ಅಶೋಕ ಜನಮನದಲ್ಲಿ ಅವ್ಯವಸ್ಥೆಗೆ ರಾಜ್ಯಸರಕಾರ, ಗೃಹ ಇಲಾಖೆ, ಜಿಲ್ಲಾಡಳಿತ ಹೊಣೆ – ಬಿಜೆಪಿ ಆರೋಪ

0

ನೀರು, ಊಟಕೊಡದೆ ಕೂಡಿ ಹಾಕಿ ಮುಖ್ಯಮಂತ್ರಿ ಎದುರು ಶಕ್ತಿಪ್ರದರ್ಶನ – ದಯಾನಂದ ಶೆಟ್ಟಿ ಉಜಿರೆಮಾರು
ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು – ಸಂಜೀವ ಮಠಂದೂರು

ಪುತ್ತೂರು: ಅಶೋಕ ಜನಮನ ಕಾರ್ಯಕ್ರಮದಲ್ಲಿ ಕೇವಲ ರಾಜಕೀಯ ಲಾಭಕ್ಕಾಗಿ ಬಡ ಜನರನ್ನು ಕರೆಸಿ, ಅವರನ್ನು ಗೂಡಲ್ಲಿ ಕೂಡಿ ಹಾಕಿ ಹಿಂಸೆ ಕೊಟ್ಟದ್ದು ಬಿಟ್ರೆ ಬೇರೇನು ಇಲ್ಲ. ಇದರ ಜೊತೆಗೆ 13 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವುದು ಕಾರ್ಯಕ್ರಮದ ಅವ್ಯವಸ್ಥೆಯನ್ನು ಸೂಚಿಸುತ್ತದೆ. ಇದೊಂದು ಸ್ಟೇಟ್ ಇಶ್ಯೂ, ರಾಜ್ಯ ಸರಕಾರ, ಗೃಹ ಇಲಾಖೆ, ಜಿಲ್ಲಾಡಳಿತ ಇದಕ್ಕೆ ಹೊಣೆ ಎಂದು ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಮತ್ತು ಮಾಜಿ ಶಾಸಕ ಸಂಜೀವ ಮಠಂದೂರು ಬಿಜೆಪಿ ಕಚೇರಿಯಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದರು.


ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಮಾತನಾಡಿ, ಟ್ರಸ್ಟ್ ಮೂಲಕ ನಡೆಯುವ ಕಾರ್ಯಕ್ರಮಕ್ಕೆ ಒಂದೂವರೆ ತಿಂಗಳಿನಿಂದ ಲಕ್ಷ ಲಕ್ಷ ಜನ ಸೇರುತ್ತಾರೆ ಎಂದು ಮಾಧ್ಯಮದಲ್ಲಿ ಬಿತ್ತರಿಸಿರುವುದನ್ನು ಎಲ್ಲರೂ ಗಮನಿಸಿದ್ದಾರೆ. ಕ್ರೀಡಾಪಟುಗಳಿಗೆ ಉಪಯೋಗಿಸುವ ಕ್ರೀಡಾಂಗಣವನ್ನು ಹಾಳು ಮಾಡದ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿರುತ್ತದೆ. ಆದರೆ ನಿನ್ನೆ ನಡೆದ ಕಾರ್ಯಕ್ರಮ ಕ್ರೀಡಾ ಇಲಾಖೆಯ ಮೈದಾನದಲ್ಲಿ ಆಯೋಜನೆಯಾಗಿತ್ತು. ದೊಡ್ಡ ಕಾರ್ಯಕ್ರಮ ಮಾಡುವಾಗ ಆಯೋಜಕರು ಗಂಭೀರವಾಗಿ ಗಮನಿಸಬೇಕಾಗಿತ್ತು. ಪೊಲೀಸ್ ಇಲಾಖೆಯೂ ಅದನ್ನು ನೋಡಬೇಕಾಗಿತ್ತು. ಇದೆಲ್ಲವನ್ನು ಮೀರಿ ಮುಖ್ಯಮಂತ್ರಿಗಳು ಬಂದ ಸಂದರ್ಭ ಬಡಜನರು ಸೇರಿದ್ದರು. ವಸ್ತ್ರ ವಿತರಣೆಯ ಕಾರ್ಯಕ್ರಮದಲ್ಲಿ ಬೆಳಗ್ಗಿನಿಂದಲೇ ಜನ ಜಮಾಯಿಸಿದ್ದರು. ಅಲ್ಲಿ ಒಮ್ಮೆ ಒಳಗೆ ಹೋದವರಿಗೆ ಸರಿಯಾದ ವ್ಯವಸ್ಥೆಯೂ ಇರಲಿಲ್ಲ. ಬಂದವರಿಗೆ ನೀರು ನೀಡಿಲ್ಲ. ಊಟೋಪಚಾರವೂ ಸಮಯಕ್ಕೆ ಸರಿಯಾಗಿ ನೀಡದೆ ಬೆಳಿಗ್ಗೆ 9 ಗಂಟೆಗೆ ಬಂದವರನ್ನೆಲ್ಲ ಕೂಡಿ ಹಾಕಿ ಮುಖ್ಯಮಂತ್ರಿಗೆ ಶಕ್ತಿ ಪ್ರದರ್ಶನ ಮಾಡುವ ರೀತಿಯಲ್ಲಿ ಆಯೋಜನೆ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತದೆ ಎಂದು ಆರೋಪಿಸಿದರು.


ರಾಜಕೀಯ ರಹಿತ ಎಂದು ಹೇಳಿ ರಾಜಕೀಯ ಮಾತನಾಡಿದರು
ಎಲ್ಲರ ಭಾವನೆಯಲ್ಲಿ ರಾಜಕೀಯೇತರ ಕಾರ್ಯಕ್ರಮ ಎಂದು ಹೇಳಿ ನಿನ್ನೆ ಮಾತನಾಡಿದ್ದು ರಾಜಕೀಯವಾಗಿ. ಅದು ಕೂಡಾ ನರೇಂದ್ರ ಮೋದಿಯವರ ಕುರಿತು, ಪ್ರಮುಖರ ಬಗ್ಗೆ, ಮಾಜಿ ಶಾಸಕ ಸಂಜೀವ ಮಠಂದೂರು, ಪಕ್ಷದ ಪ್ರಮುಖ ಅರುಣ್ ಕುಮಾರ್ ಪುತ್ತಿಲರ ಬಗ್ಗೆ ಮಾತನಾಡುವ ಅವಶ್ಯಕತೆ ಅಲ್ಲೇನಿತ್ತು ಎಂದು ದಯಾನಂದ ಶೆಟ್ಟಿ ಉಜಿರೆಮಾರು ಪ್ರಶ್ನಿಸಿದರು.


ಜನ ಸತ್ರು ತೊಂದರೆ ಇಲ್ಲ ತನ್ನ ರಾಜಕೀಯ ಲಾಭಕ್ಕಾಗಿ ಮಾಡಿದ ಕಾರ್ಯಕ್ರಮ ಸ್ಪಷ್ಟ
ನಿನ್ನೆ ಆಗಿರುವ ಘಟನೆಯಿಂದ ಆಸ್ಪತ್ರೆಯಲ್ಲಿ ದಾಖಲಾದವರನ್ನು ನಾವು ಭೇಟಿ ಮಾಡಿ ಪರಿಶೀಲಿಸಿದ್ದೇವೆ. ಅಲ್ಲಿ ಸರಿಯಾದ ಇಂಟಿಮೇಷನ್ ಪೊಲೀಸ್ ಇಲಾಖೆಗೆ ಹೋಗಿಲ್ಲ. ಘಟನೆಯಲ್ಲಿ 3 ತಿಂಗಳ ಮಗು ನಾಲ್ಕು ಗಂಟೆ ಯಾರ್‍ಯಾರೋ ಕೈಯಲ್ಲಿ ಇರುವಂತೆ ಆಯಿತು. ದೇವಸ್ಥಾನದ ಸ್ಥಳವನ್ನು ಟ್ರಸ್ಟ್‌ಗೆ ಉಪಯೋಗಿಸಲಾಗಿತ್ತು. ನಿನ್ನೆ ಘಟನೆಗೆ ಯಾರು ಕಾರಣರು? ಜಿಲ್ಲಾಡಳಿತ ಇದನ್ನು ಗಮನಿಸಬೇಕು. ಇದಕ್ಕೆ ಪೂರಕವಾಗಿ ಎರಡು ಮೂರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಐಪಿಎಲ್‌ಗೆ ಸಂಬಂಧಿಸಿ ಆರ್‌ಸಿಬಿ ವಿಜಯೋತ್ಸವದಲ್ಲಿ ದೊಡ್ಡ ಮಟ್ಟದ ಅನಾಹುತ ಆಗಿತ್ತು. ಜನ ಪ್ರಶ್ನೆ ಮಾಡಲು ಪ್ರಾರಂಭಿಸಿದಾಗ ದಕ್ಷ ಅಧಿಕಾರಿಗಳನ್ನು ಅಮಾನತು ಮಾಡುವ ಮೂಲಕ ಅವರ ಸರಕಾರ ತೀಟೆಯನ್ನು ತೀರಿಸಿಕೊಂಡರು. ಇವತ್ತು ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಘಟನೆಯಲ್ಲಿ ಯಾರ ತಪ್ಪು? ಯಾರು ಇವರಿಗೆ ಅಧಿಕಾರ ಕೊಟ್ಟದ್ದು ಎಂದು ಜನ ಪ್ರಶ್ನಿಸುತ್ತಿದ್ದಾರೆ. 1 ಲಕ್ಷ ಜನ ಬರುತ್ತಾರೆ ಎಂದಾದರೆ 10 ಸಾವಿರ ಸೇರುವ ಸ್ಥಳದಲ್ಲಿ 1 ಲಕ್ಷ ಜನವನ್ನು ಹೇಗೆ ತುಂಬಿಸುವುದು. ಜನ ಸತ್ರು ತೊಂದರೆ ಇಲ್ಲ, ತನ್ನ ರಾಜಕೀಯ ಲಾಭಕ್ಕಾಗಿ ಈ ರೀತಿ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಪ್ರತಿ ವಿಚಾರದಲ್ಲೂ ಮಹಾಲಿಂಗೇಶ್ವರನ ದಯೆ ಎಂದು ಹೇಳುವ ಶಾಸಕರು ನಿನ್ನೆ ಮುಖ್ಯಮಂತ್ರಿಗಳನ್ನು ಮಹಾಲಿಂಗೇಶ್ವರ ದೇವರ ಸನ್ನಿಧಿಗೆ ಕರೆದೊಯ್ಯಬಹುದಿತ್ತಲ್ಲ. ಒಟ್ಟಿನಲ್ಲಿ ಕೇವಲ ರಾಜಕೀಯ ಲಾಭಕ್ಕಾಗಿ ಬಡ ಜನರನ್ನು ಕರೆಸಿ, ಅವರನ್ನು ಗೂಡಲ್ಲಿ ಕೂಡಿ ಹಾಕಿ ಹಿಂಸೆ ಕೊಟ್ಟದ್ದು ಬಿಟ್ರೆ ಬೇರೇನು ಕಾಣಿಸಿಲ್ಲ. ಈ ಕುರಿತು ಜನ ಶಾಪ ಇಟ್ಟು ಹೋಗುತ್ತಿದ್ದರು ಎಂದು ದಯಾನಂದ ಶೆಟ್ಟಿ ಉಜಿರೆಮಾರು ಹೇಳಿದರು.


ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು
ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ನಿನ್ನೆ ಮುಖ್ಯಮಂತ್ರಿಗಳು ಬಂದು ನಡೆದ ಕಾರ್ಯಕ್ರಮದ ಜಾಗ ಯುವಜನ ಮತ್ತು ಕ್ರೀಡಾ ಇಲಾಖೆಗೆ ಸೇರಿದ್ದು, ನಾನು ಶಾಸಕನಾಗಿದ್ದ ಸಂದರ್ಭ ತಾಲೂಕು ಕ್ರೀಡಾಂಗಣವನ್ನು ಕ್ರೀಡೆಗೆ ಮಾತ್ರ ಕೊಡಬೇಕು. ಬೇರೆ ಯಾವುದೇ ಉದ್ದೇಶಕ್ಕೆ ಕೊಡಬಾರದು ಎಂದು ತೀರ್ಮಾನ ಆಗಿತ್ತು. ಅದೇ ರೀತಿ ಅದು ನಡೆದುಕೊಂಡು ಬರುತ್ತಿತ್ತು. ಅಲ್ಲಿ ಹಾಕಿದ ಲಕ್ಷಾಂತರ ರೂಪಾಯಿ ಟ್ರ್ಯಾಕ್ ಕೆಟ್ಟು ಹೋಗುತ್ತದೆ. ಕ್ರೀಡಾಚಟುವಟಿಕೆಗೆ ಅಲ್ಲಿ ಸಮಸ್ಯೆ ಆಗುತ್ತದೆ ಎಂದು ಕ್ರೀಡೆಗೆ ಮಾತ್ರ ಕೊಡುವಂತೆ ಸರಕಾರದ ಉದ್ದೇಶವಾಗಿತ್ತು. ಇವತ್ತು ಆ ಕ್ರೀಡಾಂಗಣವನ್ನು ಒಂದು ಟ್ರಸ್ಟ್‌ಗೆ, ವೈಯುಕ್ತಿಕ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟವರು ಯಾರು? ಯುವಜನ ಕ್ರೀಡಾ ಇಲಾಖೆ ಅಥವಾ ಜಿಲ್ಲಾಧಿಕಾರಿಯವರು ಕೊಟ್ಟಿದ್ದಾರೋ? ಯಾರಾದರೂ ಕೊಟ್ಟಿದ್ದರೆ ಅವರು ಯಾವ ಕಂಡಿಷನ್ ಹಾಕಿ ಕೊಟ್ಟಿದ್ದಾರೆ? ಇವತ್ತು ಕಾರ್ಯಕ್ರಮ ಮಾಡುವಾಗ ಸರಕಾರ ಸಂಘ ಸಂಸ್ಥೆಗಳಿಗೆ ಕಂಡಿಷನ್ ಹಾಕಿದೆ. ಯಾವ ಜಾಗದಲ್ಲಿ ಎಷ್ಟು ಜನ ಸೇರಿದರೆ ಏನು ಮಾಡಬೇಕು. ಪುತ್ತೂರು ತಾಲೂಕಿನ ತಾಲೂಕು ಕ್ರೀಡಾಂಗಣದಲ್ಲಿ 10 ಸಾವಿರ ಚಯರ್ ಹಾಕಿದ್ದಾರೆ. 2 ಸಾವಿರ ರಿಸರ್ವ್ ಇಟ್ಟಿದ್ದರು. 10 ಸಾವಿರ ಚಯರ್ ಹಾಕಿ 1 ಲಕ್ಷ ಸೇರಿಸುವಾಗ ಈ ಪೊಲೀಸ್ ಇಲಾಖೆ ಎಲ್ಲಿತ್ತು? ಅನುಮತಿ ಕೊಟ್ಟವರು ಎಲ್ಲಿದ್ರು? ಪೊಲೀಸ್ ಇಲಾಖೆ ನಿಯಮ ಬಾಹಿರವಾಗಿ ನಡೆದುಕೊಂಡಿದೆ.

ಘಟನೆ ಆದ ಸಂದರ್ಭದಲ್ಲಿ 13 ಮಂದಿ ಸರಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅದರಲ್ಲಿ 2 ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕಡಬದ ಲೀಲಾವತಿ, ಬೆಳ್ಳಾರೆಯ ಬಿಪಾತುಮ್ಮ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭ ಚಿಕಿತ್ಸೆ ಪಡೆಯುತ್ತಿದ್ದರು. ಇನ್ನು ಕೆಲವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಒಂದು ಘಟನೆಯಾಗಿ ಹತ್ತಾರು ಜನರಿಗೆ ಗಾಯ ಆಗಿದೆ. ಸರಕಾರಿ ಆಸ್ಪತ್ರೆಯಿಂದ ಪೊಲೀಸ್ ಸ್ಟೇಷನ್‌ನಿಂದ ಇಂಟಿಮೇಷನ್ ಹೋಗಿದ್ಯಾ? ಚಿಕಿತ್ಸೆ ನೀಡುವ ಕುರಿತು ಜಿಲ್ಲಾಡಳಿತಕ್ಕೆ ತಿಳಿಸಿದ್ರಾ? ಎಫ್‌ಐಆರ್ ಆಗಿದ್ಯಾ? ಎಫ್‌ಐಆರ್ ಯಾರ ಮೇಲೆ ಆಗಿದೆ ಎಂಬೆಲ್ಲ ಪ್ರಶ್ನೆ ಮೂಡುತ್ತದೆ. ಯಾಕೆಂದರೆ ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದಲ್ಲಿ 11 ಮಂದಿ ಮರಣ ಹೊಂದಿದ ಘಟನೆಯನ್ನು ಜನರು ಪ್ರಶ್ನಿಸಿದಾಗ ಎಫ್‌ಐಆರ್ ಮಾಡಿದರು. ಒಂದಷ್ಟು ಪೊಲೀಸರನ್ನು ಅಮಾನತು ಮಾಡಿದ್ದರು. ಆದರೆ ಇಲ್ಲಿ ಜೀವ ಹೋಗಿಲ್ಲ. ಆದರೆ 13 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಇಲ್ಲಿ ಏನು ಕ್ರಮ ಕೈಗೊಳ್ಳಲಾಗಿದೆ? ಈ ಕಾರ್ಯಕ್ರಮ ಟ್ರಸ್ಟ್‌ಗೆ ಸಂಬಂಧಿಸಿದ್ದು, ದೇವಸ್ಥಾನದ ಜಾಗದಲ್ಲಿ ರಾಜಕೀಯ ಬ್ಯಾನರ್ ಅಳವಡಿಸಿದ್ದಾರೆ. ಅಮಾಯಕರು ಕಾರ್ಯಕ್ರಮದ ಮೂಲಕ ಆಸ್ಪತ್ರೆ ಸೇರುವ ಕೆಲಸ ಆಗಿದೆ. ಬೇರೆ ಬೇರೆ ಇಲಾಖೆಗಳು ಕಾನೂನು ಉಲ್ಲಂಘನೆ ಮಾಡುವ ಕೆಲಸ ಮಾಡಿದ್ಧಾರೆ. ಸರಕಾರ ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here