾಗೃತಿ ವೇದಿಕೆಯ ವತಿಯಿಂದ ವಿಶಿಷ್ಟ ಮತ್ತು ವಿಭಿನ್ನವಾಗಿ ಆಚರಿಸಲಾಗುತ್ತಿದೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ವ್ಯಸನಮುಕ್ತ ಸಮಾಜದ ಕನಸು ಕಂಡವರು. “ಯಾವ ವ್ಯಕ್ತಿ, ಕುಟುಂಬ, ಸಮಾಜ ಮದ್ಯಪಾನಾದಿ ದುಶ್ಚಟಕ್ಕೆ ಬಲಿ ಬೀಳುವುದೋ ಆ ಕುಟುಂಬಕ್ಕೆ ವಿನಾಶವಲ್ಲದೆ ಬೇರೆ ಗತಿಯಿಲ್ಲ” ಎಂದವರು. ಈ ನಿಟ್ಟಿನಲ್ಲಿ ಸ್ವತಂತ್ರ ಭಾರತದಲ್ಲಿ ನಿತ್ಯ ನಿರಂತರ ಹೋರಾಡುವ ಸಂಸ್ಥೆಯೇ ಜನಜಾಗೃತಿ ವೇದಿಕೆಯಾಗಿದೆ. ಈ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಾಗೃತಿ ಸಮಾವೇಶ, ಜಾಥಾಗಳನ್ನು ಹಮ್ಮಿಕೊಂಡು ವೇದಿಕೆಯು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ಬಾರಿ ರಾಜ್ಯಾದ್ಯಂತ 86 ಜಿಲ್ಲಾ ಮತ್ತು ತಾಲೂಕು ಮಟ್ಟದ ಕಾರ್ಯಕ್ರಮಗಳನ್ನು ಅಕ್ಟೋಬರ್ 2 ರಿಂದ 16ರವರೆಗೆ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಸರ್ವಧರ್ಮೀಯರು, ಮಠ ಮಂದಿರದ ಯತಿವರ್ಯರು, ಸಾರ್ವಜನಿಕರು, ನವಜೀವನ ಸದಸ್ಯರು, ಯೋಜನೆಯ ಒಕ್ಕೂಟದ ಬಂಧು ಮಿತ್ರರು ಭಾಗವಹಿಸಲಿದ್ದಾರೆ. ಸುಮಾರು 2 ಲಕ್ಷಕ್ಕೂ ಮಿಕ್ಕಿದ ಜನಜಾಗೃತಿ ಬಂಧು ಭಗಿನಿಯರು ಈ ಕಾರ್ಯಕ್ರಮದಲ್ಲಿ ಕೈಜೋಡಿಸಿ ’ದುಶ್ಚಟಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆ’ ಎಂಬ ಧೈಯವಾಕ್ಯದಂತೆ ಭಾಗವಹಿಸಲಿದ್ದಾರೆ ಎಂದು ಪದ್ಮನಾಭ ಶೆಟ್ಟಿಯವರು ಹೇಳಿದರು.
ವ್ಯಸನಮುಕ್ತರಿಗೆ ಹಲವು ಅವಕಾಶಗಳು:
ಸ್ವ ಉದ್ಯೋಗ ಮಾಡುವ ನವಜೀವನ ಸದಸ್ಯರಿಗೆ ರಾಜ್ಯವೇದಿಕೆಯಿಂದ ಪ್ರೋತ್ಸಾಹಧನ ನೀಡಲಾಗುತ್ತಿದೆ. ವಾರಾದ್ಯಂತ ಫ್ರೀ ಕಾನ್ಸರೆನ್ಸ್ ಕಾಲ್ ಸಭೆಗಳ ಮೂಲಕ ಪಾನಮುಕ್ತ ಜೀವನ ನಡೆಸಲು ಪ್ರೇರಣೆ ನೀಡಲಾಗುತ್ತಿದೆ. ರಾಜ್ಯದಲ್ಲಿ 3100ಕ್ಕೂ ಮಿಕ್ಕಿದ ನವಜೀವನ ಸಮಿತಿಗಳ ಮೂಲಕ ಇವರ ಯೋಗಕ್ಷೇಮ ಚಿಂತನೆಯನ್ನು ಮಾಡಲಾಗುತ್ತದೆ. ವೇದಿಕೆಯು ಮದ್ಯಪಾನಾದಿ ದುಶ್ಚಟಗಳ ವಿರುದ್ಧ ಹೊರಾಡಲು ಜಾಗೃತಿ ಸಭೆಗಳು, ಮನೆಭೇಟಿ, ಮದ್ಯವರ್ಜನ ಶಿಬಿರ, ನವಜೀವನ ಸಮಿತಿ, ವ್ಯಸನಮುಕ್ತ ಸಾಧಕರಿಗೆ ಸನ್ಮಾನ, ಗ್ರಾಮ ಸುಭೀಕ್ಷ ಕಾರ್ಯಕ್ರಮ, ಮಹಿಳಾ ಸಮಾವೇಶ, ಹಕ್ಕೋತ್ತಾಯ ಮಂಡನೆ., ಮುಂತಾದ ಕಾರ್ಯಕ್ರಮಗಳನ್ನು ರೂಪಿಸಿ ಸಾಮಾಜಿಕ ಪರಿವರ್ತನೆಗೆ ಸಹಕಾರಿಯಾಗಿದೆ. ಮಾದಕ ವಸ್ತುಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆಗೆ ಪೂರಕವಾಗುವಂತೆ ರಾಜ್ಯದ ಬಹುತೇಕ ಎಲ್ಲಾ ಶಾಲಾ ಕಾಲೇಜುಗಳಲ್ಲಿ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸುವ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಶಿಬಿರ ಮತ್ತಿತರ ಚಟುವಟಿಕೆಗಳಿಗೆ ತಾಲೂಕಿಗೆ 1.25 ಲಕ್ಷ ರೂಪಾಯಿ ಅನುದಾನ ನೀಡುತ್ತಿದ್ದು, ಮಾದಕ ವಸ್ತು ವಿರೋಧಿ ದಿನಾಚರಣೆ, ತಂಬಾಕು ವಿರೋಧಿ ದಿನಾಚರಣೆ, ಪಾನಮುಕ್ತರ ನವಜೀವನೋತ್ಸವ, ಶತದಿನೋತ್ಸವ ಕಾರ್ಯಕ್ರಮ, ನವಜೀವನ ಸಮಿತಿಗಳ ರಚನೆ ಮತ್ತು ಪುನಶ್ವೇತನ, ಗಾಂಧಿ ಜಯಂತಿ ಕಾರ್ಯಕ್ರಮ, ಮನೆಭೇಟಿ ಕಾರ್ಯಕ್ರಮ., ಮುಂತಾದ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಪದ್ಮನಾಭ ಶೆಟ್ಟಿಯವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಾಲೂಕು ಅಧ್ಯಕ್ಷ ಯು ಲೋಕೇಶ್ ಹೆಗ್ಡೆ, ಕಡಬ ವಲಯದ ಅಧ್ಯಕ್ಷ ಮಹೇಶ್ ಕೆ ಸವಣೂರು, ಕಾರ್ಯದರ್ಶಿ ಬಾಬು ನಾಯ್ಕ, ದಕ್ಷಿಣ ಕನ್ನಡ ಉಡುಪಿ ಜಿಲ್ಲಾ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ್ ಉಪಸ್ಥಿತರಿದ್ದರು.
ರಾಜ್ಯದಲ್ಲಿ 1,35,983, ಜಿಲ್ಲೆಯಲ್ಲಿ 10,871 ಮಂದಿ ವ್ಯಸನದಿಂದ ಮುಕ್ತಿ:
ವೇದಿಕೆಯ ಕಾರ್ಯಚಟುವಟಿಕೆಗಳಿಗೆ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯಿಂದ ’ಸಂಯಮ ಪ್ರಶಸ್ತಿ’, ರಾಜ್ಯ ಮನೋವಿಜ್ಞಾನ ಸಂಸ್ಥೆಯ ’ಸ್ಪಂದನ ಪ್ರಶಸ್ತಿ’ ಲಭಿಸಿದೆ. ರಾಜ್ಯಾದ್ಯಂತ ಸ್ಥಳೀಯರ ಭಾಗವಹಿಸುವಿಕೆಯೊಂದಿಗೆ, ಸಂಘ ಸಂಸ್ಥೆಗಳ, ದಾನಿಗಳ ಸಹಕಾರದಲ್ಲಿ ಸಮುದಾಯದಲ್ಲಿ ನಿರಂತರ ಮದ್ಯವರ್ಜನ ಶಿಬಿರಗಳನ್ನು ನಡೆಸಲಾಗುತ್ತಿದೆ. 1997ರಿಂದ ಇದುವರೆಗೆ 1995 ಶಿಬಿರಗಳನ್ನು ನಡೆಸಿ 1,35,983 ಜನರನ್ನು ವ್ಯಸನದಿಂದ ಮುಕ್ತಿ ಹೊಂದಲು ಅವಕಾಶವಾಗಿದೆ. ದ.ಕ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 149 ಮದ್ಯವರ್ಜನ ಶಿಬಿರಗಳನ್ನು ನಡೆಸಿ 10871 ಮಂದಿ ಮದ್ಯ ವ್ಯಸನಿಗಳನ್ನು ವ್ಯಸನ ಮುಕ್ತ ಗೊಳಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 52 ಶಾಲಾ ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ನಡೆಸಿ 9239 ಮಕ್ಕಳಿಗೆ ದುಶ್ಚಟಗಳ ದುಷ್ಪರಿಣಾಮಗಳ ಬಗ್ಗೆ ಅರಿವನ್ನು ಮೂಡಿಸಲಾಗಿದೆ. ಪ್ರಸ್ತುತ ವರ್ಷ ಜಿಲ್ಲೆಯಲ್ಲಿ ಒಟ್ಟು 12 ತಾಲೂಕುಗಳಲ್ಲಿ 24 ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮ ಹಾಗೂ 24 ವಿಶ್ವ ತಂಬಾಕು ವಿರೋಧಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 123 ನವಜೀವನ ಸಮಿತಿಗಳು ಇದ್ದು, 1340 ಪಾನ ಮುಕ್ತ ಸದಸ್ಯರು ಈ ಸಮಿತಿಯಲ್ಲಿದ್ದು, ತಿಂಗಳಿಗೊಂದು ಸಭೆಗಳನ್ನು ನಡೆಸುತ್ತಿದ್ದಾರೆ. ಕಳೆದ 5 ವರ್ಷಗಳಿಂದ ಪಾನ ಮುಕ್ತ ನವಜೀವನ ಸಮಿತಿ ಸದಸ್ಯರೇ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿ ಒಟ್ಟು 3 ಮದ್ಯವರ್ಜನ ಶಿಬಿರಗಳನ್ನು ನಡೆಸಿರುವುದು ಹೆಮ್ಮೆಯ ವಿಚಾರವಾಗಿದೆ.
ಪದ್ಮನಾಭ ಶೆಟ್ಟಿ ಜಿಲ್ಲಾಧ್ಯಕ್ಷರು
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್